ಅಯ್ಯೋ..ನಮ್ಮ ಗೋಳು ಕೇಳುವವರು ಯಾರೂ ಇಲ್ವೇ..?

ಈ ಸುದ್ದಿಯನ್ನು ಶೇರ್ ಮಾಡಿ

Protest--02

ಬೆಂಗಳೂರು, ಫೆ.7-ಕೇವಲ ನಲವತ್ತು ರೂಪಾಯಿಗಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಗೋಳು ಕೇಳುವವರು ಯಾರೂ ಇಲ್ಲವೇ? ಚಳಿಯಲ್ಲಿ ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿದ್ದೇವೆ. ಬೆಳಗ್ಗೆ ಸರ್ಕಾರದ ವಿರುದ್ಧ ರ್ಯಾಲಿ ನಡೆಸಲು ಮುಂದಾದರೆ ಪೊಲೀಸರ ಬಲ ಪ್ರಯೋಗದಿಂದ ನಮ್ಮನ್ನು ತಡೆದು ನಿಲ್ಲಿಸಿದ್ದಾರೆ. ನಾವು ಮಾಡಿದ್ದಾದರೂ ಏನು, ಕನಿಷ್ಠ ಕೂಲಿ ಕೇಳುವುದು ತಪ್ಪೇ ಎಂದು ಬಿಸಿಯೂಟ ಯೋಜನೆ ಕಾರ್ಯಕರ್ತೆಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ನಿನ್ನೆಯಿಂದ ಕನಿಷ್ಠ ವೇತನಕ್ಕಾಗಿ ಆಗ್ರಹಿಸಿ ನಗರದ ಫ್ರೀಡಂ ಪಾರ್ಕ್ ಬಳಿ ನಡೆಸುತ್ತಿರುವ ಬಿಸಿಯೂಟ ಯೋಜನೆ ಕಾರ್ಯಕರ್ತೆಯರ ಪ್ರತಿಭಟನೆ ತೀವ್ರಗೊಂಡಿದೆ.

ದಾವಣಗೆರೆ ಜಿಲ್ಲೆ ಹರಪನಹಳ್ಳಿಯ ಬಿಸಿಯೂಟದ ಸಿಬ್ಬಂದಿ ವಿಶಾಲಮ್ಮ ಎಂಬುವರು ತೀವ್ರ ಅಸ್ವಸ್ಥರಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನು ಹಲವು ಪ್ರತಿಭಟನಾನಿರತರು ಕೂಡ ನಿತ್ರಾಣಗೊಂಡಿದ್ದು ಅವರಿಗೆ ಸ್ಥಳದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.   ಊಟ, ನಿದ್ದೆಯಿಲ್ಲದೆ ಬಳಲಿರುವ ಹೋರಾಟಗಾರರು ನಮ್ಮ ಸಮಸ್ಯೆಗೆ ಮುಖ್ಯಮಂತ್ರಿಯವರೇ ಲಿಖಿತ ರೂಪದಲ್ಲಿ ಉತ್ತರನೀಡುವವರೆಗೂ ಹೋರಾಟ ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಬ್ಯಾರಿಕೇಡ್‍ಗಳನ್ನು ತಳ್ಳಿ ಪ್ರತಿಭಟನೆ ನಡೆಸಲು ಮುಂದಾದ ಕಾರ್ಯಕರ್ತರನ್ನು ಪೊಲೀಸರು ಬಲವಂತವಾಗಿ ತಡೆದಿದ್ದಾರೆ. ಪ್ರತಿಭಟನಾ ನಿರತ ಕಾರ್ಯಕರ್ತರು ಸರ್ಕಾರದ ವಿರುದ್ಧ ಹರಿಹಾಯ್ದು ಕನಿಷ್ಠ ವೇತನ ಜಾರಿಗೊಳಿಸುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಆಗ್ರಹಿಸಿದ್ದಾರೆ.
ತಮಿಳುನಾಡು ಮಾದರಿಯಲ್ಲಿ ನಮ್ಮ ನೌಕರಿಯನ್ನು ಖಾಯಂಗೊಳಿಸಬೇಕು. ಇಎಸ್‍ಐ, ಭವಿಷ್ಯ ನಿಧಿ ಹಾಗೂ ಗ್ರಾಚ್ಯುಯಿಟಿ ಸೌಲಭ್ಯ ನೀಡಬೇಕು. 26 ವಾರಗಳ ಸಂಬಳ ಸಹಿತ ಹೆರಿಗೆ ರಜಾ ನೀಡಬೇಕು. ಕರ್ತವ್ಯದಲ್ಲಿದ್ದಾಗ ದುರ್ಮರಣಕ್ಕೀಡಾದವರಿಗೆ 2 ಲಕ್ಷ ರೂ.ಗಳ ಪರಿಹಾರ ಒದಗಿಸಬೇಕು. ಒಂದು ಲಕ್ಷದವರೆಗೆ ಆರೋಗ್ಯ ವಿಮೆ, ನಿಗದಿತ ಸಮಯಕ್ಕೆ ಭತ್ಯೆ, ಸಂಬಳ ಸಹಿತ ರಜೆ ಒದಗಿಸುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕೆಂದು ಅವರು ಆಗ್ರಹಿಸಿದರು.

ಅಕ್ಷರ ದಾಸೋಹ ಬಿಸಿಯೂಟ ತಯಾರಕರ ನೇತೃತ್ವದಲ್ಲಿ ನಿನ್ನೆ ಬೆಳಗ್ಗೆಯಿಂದ ಧರಣಿ ಆರಂಭಿಸಲಾಗಿತ್ತು. ಸಂಜೆಯಾಗುತ್ತಿದ್ದಂತೆ ಯಾರೊಬ್ಬರೂ ಮನೆಗಳಿಗೆ ವಾಪಸ್ಸಾಗದೆ ಅಕ್ಕಪಕ್ಕದ ರಸ್ತೆ ಬದಿಗಳಲ್ಲಿ ಹಾಗೂ ಫುಟ್‍ಪಾತ್‍ಗಳಲ್ಲಿ ಮಲಗಿ ಧರಣಿ ಮುಂದುವರೆಸಿದ್ದೇವೆ. ಚಳಿಯಲ್ಲೇ ಕಾಲ ಕಳೆದಿದ್ದೇವೆ. ಕಸದ ರಾಶಿ ಮತ್ತು ಶೌಚಾಲಯ ಪಕ್ಕದಲ್ಲೇ ರಾತ್ರಿ ಕಳೆದಿದ್ದೇವೆ. ಸರ್ಕಾರ ನಮ್ಮ ಗೋಳು ಕೇಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಂಬಂಧಿಸಿದ ಸಚಿವರು ಬಿಸಿಯೂಟ ನೌಕರರ ಸಂಘದ ಮುಖಂಡರೊಂದಿಗೆ ಮಾತುಕತೆ ಪ್ರಯತ್ನ ನಡೆಸಿದರಾದರೂ ಈವರೆಗೆ ಯಾವುದೇ ಫಲ ನೀಡಿಲ್ಲ.   ನಿನ್ನೆ ಸಚಿವ ತನ್ವೀರ್‍ಸೇಠ್ ಅವರು ಪ್ರತಿಭಟನಾಕಾರರನ್ನು ಭೇಟಿಯಾಗಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರಲ್ಲದೆ, ಅಧಿವೇಶನ ಮುಗಿಯುವವರೆಗೆ ತಾಳ್ಮೆಯಿಂದ ಇರಿ ಎಂದು ಹೇಳಿದ್ದರು. ಇದಕ್ಕೆ ಪ್ರತಿಭಟನಾನಿರತರು ಸೊಪ್ಪು ಹಾಕಿಲ್ಲ.  ಪ್ರತಿಬಾರಿ ಭರವಸೆಗಳನ್ನು ಕೇಳಿ ಸಾಕಾಗಿದೆ. ಬೇಡಿಕೆಗಳು ಈಡೇರುವವರೆಗೂ ನಾವು ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಸಂಘದ ಮುಖಂಡರಾದ ಎ.ಚಂದ್ರು ಹೇಳಿದ್ದಾರೆ. ಇಂದೂ ಕೂಡ ಪ್ರತಿಭಟನೆ ಮುಂದುವರೆದಿದೆ.

Facebook Comments

Sri Raghav

Admin