ಅರಣ್ಯ ಪ್ರದೇಶಾಭಿವೃದ್ಧಿಯಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ : ರಮಾನಾಥ ರೈ

ಈ ಸುದ್ದಿಯನ್ನು ಶೇರ್ ಮಾಡಿ

Ramanath

ಬೆಂಗಳೂರು, ಸೆ.11-ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಅರಣ್ಯ ಪ್ರದೇಶಾಭಿವೃದ್ಧಿಯಲ್ಲಿ ಅಗ್ರ ಸ್ಥಾನದಲ್ಲಿದೆ ಎಂದು ಅರಣ್ಯ ಸಚಿವ ರಮಾನಾಥ ರೈ ತಿಳಿಸಿದರು. ಅರಣ್ಯ ಭವನದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಹುತಾತ್ಮರಾದ ಅರಣ್ಯ ಸಿಬ್ಬಂದಿಗಳಿಗೆ ಗೌರವ ಸಲ್ಲಿಸಿ ಮಾತನಾಡಿದರು.   ಇತ್ತೀಚೆಗೆ ರಾಜ್ಯದಲ್ಲಿನ ಅರಣ್ಯ ಪ್ರದೇಶ ಸಾಕಷ್ಟು ಅಭಿವೃದ್ದಿಯಾಗಿದೆ. ಈ ಬಗ್ಗೆ ಫಾರೆಸ್ಟ್ ಸರ್ವೆ ಆಫ್ ಇಂಡಿಯ ವರದಿ ನೀಡಿದ್ದು, ಅದರಂತೆ ರಾಜ್ಯದಲ್ಲಿ 28,900 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ಅಭಿವೃದ್ದಿಯಾಗಿದೆ. ದೇಶದ ಇತರೆ ರಾಜ್ಯಗಳಿಗಿಂತ ಕರ್ನಾಟಕದ ಅರಣ್ಯ ಪ್ರದೇಶಾಭಿವೃದ್ದಿ ವೇಗವಾಗಿ ನಡೆಯುತ್ತಿದೆ ಎಂದು ವಿವರಿಸಿದರು.

ರಾಜ್ಯದಲ್ಲಿನ ಅರಣ್ಯ ಸಂರಕ್ಷಣೆಗೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಅದರಲ್ಲೂ ಪ್ರಮುಖವಾಗಿ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಅರಣ್ಯ ಸಂರಕ್ಷಣೆಗೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.  ರಾಜ್ಯದಲ್ಲಿ ನಿಗದಿತ ಪ್ರಮಾಣಕ್ಕಿಂತ ಅರಣ್ಯಪ್ರದೇಶ ಕಡಿಮೆಯಾಗಿತ್ತು. ಇದರಲ್ಲಿ ಸಮತೋಲನ ಕಂಡುಕೊಳ್ಳಲು ಸರ್ಕಾರ ಅರಣ್ಯ ಸಂರಕ್ಷಣೆಗೆ ಆದ್ಯತೆ ನೀಡಿದ್ದಲ್ಲದೆ ಅಗತ್ಯ ಕ್ರಮಗಳನ್ನು ಕೈಗೊಂಡು ಪ್ರತಿ ವರ್ಷ ಅರಣ್ಯ ಪ್ರದೇಶಾಭಿವೃದ್ದಿಗೆ ಹೆಚ್ಚಿನ ಕಾಳಜಿ ವಹಿಸುತ್ತಿದೆ. ಇದರ ಪರಿಣಾಮ ಇಂದು ದೇಶದಲ್ಲೇ ಮೈಲಿಗಲ್ಲಾಗುವಂತಹ ರೀತಿಯಲ್ಲಿ ಬೆಳವಣಿಗೆ ಸಾಧಿಸಲಾಗಿದೆ ಎಂದು ಅಭಿಪ್ರಾಯಪಟ್ಟರು.

ಅರಣ್ಯ ಪ್ರದೇಶಗಳಲ್ಲಿ 25 ವರ್ಷಕ್ಕೂ ಹೆಚ್ಚು ಕಾಲ ವಾಸ ಮಾಡುತ್ತಿದ್ದವರಿಗೆ ಒತ್ತುವರಿ ತೆರವು ಸಂದರ್ಭದಲ್ಲಿ ಪುನರ್ವಸತಿ ಕಲ್ಪಿಸಲಾಗುತ್ತಿದೆ. ಅರಣ್ಯ ಅಭಿವೃದ್ದಿ ದೃಷ್ಟಿಯಿಂದ ಒತ್ತುವರಿ ತೆರವು ಅನಿವಾರ್ಯ. ಆದರೆ ಸುದೀರ್ಘಾವಧಿಯಿಂದ ಅಲ್ಲೇ ವಾಸ ಮಾಡುತ್ತಿರುವವರಿಗೆ ವ್ಯವಸ್ಥೆ ಕಲ್ಪಿಸುವ ಜೊತೆಗೆ ಇಲಾಖೆ ಕ್ರಮ ಕೈಗೊಂಡು ಕರ್ತವ್ಯ ನಿರ್ವಹಣೆ ವೇಳೆ ಮರಣ ಹೊಂದಿದವರಿಗೆ ಅನುಕಂಪದ ಆಧಾರದ ಮೇಲೆ ಅರಣ್ಯ ಇಲಾಖೆಯಲ್ಲಿ ಕೆಲಸ ನೀಡಲಾಗುತ್ತದೆ. ಒಂದು ವೇಳೆ ಅರಣ್ಯ ಇಲಾಖೆಯಲ್ಲಿ ಅವಕಾಶವಿಲ್ಲದಿದ್ದರೆ ಬೇರೆ ಇಲಾಖೆಗಳಲ್ಲಿ ಕೆಲಸ ನೀಡಲಾಗುವುದು ಎಂದರು.

ಮೃತಪಟ್ಟವರಿಗೆ ಈ ಮೊದಲು ನೀಡುತ್ತಿದ್ದ 5 ಲಕ್ಷ ಪರಿಹಾರ ಧನವನ್ನು 10 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಕುದುರೆಮುಖ ಅರಣ್ಯ ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲು ಸ್ಥಳೀಯರ ವಿರೋಧವಿದೆ. ಆದರೆ ಕೇಂದ್ರ ಸರ್ಕಾರ ಈಗಾಗಲೇ ಈ ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲು ಅನುಮತಿ ನೀಡಿದೆ.   ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರ ವಿರೋಧ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಅವರ ಮನವೊಲಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.  ಅರಣ್ಯ ಇಲಾಖೆಯ ಅಪರ ಸಂರಕ್ಷಣಾಧಿಕಾರಿ ವಿಜಯಭಾಸ್ಕರ್ ಮತ್ತು ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin