ಅರ್ಥಪೂರ್ಣ ಕೆಂಪೇಗೌಡ ದಿನಾಚರಣೆಗೆ ತೀರ್ಮಾನ

ಈ ಸುದ್ದಿಯನ್ನು ಶೇರ್ ಮಾಡಿ

Okkaliga--01

ಬೆಂಗಳೂರು, ಜೂ.20- ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ದಿನಾಚರಣೆಯನ್ನು ಇದೇ 27ರಂದು ಅರ್ಥಪೂರ್ಣ ಹಾಗೂ ಮಾದರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಇಂದು ಕಿಮ್ಸ್‍ನ ಕುವೆಂಪು ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿಯ ಶ್ರೀ ನಂಜಾವಧೂತ ಸ್ವಾಮೀಜಿ, ಶ್ರೀ ಚಂದ್ರಶೇಖರನಾಥ ಸ್ವಾಮೀಜಿ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಇಂಧನ ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಎನ್.ಬೆಟ್ಟೇಗೌಡ, ಮಾಜಿ ಅಧ್ಯಕ್ಷ ಅಪ್ಪಾಜಿಗೌಡ, ಶಾಸಕ ಅಶ್ವತ್ಥನಾರಾಯಣ, ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ಪಾಲ್ಗೊಂಡಿದ್ದರು.

ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಸರ್ಕಾರದೊಂದಿಗೆ ಎಲ್ಲರೂ ಕೈ ಜೋಡಿಸಬೇಕು ಹಾಗೂ ಎಲ್ಲರೂ ಜವಾಬ್ದಾರಿಯನ್ನು ಹೊರಲು ನಿರ್ಧರಿಸಲಾಯಿತು. ಈ ವೇಳೆ ಒಕ್ಕಲಿಗರ ಸಂಘದ ಅಧ್ಯಕ್ಷ ಬೆಟ್ಟೇಗೌಡ ಮಾತನಾಡಿ, ಬೆಂಗಳೂರನ್ನು ನಿರ್ಮಿಸುವ ಮೂಲಕ ಕೆಂಪೇಗೌಡರು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಗರದ ಖ್ಯಾತಿ ಹೆಚ್ಚುವಂತೆ ಮಾಡಿದ್ದಾರೆ. ಉದ್ಯಾನವನಗಳು, ಕೋಟೆಗಳು, ಕೆರೆಗಳನ್ನು ನಿರ್ಮಿಸಿ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಇಂತಹ ಮಹಾನ್ ಪುರುಷನ ಜನ್ಮ ದಿನಾಚರಣೆಯನ್ನು ಇದೇ ಮೊದಲ ಬಾರಿಗೆ ಸರ್ಕಾರದ ವತಿಯಿಂದ ಆಚರಿಸುತ್ತಿರುವುದು ಸ್ವಾಗತಾರ್ಹ ಎಂದು ಹೇಳಿದರು. ಇಂತಹ ಒಂದು ಅಭೂತ ಪೂರ್ವ ಕಾರ್ಯಕ್ರಮದಲ್ಲಿ ಎಲ್ಲ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಕೆಂಪೇಗೌಡರ ಕಾಲದಲ್ಲಿ ನಗರದ ನಾಲ್ಕು ದಿಕ್ಕಿನಲ್ಲಿ ನಿರ್ಮಾಣ ಮಾಡಿರುವ ಗಡಿ ಗೋಪುರಗಳಾದ ಲಾಲ್‍ಬಾಗ್, ಕೆಂಪಾಂಬುದಿಕೆರೆ, ಯಲಹಂಕ, ಹಲಸೂರು ಮತ್ತು ಕೆಂಪೇಗೌಡರ ಮೂಲಸ್ಥಳ ಮಾಗಡಿಯ ಆವತಿ ಇಷ್ಟೂ ದಿಕ್ಕುಗಳಿಂದ ಜೂ.27ರಂದು ಬೆಳಗ್ಗೆ ಏಕಕಾಲಕ್ಕೆ ಮೆರವಣಿಗೆ ಹೊರಡಬೇಕು. ಒಂದೊಂದು ದಿಕ್ಕಿನಲ್ಲಿ ಒಬ್ಬ ಶಾಸಕರು ಹಾಗೂ ಬಿಬಿಎಂಪಿ ಸದಸ್ಯರ ನೇತೃತ್ವದಲ್ಲಿ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಅಭಿಮಾನಿಗಳು ಮೆರವಣಿಗೆಯಲ್ಲಿ ಬರಬೇಕು ಎಂದರು.

ಇತ್ತ ಒಕ್ಕಲಿಗರ ಸಂಘದಲ್ಲಿ ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಶ್ರೀಗಳ ನೇತೃತ್ವದಲ್ಲಿ ಸಭೆ ನಡೆದು ನಂತರ ಫ್ರೀಡಂಪಾರ್ಕ್‍ವರೆಗೆ ಮೆರವಣಿಗೆಯಲ್ಲಿ ಬಂದು ಎಲ್ಲರೂ ಒಟ್ಟಾಗಿ ವಿವಿಧ ಜಾನಪದ ಕಲಾತಂಡದವರೆಗೆ ವಿಧಾನಸೌಧಕ್ಕೆ ಮೆರವಣಿಗೆ ಬರಬೇಕಿದೆ ಎಂದು ತಿಳಿಸಿದರು.ಕೆಂಪೇಗೌಡರ ದಿನಾಚರಣೆಯಂದು ಸರ್ಕಾರಕ್ಕೆ ಬೇಡಿಕೆಗಳನ್ನು ಇಡುತ್ತೇವೆ. ಅವುಗಳಲ್ಲಿ ಪ್ರಮುಖವಾದದ್ದು ಕೆಂಪೇಗೌಡರ ಭಾವಚಿತ್ರವಿರುವ ಅಂಚೆಚೀಟಿ ತರಬೇಕು, ಪಠ್ಯದಲ್ಲಿ ಕೆಂಪೇಗೌಡರ ಜೀವನ ಚರಿತ್ರೆಯನ್ನು ಅಳವಡಿಸಬೇಕು ಎಂಬುದು ಪ್ರಮುಖವಾಗಿವೆ ಎಂದು ಹೇಳಿದರು.
ಈ ಬಾರಿ ರಾಜ್ಯದಲ್ಲಿ ತೀವ್ರ ಬರಪರಿಸ್ಥಿತಿ ಇರುವುದರಿಂದ ಕೆಂಪೇಗೌಡರ ಜಯಂತಿಯನ್ನು ಅದ್ಧೂರಿಯಾಗಿ ಮಾಡಲಾಗದಿದ್ದರೂ ಅರ್ಥಪೂರ್ಣವಾಗಿ ಆಚರಿಸಬೇಕಿದೆ. ಮುಂದಿನ ವರ್ಷದಿಂದ ಅದ್ಧೂರಿ ದಿನಾಚರಣೆ ಮಾಡುವುದರೊಂದಿಗೆ ಎಲ್ಲಾ ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ನಾಡಪ್ರಭುಗಳ ದಿನಾಚರಣೆ ಆಚರಿಸಲಿದ್ದೇವೆ ಎಂದು ಬೆಟ್ಟೇಗೌಡ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin