ಅರಣ್ಯ ಸಂಪತ್ತಿನ ಸಂರಕ್ಷಣೆ ವೇಳೆ ಹುತಾತ್ಮರಾದ ಸಿಬ್ಬಂದಿಗಳ ಮಕ್ಕಳಿಗೆ ವಿದ್ಯಾರ್ಥಿ ವೇತನ

ಈ ಸುದ್ದಿಯನ್ನು ಶೇರ್ ಮಾಡಿ

Forest--01

ಬೆಂಗಳೂರು, ಸೆ.11- ಅರಣ್ಯ ಸಂಪತ್ತಿನ ಸಂರಕ್ಷಣೆ ವೇಳೆ ಹುತಾತ್ಮರಾದ ಅರಣ್ಯ ಇಲಾಖೆ ಸಿಬ್ಬಂದಿಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಈ ವರ್ಷದಿಂದ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ಅರಣ್ಯ ಸಚಿವ ರಮಾನಾಥ್‍ರೈ ತಿಳಿಸಿದರು. ನಗರದ ಅರಣ್ಯ ಭವನದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಪ್ರಾಣವನ್ನು ಅರ್ಪಿಸಿದ ಸಿಬ್ಬಂದಿಯ ಕಾರ್ಯವೈಖರಿ ಯುವ ಪೀಳಿಗೆಗೆ ಸ್ಫೂರ್ತಿಯಾಗಿದೆ. ನೈಸರ್ಗಿಕ ಸಂಪನ್ಮೂಲ ಮತ್ತು ವನ್ಯಜೀವಿಗಳ ಸಂರಕ್ಷಣೆಯಲ್ಲಿ ಅನೇಕ ಸಿಬ್ಬಂದಿ ಹುತಾತ್ಮರಾಗಿದ್ದು, ಅವರ ನೆನಪು ನಮ್ಮಲ್ಲಿ ಅಚ್ಚಹಸಿರಾಗಿ ಉಳಿದಿದೆ ಎಂದರು.

Forest--02

ಕಾಡುಗಳ್ಳ ವೀರಪ್ಪನ್‍ನನ್ನು 2004, ಅಕ್ಟೋಬರ್ 18 ರಂದು ಹತ್ಯೆ ಮಾಡಿದ ನಂತರ ಅರಣ್ಯ ಸಿಬ್ಬಂದಿಗಳಿಗೆ ಕೆಲಸ ಮಾಡಲು ಸ್ಫೂರ್ತಿ ಸಿಕ್ಕಿದೆ. 50 ವರ್ಷಗಳಿಂದಲೂ ಅಮೂಲ್ಯ ಸಂಪತ್ತನ್ನು, ವನ್ಯಜೀವಿಗಳನ್ನು ರಕ್ಷಿಸಲು ಅರಣ್ಯ ಸಿಬ್ಬಂದಿಗಳು ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯ ಹುತಾತ್ಮ ಸಿಬ್ಬಂದಿಗಳ ಸ್ಮರಣಾರ್ಥ ಹುತಾತ್ಮ ದಿನಾಚರಣೆ ಹಮ್ಮಿಕೊಂಡಿದ್ದೇವೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಈ ದಿನಾಚರಣೆ ನಡೆಯುತ್ತಿದೆ ಎಂದು ಹೇಳಿದರು.

ಹುತಾತ್ಮರಾದವರ ಕುಟುಂಬಗಳಿಗೆ ನೆರವಾಗಲು ಅರಣ್ಯ ಹುತಾತ್ಮ ದಿನಾಚರಣೆ ಸಮಿತಿ ಸುಮಾರು 20 ಲಕ್ಷಗಳವರೆಗೂ ನಿಧಿ ಸಂಗ್ರಹಿಸಿದೆ. ಇದನ್ನು ಹುತಾತ್ಮ ಕುಟುಂಬಗಳ ಏಳಿಗೆಗೆ ಬಳಸಲು ತೀರ್ಮಾನಿಸಲಾಗಿದೆ. ಹುತಾತ್ಮರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೌಢಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ಈ ವರ್ಷದಿಂದ ವಿದ್ಯಾರ್ಥಿ ವೇತನ ನೀಡಲು ತೀರ್ಮಾನಿಸಲಾಗಿದೆ ಎಂದರು. ಇಲಾಖೆಯ ದಿವಂಗತ ಪಿ.ಶ್ರೀನಿವಾಸ್ ಹಾಗೂ ಇತರ ಹುತಾತ್ಮ ಅಧಿಕಾರಿಗಳು, ಸಿಬ್ಬಂದಿ ಕುರಿತಾದ ಕಾನನರ ಸೇನಾನಿಗಳು, ಚಿತ್ರದ ಆಡಿಯೋ ಶೀರ್ಷಿಕೆ ಸಿದ್ಧವಾಗಿದೆ. ಇದೇ ಹೆಸರಿನಲ್ಲಿ ಚಿತ್ರ ತಯಾರಿಸಲು ಸುಮಾರು 50 ಲಕ್ಷ ರೂ. ಅಗತ್ಯವಿದೆ. ಅದನ್ನು ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಅರಣ್ಯ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ ಎಂದರು.

1970ರ ಸೆ.11 ರಂದು ಜೋಧ್‍ಪುರದ ಮಹಾರಾಜ ಅಭಯ್‍ಸಿಂಗ್ ಹಾಗೂ ಸೈನಿಕರು ಕೆಜೆರ್ಲಿ ಮರಗಳನ್ನು ಮನೆ ನಿರ್ಮಾಣಕ್ಕೆ ಕಡಿಯಲು ಮುಂದಾಗಿದ್ದರು. ಇದನ್ನು ವಿರೋಧಿಸಿದ ಸ್ಥಳೀಯರು ಬಿಸ್ನೋಯಿ ಸಮುದಾಯದ ಸುಮಾರು 360 ಮಂದಿಯನ್ನು ಹತ್ಯೆ ಮಾಡಿದ್ದರು. ಅಂದು ಅವರನ್ನು ಅರಣ್ಯ ಇಲಾಖೆಯ ಹುತಾತ್ಮರೆಂದು ಘೋಷಿಸಲಾಯಿತು ಎಂದು ಹೇಳಿದರು. ಭಾರತೀಯ ಅರಣ್ಯ ಸೇವೆ ಅಧಿಕಾರಿಯಾಗಿ ಉಪಅರಣ್ಯ ಸಂರಕ್ಷಣಾಧಿಕಾರಿಯಾಗಿ ಬಿ.ಶ್ರೀನಿವಾಸ್ ಅವರು 1991, ನವೆಂಬರ್ 10 ರಂದು ವೀರಪ್ಪನ್ ನಯವಂಚನೆಯ ಚಕ್ರವ್ಯೂಹದೊಳಗೆ ಸಿಲುಕಿ ಹತ್ಯೆಯಾದರು. ಇವರನ್ನು ಕರ್ನಾಟಕ ಅರಣ್ಯ ಇಲಾಖೆಯ ವೀರ ಅಭಿಮನ್ಯು ಎಂದು ಕರೆಯಲಾಗಿದೆ.

ಕೇಂದ್ರ ಸರ್ಕಾರ ಇವರ ಕಾರ್ಯ ಮೆಚ್ಚಿ ಮರಣೋತ್ತರ ಕೀರ್ತಿ ಚಕ್ರ ಎಂಬ ಶೌರ್ಯ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಅಲ್ಲದೆ, ಇದೇ ವೇಳೆ ಅರಣ್ಯ ಸಂಪತ್ತು ಹಾಗೂ ವನ್ಯಜೀವಿಸಂರಕ್ಷಣೆಗಾಗಿ ತಮ್ಮ ಪ್ರಾಣ ಅರ್ಪಣೆ ಮಾಡಿದ ಸಿಬ್ಬಂದಿಯ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ. ಅನುಕಂಪ ಆಧಾರದ ಮೇಲೆ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ಕಲ್ಪಿಸಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಅಪರ ಮುಖ್ಯ ಸಂರಕ್ಷಣಾಧಿಕಾರಿ ಕೆ.ಎನ್.ಮೂರ್ತಿ, ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಕೆ.ಎಸ್.ಸಿಕ್ಕಾರ್, ಕೆಎಸ್‍ಆರ್‍ಪಿ ನಿಡಿಘಟ್ಟಿ ಭಾಸ್ಕರ್‍ರಾವ್ ಮತ್ತಿತರರು ಪಾಲ್ಗೊಂಡಿದ್ದರು.

Facebook Comments

Sri Raghav

Admin