ಅಸಲಿ ನೋಟಿಗೂ ಮೊದಲೇ ಬಂತು ನಕಲಿ ನೋಟು…!

ಈ ಸುದ್ದಿಯನ್ನು ಶೇರ್ ಮಾಡಿ

Fake-Notes
ಬೆಂಗಳೂರು, ನ.12– ನವಭಾರತ ನಿರ್ಮಾಣಕ್ಕೆ ಮುನ್ನುಡಿ ಬರೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ 2,000 ರೂ. ಮುಖ ಬೆಲೆಯ ಹೊಸ ನೋಟನ್ನು ಬಿಡುಗಡೆ ಮಾಡಿರುವ ಬೆನ್ನಲ್ಲೇ ಅದೇ ಮೌಲ್ಯದ ಖೋಟಾನೋಟು ಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಚಿಕ್ಕಮಗಳೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ 2,000 ಮುಖ ಬೆಲೆಯ ಖೋಟಾನೋಟು ರೈತರೊಬ್ಬರಿಗೆ ಸಿಕ್ಕಿರುವುದು ಅನುಮಾನಕ್ಕೆ ರೆಕ್ಕೆ ಪುಕ್ಕ ಬಂದಂತಾಗಿದೆ. ಇಂದು ಬೆಳಗಿನ ಜಾವ ಅಶೋಕ್ ಎಂಬಾತ ತಾನು ಬೆಳೆದ ಈರುಳ್ಳಿ ಮಾರಾಟ ಮಾಡುವಾಗ ಈರುಳ್ಳಿ ಪಡೆದ ವ್ಯಕ್ತಿಯೊಬ್ಬ ಹೊಸ 2,000 ರೂ. ಮುಖ ಬೆಲೆಯ ನೋಟುಗಳನ್ನು ನೀಡಿದ್ದಾನೆ.

ಆತ ನೀಡಿದ ನೋಟುಗಳಲ್ಲಿ ಒಂದು ನೋಟು ಖೋಟಾ ನೋಟು ಎಂಬುದು ಈಗಾಗಲೇ ಖಾತ್ರಿಯಾಗಿದೆ. ನೋಟಿನ ಅಂಚು ಮತ್ತು ಮಧ್ಯ ಭಾಗ ಮಾಮೂಲಿ ನೋಟಿನಂತೆ ಇಲ್ಲ. ಅಂಚನ್ನು ಕತ್ತರಿಯಿಂದ ಕತ್ತರಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ.  ಹೀಗಾಗಿ 2,000 ಮುಖ ಬೆಲೆಯ ಖೋಟಾನೋಟುಗಳು ಮಾರುಕಟ್ಟೆಗೆ ಈಗಾಗಲೇ ದಾಂಗುಡಿ ಇಟ್ಟಿರುವುದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಇದೇ ಅಲ್ಲದೆ ಖೋಟಾನೋಟು ಮುದ್ರಣಕ್ಕೆ ಕುಖ್ಯಾತಿ ಪಡೆದಿರುವ ತಮಿಳುನಾಡಿನಲ್ಲಿ 8 ಲಕ್ಷ ಮೌಲ್ಯದ 2,000 ನೋಟುಗಳನ್ನು ಪೆÇಲೀಸರು ವಶಪಡಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇಡೀ ದೇಶದ ಆರ್ಥಿಕತೆ ಮೇಲೆ ಭಾರೀ ದುಷ್ಪರಿಣಾಮ ಬೀರುತ್ತಿರುವ ಕಪ್ಪು ಹಣ ಮತ್ತು ಖೋಟಾನೋಟುಗಳಿಗೆ ಕಡಿವಾಣ ಹಾಕಬೇಕು ಎಂಬ ಉದ್ದೇಶದಿಂದಲೇ ಕೇಂದ್ರ ಸರ್ಕಾರ 500 ಹಾಗೂ 2000 ಮುಖ ಬೆಲೆಯ ಹೊಸ ನೋಟಿನ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಆದರೆ ಅದೇ ನೋಟುಗಳ ಖೋಟಾ ನೋಟು ಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಕೆಲ ದುಷ್ಕರ್ಮಿಗಳು ಹಳೇ 500 ಹಾಗೂ 1,000 ನೋಟುಗಳಿಗೆ ಕೇವಲ ಶೇ.10 ರಿಂದ 15 ಕಮಿಷನ್ ಪಡೆದು ನೀವು ಕೇಳಿದಷ್ಟು ಹೊಸ 2,000 ಮುಖ ಬೆಲೆಯ ನೋಟುಗಳನ್ನು ನೀಡುತ್ತೇವೆ ಎಂದು ನಂಬಿಸುತ್ತಿರುವುದು ಕಂಡು ಬರುತ್ತಿದೆ. ಕೇವಲ ಬ್ಯಾಂಕ್‍ಗಳಲ್ಲಿ ಮಾತ್ರ 2,000 ಮುಖ ಬೆಲೆಯ ನೋಟುಗಳು ದೊರೆಯುತ್ತಿವೆ. ಆದರೆ ವಿದ್ರೋಹಿಗಳು ಕೋಟ್ಯಂತರ ರೂ.ಗಳ 2,000 ಮುಖ ಬೆಲೆಯ ನೋಟುಗಳನ್ನು ನೀಡುತ್ತೇವೆ ಎಂದು ನಂಬಿಸುತ್ತಿರುವುದರ ಹಿಂದೆಯೂ ಖೋಟಾನೋಟಿನ ವಾಸನೆ ಇರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.

ಹೀಗಾಗಿ ಸಾರ್ವಜನಿಕರು ಯಾವುದೇ ಆಮಿಷಕ್ಕೆ ಒಳಗಾಗದೆ ತಮ್ಮಲ್ಲಿರುವ ಹಳೇ ನೋಟುಗಳನ್ನು ಬ್ಯಾಂಕ್‍ಗಳಲ್ಲೇ ಬದಲಾಯಿಸಿಕೊಳ್ಳಬೇಕು. ತಮ್ಮ ಬಳಿ ಇರುವ ಕಪ್ಪು ಹಣವನ್ನು ಬ್ಯಾಂಕಿಗೆ ದಾಖಲಿಸಿ ತೆರಿಗೆ ಪಾವತಿಸಿ ಬಿಳಿ ಹಣವನ್ನಾಗಿ ಪರಿವರ್ತಿಸಿಕೊಳ್ಳಬೇಕು.  ಇಲ್ಲದಿದ್ದಲ್ಲಿ ಕಾಳ ಸಂತೆಕೋರರ ವಂಚನೆಗೆ ಬಲಿಯಾಗಿ ನೂರಾರು ಕೋಟಿ ರೂ.ಗಳನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಬಹುದು.

Facebook Comments

Sri Raghav

Admin