ಅಶ್ಲೀಲ ಚಿತ್ರ ವೀಕ್ಷಿಸಿದ ತನ್ವೀರ್ ಸೇಠ್ ವಿರುದ್ಧ ವಿಧಾನಸೌಧದಲ್ಲಿ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Vidhanasoudha-02

ಬೆಂಗಳೂರು, ನ.11- ನಿನ್ನೆ ರಾಯಚೂರಿನ ಟಿಪ್ಪು ಜಯಂತಿ ಕಾರ್ಯಕ್ರಮದ ಸಂದರ್ಭದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಮಾಡಿದ ಆರೋಪಕ್ಕೆ ಗುರಿಯಾಗಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ವಿಧಾನ ಪರಿಷತ್‍ನ ಮಾಜಿ ಉಪ ಸಭಾಪತಿ ಪುಟ್ಟಣ್ಣ, ವಿಧಾನ ಪರಿಷತ್ ಸದಸ್ಯರಾದ ಚೌಡರೆಡ್ಡಿ, ಟಿ.ಎ.ಶರವಣ, ಮಾಜಿ ಸಚಿವ ಬಸವರಾಜ ಹೊರಟ್ಟಿ ಅವರುಗಳು ವಿಧಾನಸೌಧದಲ್ಲಿಂದು ಧರಣಿ ನಡೆಸಿದರು. ವಿಧಾನಸೌಧದ ಎರಡನೆ ಮಹಡಿಯಲ್ಲಿರುವ ಸಚಿವ ತನ್ವೀರ್ ಸೇಠ್ ಅವರ ಕಚೇರಿಗೆ ಬೀಗ ಹಾಕಿ ಕಚೇರಿ ಮುಂದೆ ಕುಳಿತು ಸಚಿವರ ವಿರುದ್ಧದ ನಾಮಫಲಕಗಳನ್ನು ಪ್ರದರ್ಶಿಸಿ ಘೋಷಣೆ ಕೂಗಿದರು.

ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ ಪುಟ್ಟಣ್ಣ, ಸಚಿವರ ಕಚೇರಿಗೆ ಬೀಗ ಹಾಕಿ ಘೋಷಣೆ ಕೂಗುತ್ತ ರಾಜೀನಾಮೆಗೆ ಒತ್ತಾಯಿಸಿದರು. ಅಶ್ಲೀಲ ಚಿತ್ರ ವೀಕ್ಷಣೆ ಆರೋಪಕ್ಕೆ ಗುರಿಯಾಗಿರುವ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ರಾಜೀನಾಮೆ ನೀಡದಿದ್ದರೆ ಸಚಿವ ಸ್ಥಾನದಿಂದ ಮುಖ್ಯಮಂತ್ರಿಯವರು ವಜಾ ಮಾಡಬೇಕು ಎಂದು ಆಗ್ರಹಿಸಿದರು.  ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಸಚಿವರನ್ನು ವಜಾಗೊಳಿಸುವಂತೆ ಸಿದ್ದರಾಮಯ್ಯನವರು ಆಗ್ರಹಿಸಿದ್ದರು. ಈಗ ಅವರಿಗೇ ತಿರುಗುಬಾಣವಾಗಿದೆ. ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮೂರು ವರ್ಷ ಪೂರೈಸಿರುವ ಬಿಇಒ ಮತ್ತು ಡಿಡಿಪಿಐಗಳನ್ನು ವರ್ಗಾವಣೆಗೊಳಿಸುತ್ತಿಲ್ಲ ಎಂದು ಆರೋಪಿಸಿದರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅಜಯ್ ಸೇಠ್ ಅವರ ವಿರುದ್ಧವೂ ಘೋಷಣೆ ಕೂಗಿದ ಪ್ರತಿಭಟನಾಕಾರರು 1986-87ರಿಂದ 1994-95ರ ಅವಧಿಯಲ್ಲಿ ಪ್ರಾರಂಭವಾಗಿರುವ ಖಾಸಗಿ ಶಾಲೆ ಮತ್ತು ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಬೇಕು. ಪ್ರೌಢಶಾಲೆಗಳಲ್ಲಿ ಹಿಂಪಡೆದಿರುವ ವೇತನ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದರು. ಕಾಲ್ಪನಿಕ ವೇತನ ಬಡ್ತಿ ಸಮಸ್ಯೆ ಬಗೆಹರಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಇದೇ ಸಂದರ್ಭದಲ್ಲಿ ಆಗ್ರಹಿಸಿದರು.

ಮಾಜಿ ಸಚಿವ ಬಸವರಾಜ ಹೊರಟ್ಟಿ ಮಾತನಾಡಿ, ಸಚಿವ ತನ್ವೀರ್‍ಸೇಠ್ ಮತ್ತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅಜಯ್ ಸೇಠ್ ಅವರನ್ನು ಮುಖ್ಯಮಂತ್ರಿಗಳು ಬದಲಾಯಿಸಬೇಕು. ಶಿಕ್ಷಣ ಇಲಾಖೆ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ. ಅಶ್ಲೀಲ ಚಿತ್ರ ನೋಡಲು ಸಚಿವರಿಗೆ ಸಮಯವಿದೆ. ಶಿಕ್ಷಕರ ಬೇಡಿಕೆ ಮತ್ತು ಸಮಸ್ಯೆ ಬಗೆಹರಿಸಲು ಸಮಯವಿಲ್ಲ. ಇಬ್ಬರನ್ನೂ ಬದಲಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು. ಅಜಯ್ ಸೇಠ್ ಅವರು ಇದುವರೆಗೂ ನಾಲ್ಕು ಸಾವಿರ ಕಡತಗಳನ್ನು ವಿಲೇವಾರಿ ಮಾಡದೆ ಹಾಗೆಯೇ ಉಳಿಸಿಕೊಂಡಿದ್ದಾರೆ. ಇಂತಹವರಿಂದ ಶಿಕ್ಷಣ ಇಲಾಖೆ ಉದ್ಧಾರವಾಗುವುದಿಲ್ಲ. ಮೂರೂವರೆ ವರ್ಷದಲ್ಲಿ ಆಗಿರುವ ಅನಾಹುತವನ್ನು ಮುಂದಿನ 15 ತಿಂಗಳಲ್ಲಿ ಸರಿಪಡಿಸದಿದ್ದರೆ ಶಿಕ್ಷಕರು ದಂಗೆ ಏಳುತ್ತಾರೆ ಎಂದು ಹೊರಟ್ಟಿ ಎಚ್ಚರಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin