ಅರವಿಂದ್ ಜಾದವ್ ಅವರ ಹುದ್ದೆಗೇರಲು ಐಎಎಸ್ ವಲಯದಲ್ಲಿ ಭಾರೀ ಲಾಬಿ

ಈ ಸುದ್ದಿಯನ್ನು ಶೇರ್ ಮಾಡಿ

Aravind-Jadav

ಬೆಂಗಳೂರು, ಸೆ.2- ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾದವ್ ಭವಿಷ್ಯ ಡೋಲಾಯಮಾನವಾಗಿರುವಾಗಲೇ ಪ್ರತಿಷ್ಠಿತ ಹುದ್ದೆಯನ್ನು ಅಲಂಕರಿಸಲು ಐಎಎಸ್ನಲ್ಲಿ ಭಾರೀ ಲಾಬಿ ಆರಂಭವಾಗಿದೆ.  ಇದೇ ತಿಂಗಳ ಅಂತ್ಯಕ್ಕೆ ಅರವಿಂದ್ ಜಾದವ್ ತಮ್ಮ ಸೇವೆಯಿಂದ ನಿವೃತ್ತರಾಗಲಿದ್ದಾರೆ. ಒಂದು ವೇಳೆ ಕಾನೂನು ಬಾಹಿರವಾಗಿ ಜಮೀನು ಖರೀದಿಸಿರುವುದು ಸಾಬೀತಾದರೆ ರಾಜೀನಾಮೆ ನೀಡುವುದು ಅನಿವಾರ್ಯ. ಹಾಗೊಂದು ವೇಳೆ ಮುಜುಗರದಿಂದ ತಪ್ಪಿಸಿಕೊಳ್ಳಲು ಸರ್ಕಾರ ಉದ್ದೇಶಪೂರ್ವಕವಾಗಿಯೇ ವರದಿಯನ್ನು ಬಹಿರಂಗಪಡಿಸಲು ವಿಳಂಬ ಮಾಡಿದರೆ ಸೆ.30ಕ್ಕೆ ಅವರ ಅಧಿಕಾರಾವಧಿ ಕೊನೆಗೊಳ್ಳಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಸರ್ಕಾರ ಜಾದವ್ ಅವರ ಅವಧಿಯನ್ನು ಮತ್ತೆ ಮುಂದುವರಿಸುವ ಲಕ್ಷಣಗಳು ಕಂಡುಬರುತ್ತಿಲ್ಲ. ಅಡ್ವೊಕೇಟ್ ಜನರಲ್ ನೀಡುವ ವರದಿ ಮೇಲೆ ಅವರ ಭವಿಷ್ಯ ನಿಂತಿದೆ.

ಭಾರೀ ಲಾಬಿ:

ಮುಖ್ಯ ಕಾರ್ಯದರ್ಶಿ ಹುದ್ದೆ ಅಲಂಕರಿಸಲು ಈಗಾಗಲೇ ತೆರೆಮರೆಯಲ್ಲಿ ಭಾರೀ ಲಾಬಿ ಆರಂಭವಾಗಿದೆ. ಪ್ರಮುಖವಾಗಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ರತ್ನಮಾಲಾ, ಕೇಂದ್ರ ಸೇವೆಯಲ್ಲಿರುವ ಎಸ್.ಬಿ.ಪಟ್ನಾಯಕ್ ಹಾಗೂ ಸುಭಾಷ್ಚಂದ್ರ ಕುಂಟಿಯಾ ಹೆಸರುಗಳು ಕೇಳಿಬರುತ್ತಿವೆ.  ಈ ಮೂವರು 1981ರ ಬ್ಯಾಚ್ನ ಐಎಎಸ್ ಅಧಿಕಾರಿಗಳಾಗಿದ್ದು, ಮುಖ್ಯ ಕಾರ್ಯದರ್ಶಿ ಹುದ್ದೆ ಅಲಂಕರಿಸಲು ಲಾಬಿ ಆರಂಭಿಸಿದ್ದಾರೆ.  ಈ ಹಿಂದೆ ಅರವಿಂದ್ ಜಾದವ್ಗೂ ಮುನ್ನ ಮುಖ್ಯ ಕಾರ್ಯದರ್ಶಿ ಹುದ್ದೆ ಮೇಲೆ ರತ್ನಮಾಲಾ ಕಣ್ಣಿಟ್ಟಿದ್ದರು. ಆದರೆ, ಕಾಂಗ್ರೆಸ್ನ ಪ್ರಭಾವಿ ನಾಯಕರೊಬ್ಬರ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಾದವ್ಗೆ ಮಣೆ ಹಾಕಿದ್ದರು. ಅಲ್ಲದೆ, ಸೇವಾವಧಿ ಮುಗಿದ ಮೇಲೆಯೂ ಮತ್ತೆ ಮೂರು ತಿಂಗಳ ಕಾಲ ಮುಂದುವರಿಸಲಾಗಿತ್ತು. ಹೀಗಾಗಿ ರತ್ನಮಾಲಾ ಆಸೆ ಭಗ್ನಗೊಂಡಿತ್ತು.  ಈಗ ಅವರು ಪ್ರಬಲ ಆಕಾಂಕ್ಷಿಯಾಗಿದ್ದರೂ ಅವರ ಮೇಲೆ ಕೇಳಿಬಂದಿರುವ ಭೂ ವಿವಾದ ಮತ್ತೆ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ಏನಿದು ವಿವಾದ:

ಆಂಧ್ರ ಪ್ರದೇಶದಲ್ಲಿ ಹಿಂದೂಟೆಕ್ ಎಂಬ ಸಂಸ್ಥೆಯನ್ನು ಸ್ಥಾಪಿಸಲು ರತ್ನಮಾಲಾ ಕಾನೂನು ಬಾಹಿರವಾಗಿ ಸರ್ಕಾರಿ ಭೂಮಿ ಖರೀದಿ ಮಾಡಿದ್ದಾರೆಂಬ ಆರೋಪವಿತ್ತು. ಈ ಬಗ್ಗೆ ಸಿಬಿಐ ವಿಚಾರಣೆ ನಡೆಸಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಕ್ಲೀನ್ಚಿಟ್ ನೀಡಿತ್ತು. ಆದರೆ, ಇದೀಗ ತೆಲಂಗಾಣ ಸರ್ಕಾರ ಮತ್ತೆ ಈ ವಿವಾದವನ್ನು ಮರು ತನಿಖೆ ನಡೆಸುವಂತೆ ನ್ಯಾಯಾಲಯಕ್ಕೆ ವಿಶೇಷ ಅರ್ಜಿ ಸಲ್ಲಿಸಲು ಮುಂದಾಗಿದೆ. ಹೀಗಾಗಿ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಕಣ್ಣಿಟ್ಟಿದ್ದ ರತ್ನಮಾಲಾ ಅವರಿಗೆ ಒಲಿಯುವ ಸಾಧ್ಯತೆ ಕಷ್ಟಸಾಧ್ಯ ಎನ್ನಲಾಗಿದೆ. ಇನ್ನು ಹಿರಿಯ ಐಎಎಸ್ ಅಧಿಕಾರಿ ಬಿ.ಪಿ.ಆಚಾರ್ಯ ಹೆಸರು ಚಾಲ್ತಿಯಲ್ಲಿದೆಯಾದರೂ ಅವರ ಮೇಲೂ ಭೂ ವಿವಾದ ಸುತ್ತಿಕೊಂಡಿರುವುದರಿಂದ ಸರ್ಕಾರ ಪರಿಗಣಿಸುವ ಸಾಧ್ಯತೆ ತೀರ ಕಡಿಮೆ.  ಉಳಿದಂತೆ ಕೇಂದ್ರ ಸೇವೆಯಲ್ಲಿರುವ ಎಸ್.ವಿ.ಪಟ್ನಾಯಕ್ ಮತ್ತು ಕುಂಟಿಯಾ ನಡುವೆ ಪೈಪೋಟಿ ಏರ್ಪಟ್ಟಿದೆ.

ಸಿಎಂ ಒಲವು ಯಾರ ಮೇಲೆ..?

ಯಾವುದೇ ಮುಖ್ಯ ಕಾರ್ಯದರ್ಶಿಯನ್ನು ಆಯ್ಕೆ ಮಾಡುವ ಪರಮಾಧಿಕಾರ ಮುಖ್ಯಮಂತ್ರಿಗಿರುತ್ತದೆ. ಪಟ್ನಾಯಕ್ ಮತ್ತು ಕುಂಟಿಯಾ ತಮ್ಮ ಸೇವಾವಧಿಯಲ್ಲಿ ಯಾವುದೇ ವಿವಾದಕ್ಕೆ ಸಿಲುಕಿದವರಲ್ಲ. ಇಬ್ಬರೂ ಹಿರಿಯ ಅಧಿಕಾರಿಗಳು ಪ್ರಸ್ತುತ ಕೇಂದ್ರ ಸರ್ಕಾರದ ನಿಯೋಜನೆಯಲ್ಲಿದ್ದಾರೆ.  ಎಸ್.ಬಿ.ಪಟ್ನಾಯಕ್, ಕೇಂದ್ರ ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದರೆ, ಎಸ್.ಸಿ.ಕುಂಟಿಯಾ ಕೇಂದ್ರ ಮಾನವ ಸಂಪನ್ಮೂಲ ವಿಭಾಗದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆಯ ಕಾರ್ಯದರ್ಶಿಯಾಗಿದ್ದಾರೆ.  ಅಂತಿಮವಾಗಿ ಮುಖ್ಯಮಂತ್ರಿ ಒಲವು ಯಾರ ಮೇಲೆ ಇರುತ್ತದೆಯೋ ಅವರಿಗೆ ಮುಖ್ಯ ಕಾರ್ಯದರ್ಶಿ ಹುದ್ದೆ ದೊರೆಯಲಿದೆ.

► Follow us on –  Facebook / Twitter  / Google+

Facebook Comments

Sri Raghav

Admin