ಅಸಹಾಯಕ ಮಹಿಳೆಗೆ ನೆರವು ನೀಡಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

sIDDARAMIAHA-002

ಬೆಂಗಳೂರು, ಡಿ.15- ಪ್ರಧಾನಿ ನರೇಂದ್ರ ಮೋದಿ ನೋಟ್ ಬ್ಯಾನ್ ಮಾಡಿ ಎಲ್ಲದ್ದಕ್ಕೂ ಬೀಗ ಹಾಕಿದ್ದಾರೆ. ಈಗ ಮೊದಲಿನಂತೆ ಹಣ ಕೊಡಲು ಸಾಧ್ಯವಿಲ್ಲ. ಬೇಕಿದ್ದರೆ ಬಸ್ ಚಾರ್ಜ್ ಕೊಡುತ್ತೇನೆ. ಸುಮ್ಮನೆ ಊರಿಗೆ ಹೋಗು…. ಇದು ನೆರವು ಕೇಳಿ ಬಂದ ಮೈಸೂರು ಜಿಲ್ಲೆಯ ಮಹಿಳೆಯೊಬ್ಬರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ ಮಾತಿದು. ಮೈಸೂರು ಜಿಲ್ಲೆ ವರುಣಾ ತಾಲ್ಲೂಕಿನ ಚೆಟ್ಟನಹಳ್ಳಿಪಾಳ್ಯದ ಅಸಹಾಯಕ ಮಹಿಳೆ ಕಮಲಮ್ಮ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿ, ತೀವ್ರ ಸಂಕಷ್ಟದಲ್ಲಿದ್ದೇನೆ, ಆರ್ಥಿಕ ಸಹಾಯ ಮಾಡಿ ಎಂದು ಅಳಲು ತೋಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಅವರು, ಮೊದಲಿನ ಹಾಗೆ ಈಗ ದುಡ್ಡು ಕೊಡಲು ಸಾಧ್ಯವಾಗುವುದಿಲ್ಲ. 500 ಹಾಗೂ 1000ರೂ, ನೋಟು ಅಮಾನ್ಯವಾದ ಮೇಲೆ ಎಲ್ಲದಕ್ಕೂ ಕಡಿವಾಣ ಹಾಕಲಾಗಿದೆ. ಮೋದಿ ಎಲ್ಲದಕ್ಕೂ ಬೀಗ ಹಾಕಿದ್ದಾರೆ. ಬಸ್ ಚಾರ್ಜ್ ಕೊಡುತ್ತೇನೆ ಸುಮ್ಮನೆ ಮೈಸೂರಿಗೆ ಹೋಗು ಎಂದು ಹೇಳಿದರು.

ಮಹಿಳೆ ಪದೇ ಪದೇ ಮನವಿ ಮಾಡಿದರಾದರೂ ಅದು ಪ್ರಯೋಜನವಾಗಲಿಲ್ಲ. ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಮಲಮ್ಮ, ನನಗೆ ಇಬ್ಬರು ಗಂಡು ಹಾಗೂ ಒಬ್ಬ ಮಗಳಿದ್ದಾಳೆ. ಒಬ್ಬ ಮಗ ಎರಡು ವರ್ಷದ ಹಿಂದೆ ಸಾವನ್ನಪ್ಪಿದ್ದಾನೆ. ಇನ್ನೊಬ್ಬ ಮಗ ಮತ್ತು ಸೊಸೆ ಸೇರಿ ಆಸ್ತಿಗಾಗಿ ಕಿರುಕುಳ ಕೊಡುತ್ತಿದ್ದಾರೆ. ಎಲ್ಲವನ್ನು ಕಿತ್ತುಕೊಂಡು ನನ್ನನ್ನು ಬೀದಿಗೆ ತಳ್ಳಿದ್ದಾರೆ.  ಊರಿನಲ್ಲೇ ಇದ್ದರೆ ಜೀವ ತೆಗೆಯಬಹುದು ಎಂಬ ಭಯದಿಂದ ನಾನು ನನ್ನ ಮಗಳನ್ನು ಕರೆದುಕೊಂಡು ಬೆಂಗಳೂರಿಗೆ ಬಂದು ಮಾಗಡಿ ರಸ್ತೆಯ ಅಂದ್ರಹಳ್ಳಿಯಲ್ಲಿ ವಾಸ ಮಾಡುತ್ತಿದ್ದೇನೆ. ಹೋಟೆಲ್ ಸೇರಿದಂತೆ ವಿವಿಧ ಕಡೆ ಕೂಲಿ, ನಾಲಿ ಮಾಡಿ ಬದುಕು ನಡೆಸುತ್ತಿದ್ದೇನೆ. ಮಗಳಿಗೆ ಏನೂ ತಿಳಿಯುವುದಿಲ್ಲ. ಕಾಣದ ಊರು ಬೆಂಗಳೂರಿನಲ್ಲಿ ಆಕೆಯನ್ನು ಹೊರಗೆ ಕಳುಹಿಸಲು ಭಯವಾಗುತ್ತಿದೆ. ಜೀವನ ನಿರ್ವಹಣೆಗಾಗಿ ಏನಾದರೂ ಸಹಾಯ ಮಾಡಿ ಎಂದು ಮುಖ್ಯಮಂತ್ರಿ ಅವರನ್ನು ಕೇಳಿದೆ. ಆದರೆ ಸಹಾಯ ಸಿಗಲಿಲ್ಲ ಎಂದು ಅಳಲು ತೋಡಿಕೊಂಡರು.

Eesanje News App

Facebook Comments

Sri Raghav

Admin