ಆಂಧ್ರದ ಖ್ಯಾತ ಸಾಹಿತಿ ಡಾ. ಕಾಂಚ ಐಲಯ್ಯಗೆ ಜೀವ ಬೆದರಿಕೆ
ಹೈದರಾಬಾದ್, ಸೆ.12-ಬೆಂಗಳೂರಿನಲ್ಲಿ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಾರ್ವಜನಿಕರಲ್ಲಿ ಆತಂಕ ಮೂಡಿಸಿರುವಾಗಲೇ ಆಂಧ್ರ ಪ್ರದೇಶದ ಖ್ಯಾತ ಸಾಹಿತಿ ಡಾ. ಕಾಂಚ ಐಲಯ್ಯ ಅವರನ್ನು ಕೊಲ್ಲುವುದಾಗಿ ಜೀವ ಬೆದರಿಕೆ ಕರೆಗಳು ಬಂದಿವೆ. ಈ ಸಂಬಂಧ ಅವರು ಹೈದರಾಬಾದ್ನ ಉಸ್ಮಾನಿಯಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಿನ್ನೆಯಿಂದ ನನಗೆ ಹಲವಾರು ಅನಾಮಧೇಯ ಕರೆಗಳು ಬಂದಿದ್ದು, ನನ್ನನ್ನು ನಿಂದಿಸಲಾಗಿದೆ.
ನನ್ನ ಕೃತಿ ಮತ್ತು ಲೇಖನಗಳ ಬಗ್ಗೆ ಅಂತಾರಾಷ್ಟ್ರೀಯ ಆರ್ಯವೈಶ್ಯ ಸಂಘದ ಮುಖ್ಯಸ್ಥ ಕೆ.ರಾಮಕೃಷ್ಣ ಟಿವಿ ವಾರ್ತಾವಾಹಿನಿಯಲ್ಲಿ ಖಂಡಿಸಿದ್ದರು. ಕೆಲವರು ನನ್ನ ನಾಲಿಗೆ ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಕೆಲವೆಡೆ ನನ್ನ ಪ್ರತಿಕೃತಿಯನ್ನು ದಹನ ಮಾಡಲಾಗಿದೆ. ಫೋನ್ ಕರೆಗಳು, ಸಂದೇಶಗಳು ಮತ್ತು ಅದರಲ್ಲಿನ ವಾಚಾಮಗೋಚರ ಬೈಗುಳಗಳು ನನ್ನನ್ನು ದಿಗಿಲುಗೊಳಿಸಿವೆ. ನನಗೆ ಏನಾದರೂ ಆದರೆ ಇವರು ನೇರ ಹೊಣೆಗಾರರು ಎಂದು ಡಾ. ಕಾಂಚ ಐಲಯ್ಯ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ಧಾರೆ.
ಇವರ ಬರೆದಿರುವ ವೈಶ್ಯರು ಸಾಮಾಜಿಕ ಸ್ಮಗ್ಲರ್ಗಳು ಎಂಬ ಶೀರ್ಷಿಕೆಯ ಕೃತಿ ಆರ್ಯ ವೈಶ್ಯ ಸಮುದಾಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕೃತಿಯನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಲಾಗಿದೆ. ಅಲ್ಲದೆ, ಡಾ. ಕಾಂಚ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿ ಕಾನೂನು ಖಟ್ಲೆ ಹೂಡುವುದಾಗಿಯೂ ಸಮುದಾಯದ ಮುಖಂಡರು ಹೇಳಿದ್ದಾರೆ.