ಅಸಮಾಧಾನ, ಗೊಂದಲ, ಭಿನ್ನಮತ ಬಿಟ್ಟು ಪಕ್ಷ ಸಂಘಟಿಸಲು ಬಿಜೆಪಿ ನಾಯಕರಿಗೆ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Prakash-Javdekar--01

ಬೆಂಗಳೂರು,ಸೆ.25-ಪಕ್ಷದಲ್ಲಿ ಇನ್ನು ಮುಂದೆ ಯಾವುದೇ ರೀತಿಯ ಅಸಮಾಧಾನ, ಗೊಂದಲ, ಭಿನ್ನಮತಕ್ಕೆ ಅವಕಾಶವಿಲ್ಲದಂತೆ ಸಂಘಟನೆಗೆ ಒತ್ತು ನೀಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಎಲ್ಲರೂ ಶ್ರಮವಹಿಸುವಂತೆ ಕೇಂದ್ರ ಬಿಜೆಪಿ ನಾಯಕರು ತಾಕೀತು ಮಾಡಿದ್ದಾರೆ. ಕಳೆದ ರಾತ್ರಿ ದೆಹಲಿಯಲ್ಲಿ ಕೇಂದ್ರ ಸಚಿವ ಹಾಗೂ ಕರ್ನಾಟಕ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.  ಪಕ್ಷದಲ್ಲಿ ಪದೇ ಪದೇ ಅಸಮಾಧಾನದ ಮಾತುಗಳು ಕೇಳಿ ಬರುತ್ತಿದ್ದರೆ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಇದರಿಂದ ಸಂಘಟನೆಗೂ ಹಿನ್ನೆಡೆಯಾಗುತ್ತದೆ. ಮುಂದೆ ಇಂತಹ ಪ್ರಮಾದಗಳಿಗೆ ಎಡೆಮಾಡಿಕೊಡದೆ ಪ್ರತಿಯೊಬ್ಬರು ಸಂಘಟನೆಯಲ್ಲಿ ಸಕ್ರಿಯರಾಗಬೇಕೆಂದು ರಾಜ್ಯ ಘಟಕದ ನಾಯಕರಿಗೆ ಸೂಚಿಸಲಾಗಿದೆ.

ಸಭೆಯಲ್ಲಿ ಬಿಜೆಪಿ ಸಂಘಟನಾ ರಾಷ್ಟ್ರೀಯ ಸಹಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ಅಸಮಾಧಾನದ ಮಾತುಗಳು ಕೇಳಿಬಂದಿವೆ. ಇದನ್ನು ವರಿಷ್ಠರು ಪರಿಹರಿಸಲಿದ್ದಾರೆ. ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ವಹಿಸಿರುವ ಜವಾಬ್ದಾರಿಯನ್ನು ನಿಭಾಯಿಸಬೇಕೆಂದು ಸಲಹೆ ಮಾಡಲಾಗಿದೆ.  ಎಲ್ಲವೂ ಸರಿ ಹೋಯ್ತು ಎನ್ನುವಷ್ಟರಲ್ಲಿ ಪುನಃ ಭಿನ್ನಮತದ ಮಾತು ಕೇಳಿಬಂದರೆ ವಿರೋಧ ಪಕ್ಷಗಳು ಇಂತಹ ಅವಕಾಶಕ್ಕಾಗಿಯೇ ಕಾಯುತ್ತವೆ. ನಿಮ್ಮ ಒಂದೂ ಸಣ್ಣ ತಪ್ಪು ಕಾರ್ಯಕರ್ತರಿಗೆ ಸಹಿಸಲು ಸಾಧ್ಯವಾಗದ ನೋವು ತರುತ್ತದೆ. ಏನೇ ಸಣ್ಣಪುಟ್ಟ ಗೊಂದಲಗಳಿದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕೇ ವಿನಃ ಮಾಧ್ಯಮಗಳಿಗೆ ಇದು ಸೋರಿಕೆಯಾಗದಂತೆ ಎಚ್ಚರ ವಹಿಸಿ ಎಂದು ಕಿವಿಮಾತು ಹೇಳಲಾಗಿದೆ.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಭಿನ್ನಮತಕ್ಕೆ ಅವಕಾಶ ಕೊಟ್ಟರೆ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ರಾಷ್ಟ್ರೀಯ ಅಧ್ಯಕ್ಷರು ಸೂಚಿಸಿರುವ ಜವಾಬ್ದಾರಿಗಳನ್ನು ನಿಭಾಯಿಸಬೇಕು. ಕೇಂದ್ರ ಸರ್ಕಾರದ ಸಾಧನೆಗಳು, ರಾಜ್ಯ ಸರ್ಕಾರದ ವೈಫಲ್ಯಗಳನ್ನು ವಿಸ್ತರಕ್ ಕಾರ್ಯಕ್ರಮದ ಮೂಲಕ ಮನೆ ಮನೆಗೆ ತಲುಪುವಂತಹ ಕಾರ್ಯಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಿ ಎಂದು ಸಲಹೆ ಮಾಡಲಾಗಿದೆ.
ಸಭೆಯಲ್ಲಿ ರಾಜ್ಯದ ವಿದ್ಯಮಾನಗಳ ಕುರಿತು ಕೂಲಂಕುಷ ಚರ್ಚೆ ನಡೆಸಿದರು. ಸಭೆಯಲ್ಲಿ ನ.2ರಿಂದ ಆರಂಭವಾಗಲಿರುವ ಪರಿವರ್ತನಾ ರ್ಯಾಲಿ ಕುರಿತು ಈ ಸಂದರ್ಭ ಮಹತ್ವದ ಚರ್ಚೆ ನಡೆದಿದೆ.

ರಾಜ್ಯದ 120 ಕಡೆ ಈ ರ್ಯಾಲಿ ನಡೆಯಲಿದ್ದು, ಸುಮಾರು 25 ರ್ಯಾಲಿಗಳಲ್ಲಿ ಖುದ್ದು ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುತ್ತಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತï ಶಾ ಅವರು 50ಕ್ಕೂ ಹೆಚ್ಚು ರ್ಯಾಲಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರಿಂದ ಈ ಪರಿವರ್ತನಾ ರ್ಯಾಲಿ ಅತ್ಯಂತ ಮಹತ್ವ ಪಡೆದುಕೊಂಡಿದೆ. ರ್ಯಾಲಿಗೆ ಪ್ರಧಾನಿಯವರೇ ಖುದ್ದು ಆಗಮಿಸಿ ಚಾಲನೆ ನೀಡಲಿದ್ದಾರೆ.  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಶಾ ಅವರು ಅ. 4ರಂದು ರಾಜ್ಯಕ್ಕೆ ಆಗಮಿಸುವ ಸಾಧ್ಯತೆ ಇದೆ. ಅವರು ಮಂಗಳೂರಿನಲ್ಲಿ ಅವರು ಪಾದಯಾತ್ರೆ ನಡೆಸಲಿದ್ದಾರೆ.

ನಿನ್ನೆ ದೆಹಲಿಯ ಪ್ರಕಾಶ್ ಜಾವ್ಡೇಕರ್ ನಿವಾಸದಲ್ಲಿ ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು. ಕೇರಳದಲ್ಲಿ ನಡೆದ ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ಅಮಿತ್ ಷಾ ಅವರು. ಅ, 3,4 ಮತ್ತು 5ರಂದು ಕೇರಳದಲ್ಲಿ ಪಾದಯಾತ್ರೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಅಮಿತï ಶಾ ಅವರನ್ನು ಮಂಗಳೂರಿಗೆ ಕರೆತರಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ರಾಜ್ಯದ ಕರಾವಳಿ ಭಾಗದಲ್ಲಿ ನಡೆದ ಹಿಂದೂ ಕಾರ್ಯಕರ್ತರ ಹತ್ಯೆ ನಡೆಸಿ ಷಾ ಮಂಗಳೂರಿನಲ್ಲಿ ಪಾದಯಾತ್ರೆ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.

ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ್‍ಕುಮಾರ್, ಡಿ.ವಿ. ಸದಾನಂದಗೌಡ, ಸಂಸದ ಪ್ರಹ್ಲಾದ್ ಜೋಶಿ, ಮುಖಂಡರಾದ ಅರವಿಂದ ಲಿಂಬಾವಳಿ, ನಳೀನ್‍ಕುಮಾರ್ ಕಟೀಲು, ಅರುಣ್‍ಕುಮಾರ್, ಸಂತೋಷ್, ಸಿ.ಎಂ. ಉದಾಸಿ, ಗೋವಿಂದ ಕಾರಜೋಳ ಸೇರಿದಂತೆ ವಿವಿಧ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin