ಅರ್ಥಪೂರ್ಣವಾಗಿರಲಿ ಬೇಸಿಗೆ ರಜೆ

ಈ ಸುದ್ದಿಯನ್ನು ಶೇರ್ ಮಾಡಿ

holidays

ಈ ಶಾಲೆಗಳು ಯಾಕಾದರೂ ರಜೆ ಕೊಟ್ಟಿವೆಯೋ ಎನಿಸುತ್ತದೆ, ಈ ಮಕ್ಕಳನ್ನು ಕಂಟ್ರೋಲ್ ಮಾಡಲು ನಮಗೆ ಸಾಧ್ಯವಾಗುತ್ತಿಲ್ಲ. ಟಿವಿ, ಮೊಬೈಲ್ ಇಲ್ಲಾಂದ್ರೆ ಇವರನ್ನು ಹಿಡಿಯುವುದು ಇನ್ನೂ ಕಷ್ಟ ಆಗ್ತಿತ್ತು… ಹೀಗೆ ಬಹಳಷ್ಟು ತಾಯಂದಿರು ಹೇಳುತ್ತಾರೆ.ಪುಸ್ತಕ ಎಂದರೆ ಅಲರ್ಜಿಯಾಗಿಬಿಟ್ಟಿದೆ. ಬಲವಂತ ಮಾಡಿದರೆ ಕಾಟಾಚಾರಕ್ಕೆ ಬುಕ್ ಹಿಡೀತಾನೆ… ನಾವು ಎದುರಿಗಿದ್ದಾಗ ಒಂದು ಥರಾ… ಇಲ್ಲದಿದ್ದಾಗ ಬೇರೆ ಥರಾ ಇರ್ತಾನೆ… ಎನಿಸುತ್ತದೆ. ಇವರಿಗೆ ಏನು ಮಾಡಬೇಕೋ ತಿಳಿಯದು ಎಂದು ಮತ್ತೆ ಕೆಲವು ಫೋಷಕರು ಅಸಹಾಯಕತೆ ವ್ಯಕ್ತಪಡಿಸುವುದು ಮಾಮೂಲು.ಎಷ್ಟೋ ಸಮಯ ಮಕ್ಕಳ ಕಾಟ ತಡೆಯಲಾರದೆ ಫೋಷಕರು ಕೌನ್ಸಿಲಿಂಗ್ ಮೊರೆ ಹೋಗುವುದೂ ಇದೆ. ಇಂತಹ ಫೋಷಕರಿಗೆ ಇಲ್ಲೊಂದಷ್ಟು ಸಲಹೆಗಳಿವೆ…

ಮಕ್ಕಳು ಪರೀಕ್ಷೆಗಾಗಿ ಓದಿ ಓದಿ ಪುಸ್ತಕಗಳೆಂದರೆ ರೋಸಿ ಹೋಗಿರುತ್ತಾರೆ .ಅಂಥದ್ದರಲ್ಲಿ ಪುನಃ ಪುಸ್ತಕ ಹಿಡಿ ಎಂದರೆ ಅದು ಅವರಿಗೆ ಇನ್ನೂ ರೇಜಿಗೆಯಾಗಿಬಿಡುತ್ತದೆ. ಆದ್ದರಿಂದ ಮಕ್ಕಳು ಬೇಸಿಗೆ ರಜೆ ವೇಳೆ ಏನೆಲ್ಲ ಮಾಡಬಹುದು ಎಂಬ ಬಗ್ಗೆ ಒಂದಷ್ಟು ಮಾಹಿತಿಗಳಿವೆ.ಈ ನಿಟ್ಟಿನಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಹಾಲಿಡೇಗಳು ಅತ್ಯವಶ್ಯಕ ಮತ್ತು ರಜೆಯನ್ನು ಅರ್ಥಪೂರ್ಣವಾಗಿ ಕಳೆಯೋದು ಮಕ್ಕಳ ಮುಂದಿರುವ ಆಯ್ಕೆ. ಈ ಅವಧಿಯಲ್ಲಿ ಶಾಲಾ ದಿನಗಳಂತೆ ಪಾಠ-ಓದು ಇಷ್ಟರಲ್ಲೇ ತಲ್ಲೀನರಾಗಿರೋದು ಅಷ್ಟು ಸಮಂಜಸವಲ್ಲ ಮತ್ತು ಅದೇ ಓದು-ಬರಹಕ್ಕೆ ಅಂಟಿಕೊಂಡು ಸಮ್ಮರ್ ಕ್ಯಾಂಪ್‍ಗಳಿಗೆ ತೆರಳುವ ಬದಲು, ಅಜ್ಜಿ-ತಾತನ ಮನೆಗೆ ಹೋಗಿ ಹೊರ ಪ್ರಪಂಚವನ್ನು ಸ್ವಲ್ಪವಾದರೂ ಅರಿತುಕೊಳ್ಳಲು ಮತ್ತು ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಸಿಕ್ಕಿರುವ ಬಂಗಾರದಂಥಹ ಸಮಯ ಇದು.

ಈ ಸಮಯದಲ್ಲಿ ಸ್ವಲ್ಪ ನೆಮ್ಮದಿಯಿಂದ ಆಟೋಟಗಳು, ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸಬಹುದು, ಪ್ರವಾಸಕ್ಕೆ ಹೋಗಬಹುದು. ನೆಂಟರಿಷ್ಟರ ಮನೆಗಳಿಗೆ ಹೋಗಿ ಉಳಿದುಕೊಳ್ಳಲು ಸಕಾಲ. ಗ್ರಾಮೀಣ ಭಾಗಗಳಿಗೆ ತೆರಳುವುದರಿಂದ ಸಿಗುವ ಪ್ರಯೋಜನ ಸಾಕಷ್ಟು. ಹೀಗಾಗಿ ಪಾಲಕರು ಸಣ್ಣತನ ಬಿಟ್ಟು ಇತರೆ ಮಕ್ಕಳನ್ನು ಮನೆಯೊಳಗೆ ಬಿಟ್ಟುಕೊಳ್ಳುವುದು, ಮನೆಯ ಮಕ್ಕಳನ್ನು ಬೇರೆಡೆ ಕಳುಹಿಸುವುದು ಮಾಡಿದರೆ ಎಷ್ಟೋ ಪಾಲು ಉತ್ತಮ. ರಜೆ ಹೇಗೆ ಕಳೆಯಬಹುದು ಅನ್ನೋದಕ್ಕೆ ಅನೇಕ ಆಯ್ಕೆಗಳು ಇಲ್ಲಿವೆ. ಇಲ್ಲಿರುವ ಎಲ್ಲ ಆಯ್ಕೆಗಳಲ್ಲಿ ತೊಡಗಿಸುವ ಮೂಲಕ ಶಾಲೆ ಶುರುವಾಗುವ ಹೊತ್ತಿಗೆ ಮಕ್ಕಳಲ್ಲಿ ಹೊಸ ಚೈತನ್ಯ ಮೂಡಿಸಬಹುದಾಗಿದೆ.

ಸಹಪಠ್ಯ ಚಡುವಟಿಕೆಗಳಾದ ಚಿತ್ರಕಲೆ, ಕಥೆ ಕವನ ಇತ್ಯಾದಿಗಳ ರಚನೆಯಲ್ಲಿ ತೊಡಗುವುದು, ನಿಮ್ಮ ಸುತ್ತ ಮುತ್ತ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ಕರೆದೊಯ್ಯುವುದು, ವಿವಿಧ ಸಾಧಕರ ಕುರಿತ ಪುಸ್ತಕಗಳನ್ನು ಸಂಗ್ರಹಿಸಿ ಓದುವುದು, ಉತ್ತಮ ಐತಿಹಾಸಿಕ ಸ್ಥಳಗಳು, ಧಾರ್ಮಿಕ ಕ್ಷೇತ್ರಗಳು ಹಾಗೂ ಇತರೆ ಪ್ರವಾಸಿ ತಾಣಗಳಿಗೆ ಭೇಟಿ.ಮಾಧ್ಯಮಗಳ ಮೂಲಕ ಲಭ್ಯವಾಗುವ ವಿವಿಧ ಸಾಧಕರ ಕುರಿತ ಮಾಹಿತಿಗಳನ್ನು ಬರಹ ರೂಪದಲ್ಲಿ ಸಂಗ್ರಹಿಸಿ ತಮ್ಮದೆ ಆದ ಒಂದು ಕಿರುಹೊತ್ತಿಗೆ ಸಿದ್ಧಪಡಿಸುವುದು, ಪಾಲಕರು ಸ್ಥಳೀಯ ಕವಿ,ಲೇಖಕರ ನಿವಾಸದ ಕುರಿತು ಮಾಹಿತಿ ಪಡೆದು ಅವರ ಬಿಡುವಿನ ವೇಳೆ ತಿಳಿದುಕೊಂಡು ಮಕ್ಕಳ ಸಹಿತ ಭೇಟಿ ನೀಡುವುದು ಹಾಗೂ ಚರ್ಚಿಸುವುದು, ಸ್ಥಳೀಯವಾಗಿ ಯಾವುದೇ ವೃದ್ಧಾಶ್ರಮ, ಅನಾಥಾಶ್ರಮ, ಜೈಲು, ಅಂಚೆ ಕಚೇರಿ, ಬ್ಯಾಂಕ್ ಗ್ರಾಮ ಪಂಚಾಯತ್ ಮುಂತಾದ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಸ್ಥಿತಿಗತಿ, ಕಾರ್ಯವಿಧಾನ ಕುರಿತು ತಿಳಿಯಬಹುದು.

ಟಿವಿ, ಮೊಬೈಲ್, ಕಂಪ್ಯೂಟರ್‍ಗಳ ಒಡನಾಟದಿಂದ ದೂರ ಸರಿದು ವಠಾರದಲ್ಲಿನ ಅಜ್ಜಿಯರಿಂದ ಕಾಡಿ ಬೇಡಿ ಕಥೆ ಹಾಗೂ ಅವರ ಅನುಭವದ ಮಾತುಗಳನ್ನು ಕೇಳಿದಾಗ ಏನೋ ಹೊಸತನದ ಭಾಸವಾಗುತ್ತದೆ ಮತ್ತು ಬಿಡುವಿನ ವೇಳೆಯನ್ನು ಅವರು ಹೇಗೆ ಕಳೆಯುತ್ತಿದ್ದರು ಎಂದು ಕೇಳಿ ಅವರ ಜೀವನ ವಿಧಾನಗಳನ್ನು ಅರಿಯಬಹುದು, ಕಸದಿಂದ ರಸ ಎನ್ನುವಂತೆ, ನಿರುಪಯುಕ್ತ ಎನಿಸುವ ವಸ್ತುಗಳನ್ನು ಸಂಗ್ರಹಿಸಿ ಅದರಿಂದ ಉಪಯುಕ್ತ ವಸ್ತುವನ್ನು ಕೈಯ್ಯಾರೆ ತಯಾರಿಸಿ ಶಾಲೆಗೆ ಕೊಂಡೊಯ್ದು ಎಲ್ಲರಿಂದ ಮೆಚ್ಚುಗೆ ಗಿಟ್ಟಿಸಿಕೊಳ್ಳಬಹುದು ಮತ್ತು ಸ್ಥಳಿಯ ಕರಕುಶಲ ಕಲೆಗಳು ಹಾಗೂ ವಂಶ ಪಾರಂಪರ್ಯವಾಗಿ ಬಂದಿರುವ ವಿದ್ಯೆಗಳನ್ನು ಹಿರಿಯರಿಂದ ಕಲಿಯಬಹುದು, ಪಠ್ಯ ಪುಸ್ತಕದಲ್ಲಿ ಬಂದಿರುವ ಮತ್ತು ನೀವು ಕಲಿತಿರುವ ವಿಷಯಗಳನ್ನು ಹಳ್ಳಿಗಳಿಗೆ ತೆರಳಿ ಅವುಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸಿಕೂಳ್ಳಲು ಇದು ಸಕಾಲ.

ಸ್ಥಳೀಯವಾಗಿ ಸಣ್ಣ-ಪುಟ್ಟ ಕೆರೆಗಳು, ಈಜುಕೊಳಗಳು ಲಭ್ಯವಿದ್ದಲ್ಲಿ ಪಾಲಕರೊಂದಿಗೆ ಭೇಟಿ ನೀಡಿ ಈಜು ಕಲಿಯುವುದು… ವಾಹನ ಚಾಲನೆ ಹಾಗೂ ದೈನಂದಿನ ಚಟುವಟಿಕೆಗಳನ್ನು ಕಲಿಯಬಹುದು, ಸ್ಥಳೀಯ ಹಬ್ಬ ಜಾತ್ರೆ ಕಾರ್ತಿಕೋತ್ಸವದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು, ಸಾಮಾಜಿಕ-ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮಾಡುವುದರಿಂದ ಉತ್ತಮ ಸಂವಹನ ಕೌಶಲ್ಯಗಳನ್ನು ಕಲಿಯಬಹುದು, ಗುಬ್ಬಚ್ಚಿ ಗೂಡು ಕಟ್ಟುವುದು, ನಾಯಿ, ಬೆಕ್ಕು, ದನ-ಕರುಗಳ ಜೀವನ ಶೈಲಿ ಬಗ್ಗೆ ತಿಳಿಯಬಹುದು, ನಮ್ಮ ಸರ್ಕಾರವು ಸ್ವಲ್ಪ ಮೋಜು ಸ್ವಲ್ಪ ಓದು ಕಾರ್ಯಕ್ರಮ ಜಾರಿಗೆ ತಂದಿದೆ. ಅಲ್ಲಿಗೆ ತೆರಳಿ ಕೂತೂಹಲಕಾರಿ ವಿಷಯಗಳನ್ನು ತಿಳಿಯಬಹುದು.
ಹಳ್ಳಿಯ ಸಾಂಪ್ರದಾಯಿಕ ಆಚರಣೆಗಳು ಹಳ್ಳಿ ಜನರ ಜೀವನ ಶೈಲಿ ಅವರ ಕೃಷಿ ವಿಧಿ-ವಿಧಾನಗಳು, ಊರಿನ ಹೆಸರು ಅದರ ಮಹತ್ವ ಊರಿನಲ್ಲಿ ಹಿರಿಯರು ಸಮಾಜಕ್ಕೆ ಕೊಟ್ಟ ಕೊಡುಗೆಗಳ ಬಗ್ಗೆ ಅರಿತುಕೊಳ್ಳಬೇಕು, ಈ ರೀತಿಯಾಗಿ ಮಕ್ಕಳು ರಜ ಅವಧಿಗಳನ್ನು ಸಕಾರಾತ್ಮಕವಾಗಿ ಕಳೆಯಬಹುದಾಗಿದೆ. ಆದರೆ ಇವುಗಳಲ್ಲಿ ಭಾಗವಹಿಸುವುದರ ಜತೆಗೆ ಪಠ್ಯ ವಿಷಯಗಳನ್ನು ನಿರ್ಲಕ್ಷ್ಯ ಮಾಡದಿದ್ದರೆ ರಜೆ ಹೆಚ್ಚು ಅರ್ಥಪೂರ್ಣವಾದೀತು.ಮೊಟ್ಟ ಮೊದಲು ರಜೆಯಲ್ಲಿ ಓದುವುದಕ್ಕೆ ಬೇಸರ ಮಾಡಿಕೊಳ್ಳಬಾರದು. ಏಕೆಂದರೆ, ರಜೆ ಅವಧಿ ಮುಗಿಯುತ್ತಿದ್ದಂತೆ ರಜ ದಿನಗಳಲ್ಲಿಯೂ ದಿನಪೂರ್ತಿ ಓದಬೇಕೆಂದಿಲ್ಲ. ಪ್ರತಿದಿನವೂ ಸಂಜೆಯೋ, ಬೆಳಿಗ್ಗೆಯೋ ಸ್ವಲ್ಪ ಕಾಲ ನಿಯಮಿತವಾಗಿ ಓದುವುದರಿಂದ ಮುಂದಿನ ತರಗತಿಗಳ ಪಠ್ಯ ವಿಷಯಗಳು ಸುಲಲಿತವಾಗಿ ಅರ್ಥವಾಗುತ್ತವೆ.
ಯಾವುದೇ ವಿದ್ಯಾರ್ಥಿಗಳಿಗೆ, ಪಾಲಕರಿಗೆ ಈ ಬಗ್ಗೆ ಯಾವುದೇ ಸಮಸ್ಯೆಗಳಿದ್ದರೆ ಫೋನ್  ಮಾಡಿ ತಮ್ಮ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬಹುದು. ಅಥವಾ ಫೇಸ್‍ಬುಕ್‍ನಲ್ಲಿ ದಾರುಕೇಶ ಬಿ.ಎಂ. ಎಂದು ಹುಡುಕಿದರೆ ಶಿಕ್ಷಣಕ್ಕೆ ಸಂಬಂಧಿಸಿದ ವಿಡಿಯೋಗಳು ಲಭ್ಯವಾಗುತ್ತವೆ ಎಂದು ರಾಜ್ಯಮಟ್ಟದ ತರಬೇತುದಾರ ಬಿ.ಎಂ.ದಾರುಕೇಶ (ಕೆಇಎಸ್) ತಿಳಿಸಿದ್ದಾರೆ.ಹೆಚ್ಚಿನ ವಿವರಗಳಿಗೆ 9886229378 ಸಂಪರ್ಕಿಸಿ.ಫೋಷಕರೇ ಮತ್ತು ಚಿಣ್ಣರೇ ಇಷ್ಟೆಲ್ಲ ಮಾಹಿತಿ ಸಿಕ್ಕ ಮೇಲೆ ಇನ್ನೇಕೆ ತಡ, ಒಮ್ಮೆ ಅಂತರ್ಜಾಲವನ್ನು ಹುಡುಕುವತ್ತ ಚಿತ್ತ ಹರಿಸೋಣ ಬನ್ನಿ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin