ಅವಾಂತರ ಸೃಷ್ಟಿಸಿದ ಗೌರಿ ಹತ್ಯೆ ಶಂಕಿತರ ರೇಖಾಚಿತ್ರದ ತಿಲಕ..!

ಈ ಸುದ್ದಿಯನ್ನು ಶೇರ್ ಮಾಡಿ

Tilaka-Gauri-Lankesh--Prabh

ಬೆಂಗಳೂರು ,ಅ.16-ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸಂಬಂಧ ಕಳೆದ ಎರಡು ದಿನಗಳ ಹಿಂದೆ ವಿಶೇಷ ತನಿಖಾ (ಎಸ್‍ಐಟಿ) ತಂಡ ಬಿಡುಗಡೆ ಮಾಡಿದ್ದ ರೇಖಾಚಿತ್ರ ಭಾರೀ ಅವಾಂತರ ಸೃಷ್ಟಿಸಿದೆ. ಶನಿವಾರ ಎಸ್‍ಐಟಿ ಬಿಡುಗಡೆ ಮಾಡಿದ ಶಂಕಿತರ ರೇಖಾಚಿತ್ರದಲ್ಲಿ ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ ಆಪ್ತ ಸಹಾಯಕ ಎಂ.ಪ್ರಭಾಕರ್ ಹೋಲಿಕೆಯಾಗುತ್ತಿರುವುದು ಈ ಅವಾಂತರಕ್ಕೆ ಪ್ರಮುಖ ಕಾರಣವಾಗಿದೆ.  ಶಂಕಿತರ ರೇಖಾಚಿತ್ರದಲ್ಲಿ ವ್ಯಕ್ತಿಯೊಬ್ಬ ಹಣೆಗೆ ತಿಲಕ ಇಟ್ಟುಕೊಂಡಿದ್ದ. ಎಂ.ಪ್ರಭಾಕರ್ ಕೂಡ ಹಣೆಗೆ ತಿಲಕ, ಕೇಸರಿ ರುಮಾಲು ಧರಿಸಿರುವುದು ರೇಖಾಚಿತ್ರದಲ್ಲಿರುವ ವ್ಯಕ್ತಿಗೂ ಸಾಕಷ್ಟು ಹೋಲಿಕೆ ಆಗುತ್ತಿರುವುದು ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದೆ.

ಎಸ್‍ಐಟಿ ತನಿಖಾ ತಂಡದ ಮುಖ್ಯಸ್ಥ ಬಿ.ಕೆ.ಸಿಂಗ್ ಅವರು ಶನಿವಾರ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಶಂಕಿತರ ರೇಖಾಚಿತ್ರಗಳಲ್ಲಿ ಹೋಲಿಕೆಯಾಗುವ ಅನಾಮಧೇಯ ವ್ಯಕ್ತಿಗಳು ಕಂಡುಬಂದರೆ ಮಾಹಿತಿ ನೀಡಬೇಕೆಂದು ಸಾರ್ವಜನಿಕರಿಗೆ ಮನವಿ ಮಾಡಿದ್ದರು.  ಯಾವಾಗ ರೇಖಾಚಿತ್ರ ದೃಶ್ಯ ಮಾಧ್ಯಮ ಮತ್ತು ಪತ್ರಿಕೆಗಳಲ್ಲಿ ಪ್ರಸಾರವಾಯಿತೋ ಪ್ರಭಾಕರ್ ಅವರ ಬಗ್ಗೆ ಎಸ್‍ಐಟಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ರೇಖಾಚಿತ್ರದಲ್ಲಿರುವ ವ್ಯಕ್ತಿ ತಿಲಕವಿಟ್ಟಿರುವುದು ಹಾಗೂ ಪ್ರಭಾಕರ್‍ಗೆ ಹೋಲಿಕೆಯಲ್ಲಿ ಸಾಕಷ್ಟು ಸ್ವಾಮ್ಯತೆ ಕಂಡುಬರುತ್ತಿದೆ. ಹಾಗಾಗಿ ಅವರನ್ನು ವಿಚಾರಣೆಗೆ ಒಳಪಡಿಸಬೇಕೆಂದು ಕೆಲ ಸಾರ್ವಜನಿಕರು ಎಸ್‍ಐಟಿಗೆ ಗೌಪ್ಯವಾಗಿ ಮಾಹಿತಿ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸ್ಪಷ್ಟನೆ:

ಇದೀಗ ಫೇಸ್‍ಬುಕ್‍ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಭಾಕರ್, ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಅಷ್ಟಕ್ಕೂ ನಾನು ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಲು ಯಾವುದೇ ಕಾರಣಗಳೂ ಇಲ್ಲ. ಎಸ್‍ಐಟಿ ಬಿಡುಗಡೆ ಮಾಡಿರುವ ರೇಖಾಚಿತ್ರಕ್ಕೂ ನನಗೂ ಹೋಲಿಕೆ ಕಂಡುಬರುತ್ತಿರುವುದರಿಂದ ಕೆಲವರು ಈ ಬಗ್ಗೆ ಮಾಹಿತಿ ನೀಡಿರಬಹುದು. ಕೊಲೆಯಲ್ಲಿ ನನ್ನ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದೆರಡು ದಿನಗಳಿಂದ ನನಗೆ ಸಾಕಷ್ಟು ಮಾನಸಿಕ ಕಿರಿಕಿರಿ ಉಂಟಾಗಿದೆ. ಸ್ನೇಹಿತರು, ಸಂಬಂಧಿಕರು, ಹಿತೈಷಿಗಳು ದೂರವಾಣಿ ಕರೆ ಮಾಡಿ ನೈತಿಕ ಬೆಂಬಲ ನೀಡಿದ್ದಾರೆ. ಅನಗತ್ಯವಾಗಿ ನನ್ನ ಹೆಸರು ತಳಕು ಹಾಕಿರುವುದು ನನಗೆ ನೋವು ತಂದಿದೆ ಎಂದು ಪ್ರಭಾಕರ್ ಹೇಳಿದ್ದಾರೆ.

ಮಾನದಷ್ಟ ಮೊಕದ್ದಮೆ:

ಎಸ್‍ಐಟಿ ಮಾಡಿರುವ ಪ್ರಮಾದದಿಂದ ನನ್ನ ಚಾರಿತ್ರ್ಯಕ್ಕೆ ಧಕ್ಕೆಯಾಗಿದೆ. ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ನನ್ನ ಹೆಸರು ಕೇಳಿಬರುತ್ತಿರುವುದರಿಂದ ನಮ್ಮ ಕುಟುಂಬಕ್ಕೂ ಸಾಕಷ್ಟು ಆಘಾತವಾಗಿದೆ. ಇದಕ್ಕೆಲ್ಲ ಎಸ್‍ಐಟಿಯೇ ಕಾರಣವಾಗಿದ್ದು, ಅವರ ವಿರುದ್ಧ ನಾನು ಮಾನನಷ್ಟ ಮೊಕದ್ದಮ್ಮೆ ಹೂಡುತ್ತೇನೆ ಎಂದು ಪ್ರಭಾಕರ್ ತಿಳಿಸಿದ್ದಾರೆ.  ಈಗಾಗಲೇ ಈ ಸಂಬಂಧ ಕಾನೂನು ತಜ್ಞರ ಜೊತೆ ಮಾತುಕತೆ ನಡೆಸಿದ್ದೇನೆ. ಎಸ್‍ಐಟಿ ಸ್ಪಷ್ಟನೆ ನೀಡದಿದ್ದರೆ ಸದ್ಯದಲ್ಲೇ ಕಾನೂನು ಕ್ರಮ ಜರುಗಿಸಲು ಮುಂದಾಗುತ್ತೇನೆ ಎಂದು ಹೇಳಿದ್ದಾರೆ.

Facebook Comments

Sri Raghav

Admin