ಅಯ್ಯಪ್ಪ ಭಕ್ತರ ಕಾರಿಗೆ ಬೆಂಕಿ ಬಿದ್ದಾಗ ರಕ್ಷಣೆಗೆ ಬಂದ ಸಚಿವ ಯು.ಟಿ.ಖಾದರ್

ಈ ಸುದ್ದಿಯನ್ನು ಶೇರ್ ಮಾಡಿ

Khadar-Minister

ಮಂಗಳೂರು, ಜ.14- ಶಬರಿಮಲೆಯಿಂದ ಹಿಂದಿರುಗುತ್ತಿದ್ದ ಅಯ್ಯಪ್ಪ ಭಕ್ತರ ಕಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡು ಭಸ್ಮವಾದ ಘಟನೆ ನಿನ್ನೆ ರಾತ್ರಿ ನಡೆದಿದೆ. ಇದೇ ವೇಳೆ ಸ್ಥಳಕ್ಕಾಗಮಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರು, ಅವರ ರಕ್ಷಣೆಗೆ ಮುಂದಾಗಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಧಾರವಾಡದ ಕುಂದಗೋಳದ ಐವರು ಅಯ್ಯಪ್ಪ ಭಕ್ತರು ಕಾರಿನಲ್ಲಿ ವಾಪಸಾಗುತ್ತಿದ್ದ ವೇಳೆ ಪಂಪ್‍ವೆಲ್-ನಂತೂರ್ ಸರ್ಕಲ್ ಬಳಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಇದೇ ವೇಳೆ ಮುಂಬೈನಿಂದ ವಿಮಾನದಲ್ಲಿ ಬಂದಿಳಿದ ಸಚಿವ ಖಾದರ್ ಅವರು ಬೋಳಿಯಾರ್ನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರು.

ಬೆಂಕಿ ಕಂಡ ಕೂಡಲೇ ಕಾರು ನಿಲ್ಲಿಸಿದ ಸಚಿವರು ತಮ್ಮ ಕಾರಿನಲ್ಲಿದ್ದ ನೀರು ತಂದು ಬೆಂಕಿ ನಂದಿಸಲು ಯತ್ನಿಸಿದ್ದಾರೆ ಮಾತ್ರವಲ್ಲದೆ ಮಣ್ಣನ್ನು ಬೆಂಕಿಗೆ ಎಸೆದು ತಹಬದಿಗೆ ತರಲು ಪ್ರಯತ್ನಿಸಿದ್ದಾರೆ. ಕೂಡಲೇ ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ಅವರು ಸ್ಥಳಕ್ಕೆ ಬರುವಷ್ಟರಲ್ಲಿ ಕಾರು ಸಂಪೂರ್ಣ ಭಸ್ಮವಾಗಿತ್ತು. ಸಚಿವರು ಮತ್ತು ಕಾರಿನಲ್ಲಿದ್ದವರು ಅಯ್ಯಪ್ಪ ಭಕ್ತರ ವಸ್ತುಗಳನ್ನು ಹೊರಗೆಳೆದು ಹಾಕಿದ್ದರು. ಇಷ್ಟು ಮಾತ್ರವಲ್ಲದೆ ಭಕ್ತರಿಗೆ ಊಟದ ವ್ಯವಸ್ಥೆ ಕಲ್ಪಿಸಿ ಪ್ರಯಾಣ ಮುಂದುವರಿಸಲು ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಟಿಕೆಟ್ ದೊರಕಿಸಿಕೊಟ್ಟು ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ಘಟನೆ ಸಂದರ್ಭದಲ್ಲಿ ಖಾದರ್ ಅವರೊಂದಿಗೆ ದೀಪಕ್ ಪಿಲಾರ್, ಸುರೇಶ್ ಶಕ್ತಿ, ಜೋಸೆಫ್, ಪೀಯುಸ್, ಎನ್.ಎಸ್.ಕರಿ, ಸಿರಾಜ್ ಕೀನ್ಯ, ರಫೀಕ್, ಅಂಬ್ಲಿ ಮೊಗರ್ ಮತ್ತು ಆಪ್ತ ಸಹಾಯಕ ಲಿಜ್ಜತ್ ಅವರಿದ್ದು, ಬೆಂಕಿ ನಂದಿಸಲು ನೆರವಾದರು. ಸಚಿವ ಖಾದರ್ ಅವರು ಈ ಹಿಂದೆಯೂ ಅಪಘಾತವಾದ ಸಂದರ್ಭದಲ್ಲಿ ಬೆಂಗಳೂರು ಹಾಗೂ ಇತರೆಡೆ ತಾವೇ ಖುದ್ದು ನೆರವಾಗುವ ಕಾರ್ಯಗಳನ್ನು ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin