ಅರಣ್ಯ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ : ತನಿಖೆ ನಡೆಸಲು ಶೆಟ್ಟರ್ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

JagadishSession--01

ಬೆಂಗಳೂರು, ಜೂ.14-ಅರಣ್ಯ ಇಲಾಖೆ ಸಸಿ ನೆಡುವ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಸಮಗ್ರ ತನಿಖೆ ಆಗಬೇಕು ಎಂದು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ವಿಧಾನಸಭೆಯಲ್ಲಿಂದು ಒತ್ತಾಯಿಸಿದರು.  ಇಲಾಖೆ ಬೇಡಿಕೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹುಬ್ಬಳ್ಳಿ ವಲಯವೊಂದರಲ್ಲೇ 6 ಕೋಟಿ ರೂ.ನಷ್ಟು ಭ್ರಷ್ಟಾಚಾರ ನಡೆದಿದೆ. ರಾಜ್ಯಾದ್ಯಂತ ಸಸಿ ನೆಡುವ ಬಗ್ಗೆ ಹೆಚ್ಚು ಭ್ರಷ್ಟಾಚಾರ ನಡೆದಿದ್ದು, ಅಂದಾಜು ಮಾಡಲಾಗುವುದಿಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ರಾಜ್ಯಸರ್ಕಾರಕ್ಕೆ ನಾಲ್ಕು ವರ್ಷ ತುಂಬಿದರೂ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ವ್ಯಾಪಕ ಭ್ರಷ್ಟಾಚಾರವು ಮರಳಿನ ಹೆಸರಿನಲ್ಲಿ ನಡೆಯುತ್ತಿದೆ. ಸಾರ್ವಜನಿಕರಿಗೆ ಯೋಗ್ಯದರದಲ್ಲಿ ಮರಳು ಸಿಗುತ್ತಿಲ್ಲ. ಮರಳು ಮಾಫಿಯಾ ತಡೆಯಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಮರಳು ಮಾಫಿಯಾದವರೇ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆಗಳು ನಡೆದಿವೆ ಎಂದು ಆರೋಪಿಸಿದರು.  ಗ್ರಾಮೀಣ ಭಾಗದ ಜನರಿಗೆ ಮನೆ ನೀಡುವ ವಿಚಾರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ತನಿಖೆ ನಡೆಸುವಂತೆ ಒತ್ತಾಯಿಸಿದರು.

ಹುತಾತ್ಮ ಯೋಧ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಅವರ ಹೆಸರನ್ನು ದೊಡ್ಡ ಬೊಮ್ಮಸಂದ್ರದ ಪ್ರಮುಖರಸ್ತೆಯೊಂದಕ್ಕೆ ನಾಮಕರಣ ಮಾಡಲು ಬಿಬಿಎಂಪಿ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಆದರೆ ಅವರ ಹೆಸರನ್ನು ನಾಮಕರಣ ಮಾಡದೆ ಅವಮಾನ ಮಾಡಲಾಗಿದೆ ಎಂದು ಟೀಕಿಸಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಕೃಷಿ ಸಚಿವ ಕೃಷ್ಣಭೈರೇಗೌಡ, ಉದ್ದೇಶಿತ ರಸ್ತೆಗೆ ಈಗಾಗಲೇ ಸ್ವಾತಂತ್ರ್ಯ ಯೋಧರ ಹೆಸರನ್ನು ನಾಮಕರಣ ಮಾಡಲಾಗಿದ್ದು, ಬದಲಿಯಾಗಿ ಸೂಕ್ತ ರಸ್ತೆಗೆ ನಿರಂಜನ್ ಅವರ ಹೆಸರು ನಾಮಕರಣ ಮಾಡಲಾಗುವುದು. ಈಗಾಗಲೇ ದೊಡ್ಡ ಬೊಮ್ಮಸಂದ್ರದ ಮೇಲ್ಸೇತುವೆಗೆ ನಿರಂಜನ್ ಅವರ ಹೆಸರು ನಾಮಕರಣ ಮಾಡಿದ್ದು, ಮುಖ್ಯಮಂತ್ರಿಯವರೇ ಇದನ್ನು ಉದ್ಘಾಟಿಸಿದ್ದಾರೆ ಎಂದು ತಿಳಿಸಿದರು. ಮಾತು ಮುಂದುವರೆಸಿದ ಜಗದೀಶ್‍ಶೆಟ್ಟರ್ ಕಂದಾಯ ಇಲಾಖೆಯಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರೆ ವಾಸ್ತವಾಂಶ ಬೆಳಕಿಗೆ ಬರಲಿದೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin