ಅರಣ್ಯ ಪ್ರೋತ್ಸಾಹ ಯೋಜನೆಯ ಫಲಾನುಭವಿಗಳ ಪ್ರೋತ್ಸಾಹ ಧನ 45 ರಿಂದ 100ರೂ.ಗೆ ಹೆಚ್ಚಳ

ಈ ಸುದ್ದಿಯನ್ನು ಶೇರ್ ಮಾಡಿ

Ramanath-Rain

ಹುಣಸೂರು, ಫೆ.23– ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯ ಫಲಾನುಭವಿಗಳಿಗೆ ನೀಡುತ್ತಿದ್ದ 45ರೂ. ಪ್ರೋತ್ಸಾಹ ಧನವನ್ನು 100 ರೂ.ಗಳಿಗೆ ಹೆಚ್ಚಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ ಎಂದು ರಾಜ್ಯ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಸಚಿವ ಬಿ.ರಮಾನಾಥ್ ರೈ ತಿಳಿಸಿದರು.  ಅರಣ್ಯ ಇಲಾಖೆ (ಪ್ರಾದೇಶಿಕ ವಿಭಾಗ, ಹುಣಸೂರು) ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಹೆಬ್ಬೇವು ಕೃಷಿ ಕುರಿತು ರೈತರಲ್ಲಿ ಅರಿವು ಮೂಡಿಸುವ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಕೃತಿಕ ಸಮತೋಲನ ಕಾಪಾಡಲು ಅರಣ್ಯ ರಕ್ಷಣೆ ಅನಿವಾರ್ಯವಾಗಿದೆ.

ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಏಳು ವರ್ಷಗಳ ಹಿಂದೆ ಜಾರಿಗೊಂಡಿದ್ದ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ರೈತರಿಗೆ ಮೂರು ವರ್ಷಕ್ಕೆ ನೀಡುತ್ತಿದ್ದ 45 ರೂ.ಗಳನ್ನು 100 ರೂ.ಗಳಿಗೆ ಹೆಚ್ಚಿಸಲಾಗುವುದು. ರಾಜ್ಯದಲ್ಲಿ ಅರಣ್ಯ ರಕ್ಷಣೆ ಕಾಯ್ದೆ ಮತ್ತು ವನ್ಯಜೀವಿ ಸ್ವರಕ್ಷಣಾ ಕಾಯ್ದೆ ಜಾರಿಗೊಂಡ ನಂತರ ಅರಣ್ಯ ಹನನ ಹಾಗೂ ವನ್ಯಜೀವಿಗಳ ಹನನ ಕಾರ್ಯ ಕಡಿಮೆಯಾಗಿದೆ. ರಾಜ್ಯದಲ್ಲಿ 6000 ಆನೆಗಳಿವೆ. 400ಕ್ಕೂ ಹೆಚ್ಚು ಹುಲಿಗಳಿವೆ. ಈ ಎಲ್ಲ ಕಾಯ್ದೆಗಳ ಸಮರ್ಪಕ ಜಾರಿಯಿಂದಾಗಿಯೇ ವನ್ಯಜೀವಿಗಳ ಸಂಖ್ಯೆ ಹೆಚ್ಚಲು ಕಾರಣ ಎಂದರು. ಕಾಡಿನ ರಕ್ಷಣೆ ನಿಟ್ಟಿನಲ್ಲಿ ಅರಣ್ಯದ ಗಡಿಭಾಗದಲ್ಲಿ ಇಕೋ ಸೆನ್ಸಿಟಿವ್ ಝೋನ್ ಗುರುತಿಸುವ ಕಾರ್ಯ ಶೀಘ್ರದಲ್ಲಿ ನಡೆಯಲಿದೆ.

ವನ್ಯಜೀವಿ-ಮಾನವ ಸಂಘರ್ಷದಲ್ಲಿ ಮರಣ ಹೊಂದಿದ ಕುಟುಂಬಕ್ಕೆ 5 ಲಕ್ಷ ರೂ., ಶಾಶ್ವತ ಅಂಗವಿಕಲರಿಗೆ 5 ಲಕ್ಷ ರೂ., ಹಾಗೂ ಭಾಗಶಃ ಅಂಗವಿಕಲತೆಗೆ 2.5 ಲಕ್ಷ ರೂ.ಗಳನ್ನು ನೀಡಲಾಗುವುದೆಂದರು. ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಬರೆದ ತಂಬಾಕು ಬಿಟ್ಟಾಕಿ ಹೆಬ್ಬೇವು ಬೆಳೆದೆವು ಪುಸ್ತಕವನ್ನು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಬಿಡುಗಡೆಗೊಳಿಸಿದರು. ಶಾಸಕ ಎಚ್.ಪಿ.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷೆ ನಹೀಮಾ ಸುಲ್ತಾನ್, ಸದಸ್ಯೆ ಡಾ.ಪುಷ್ಪಾ ಅಮರನಾಥ್, ಸಾವಿತ್ರಮ್ಮ ಮಂಜು, ತಾಪಂ ಅಧ್ಯಕ್ಷೆ ಪದ್ಮಮ್ಮ ಬಸವರಾಜು, ನಗರಸಭಾಧ್ಯಕ್ಷ ಕೆ.ಲಕ್ಷ್ಮಣ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್.ಎಸ್.ಸುರೇಶ್, ಅಪರ ಪ್ರ.ಮು.ಅರಣ್ಯ ಸಂರಕ್ಷಣಾಧಿಕಾರಿ ಪುನಾತಿ ಶ್ರೀಧರ್, ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ದಿಲೀಪ್ ಕುಮಾರ್ ದಾಸ್, ನಾಗರಹೊಳೆ ಅರಣ್ಯ ಸಂರಕ್ಷಣಾಧಿಕಾರಿ ಮಣಿಕಂಠನ್, ಹುಣಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ.ಬಾಲಚಂದ್ರ, ಸ್ಪೂರ್ತಿ ಸಂಸ್ಥೆಯ ಎ.ಆರ್. ಸುಧಾಮಣಿ ಹಾಗೂ ಹೆಬ್ಬೇವು ಕೃಷಿಕರು ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin