ಅರಮನೆಯಲ್ಲಿ ಸಿಂಹಾಸನ ಜೋಡಣಾ ಕಾರ್ಯಕ್ಕೆ ಶಾಸ್ತ್ರೋಕ್ತವಾಗಿ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

Goldenb

ಮೈಸೂರು, ಸೆ.25- ವಿಜಯದಶಮಿಯ ವಿಶೇಷ ಪೂಜಾ ಕೈಂಕರ್ಯಗಳ ಆರಂಭದಲ್ಲೇ ಕೈಗೊಳ್ಳುವ ಪ್ರಮುಖ ಕಾರ್ಯಗಳಲ್ಲಿ ಸಿಂಹಾಸನ ಜೋಡಣೆಯೂ ಒಂದಾಗಿದ್ದು, ಇಂದು ಅಂಬಾವಿಲಾಸ ಅರಮನೆಯಲ್ಲಿ ಶಾಸ್ತ್ರೋಕ್ತವಾಗಿ ಸಿಂಹಾಸನ ಜೋಡಣಾ ಕಾರ್ಯ ನೆರವೇರಿಸಿ ಪೂಜೆ ಸಲ್ಲಿಸಲಾಯಿತು. ಇಂದು ಬೆಳಗ್ಗೆ 8.20 ರಿಂದ 9.40ರೊಳಗೆ ಸಲ್ಲುವ ತುಲಾ ಲಗ್ನದಲ್ಲಿ ಸಿಂಹಾಸನದ ಬಿಡಿ ಭಾಗಗಳನ್ನು ಧರ್ಮಾಧಿಕಾರಿ ಜನಾರ್ದನ ಅಯ್ಯರ್, ರಾಜ ಪುರೋಹಿತರಾದ ಶಾಮಾ ಜೋಯಿಸ್, ನರಸಿಂಹನ್ ಅವರ ನೇತೃತ್ವದಲ್ಲಿ ಬೆಳಗ್ಗೆ 6 ರಿಂದ ಶಾಂತಿಹೋಮ ನೆರವೇರಿಸಲಾಯಿತು. ಹೋಮಕುಂಡದ ಪೂರ್ಣಾಹುತಿ ನಂತರ ಜೋಡಣಾ ಕಾರ್ಯ ಆರಂಭಿಸಲಾಯಿತು.

13 ಭಾಗಗಳಾಗಿ ವಿಂಗಡಿಸಿರುವ ಸಿಂಹಾಸನದ ಭಾಗಗಳನ್ನು ಕನ್ನಡಿ ತೊಟ್ಟಿಯಲ್ಲಿ ತಂದಿರಿಸಿ ಪೂಜೆ ನಂತರ ಜೋಡಣೆ ನಡೆಸಲಾಯಿತು.  ನವರಾತ್ರಿಗೂ ಮುನ್ನವೇ ಭದ್ರತಾ ಕೊಠಡಿಯಲ್ಲಿರಿಸಿದ್ದ ಸಿಂಹಾಸನದ ಬಿಡಿ ಭಾಗಗಳಲ್ಲಿ ಹೊರತಂದು ಅದನ್ನು ಜೋಡಿಸಿ ಸಂಪ್ರದಾಯಬದ್ಧ ಪೂಜೆ ಬಳಿಕ ವಿಜಯದಶಮಿಯ ಎಲ್ಲ ಕಾರ್ಯಕ್ರಮಗಳು ನೆರವೇರಿಸುವುದು ವಾಡಿಕೆ. ಅದರಂತೆ ಇಂದು ಸಿಂಹಾಸನ ಜೋಡಣಾ ಕಾರ್ಯ ನೆರವೇರಿತು. ಆಶ್ವೀಜ ಮಾಸದ ಮೊದಲ ದಿನದಿಂದ ನವರಾತ್ರಿ ಆರಂಭವಾದರೆ, ಇದಕ್ಕೂ ಮುನ್ನ ಸಿಂಹಾಸನವನ್ನು ತೆಗೆದಿರಿಸಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಗುತ್ತದೆ. ಅದರ ಅಂಗವಾಗಿ ಭಾದ್ರಪದ ಮಾಸದ ಕೃಷ್ಣಪಕ್ಷದ ದಶಮಿಯ ದಿನ (ಈ ಬಾರಿ 25.9.2016)ದಂದು ಬೆಳಗ್ಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ನೇತೃತ್ವದಲ್ಲಿ ಭದ್ರತಾ ಕೊಠಡಿಯಲ್ಲಿದ್ದ ಸಿಂಹಾಸನವನ್ನು ಹೊರತೆಗೆಯಲಾಯಿತು.

ಇದರ ಬಿಡಿ ಭಾಗಗಳನ್ನು ಜೋಡಿಸಿ ಅದಕ್ಕೆ ಸಿಂಹದ ಮುಖವನ್ನು ಅಳವಡಿಸಿದಾಗ ಸಿಂಹಾಸನ ಜೋಡಣೆ ಪೂರ್ಣಗೊಳ್ಳುತ್ತದೆ. ಈ ಪೂರ್ಣಗೊಂಡ ಸಿಂಹಾಸನವನ್ನು ದರ್ಬಾರ್ ಸಭಾಂಗಣದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಬೆಳಗ್ಗೆ ಶಾಂತಿಹೋಮದೊಂದಿಗೆ ಪೂಜಾ ಕಾರ್ಯಕ್ರಮಗಳನ್ನು ಆರಂಭ ಮಾಡಿ ಕಳಶ ಸ್ಥಾಪನೆ, ಪವಿತ್ರ ಜಲ ಪ್ರೇಕ್ಷಣೆ, ಹೋಮ ಸೇರಿದಂತೆ ಪೂರ್ವ ನಿರ್ಧಾರಿತ ಮುಹೂರ್ತದಲ್ಲಿ ಸಿಂಹಾಸನ ಜೋಡಣಾ ಕಾರ್ಯ ಸಂಪನ್ನಗೊಳಿಸಲಾಯಿತು.  ಈ ಸಿಂಹಾಸನಕ್ಕೆ ಉಮಾಪಕ್ಷಿ, ಮುತ್ತಿನ ಜಾಲರಿ, ಮಕರ ತೋರಣ, 25 ಜತೆ ನಗಗಳು, 1 ಜತೆ ಚಿನ್ನದ ಕುದುರೆ, ತುರಾಯಿ ಜೋಡಿ, 1 ಜತೆ ಚಿನ್ನದ ಕಳಶ ಜೋಡಿಸಿ ಅಲಂಕರಿಸಲಾಯಿತು. ಇಂದು ಅರಮನೆಯಲ್ಲಿ ನೆರವೇರುತ್ತಿದ್ದ ಸಿಂಹಾಸನಾ ಜೋಡಣಾ ಕಾರ್ಯದಿಂದಾಗಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಸಾರ್ವಜನಿಕರಿಗೆ ಅರಮನೆಗೆ ಪ್ರವೇಶ ನಿಷೇಧಿಸಲಾಗಿತ್ತು.  ಈ ಎಲ್ಲ ಕಾರ್ಯಗಳನ್ನು ಶಸ್ತ್ರಸಜ್ಜಿತ ಪೊಲೀಸರ ಬಿಗಿ ಭದ್ರತೆಯಲ್ಲಿ ನಡೆಸಲಾಯಿತು.

► Follow us on –  Facebook / Twitter  / Google+

Facebook Comments

Sri Raghav

Admin