ಆಂಧ್ರ-ಓಡಿಶಾ ಗಡಿಯಲ್ಲಿ ಎನ್‍ಕೌಂಟರ್ : 21 ಮಾವೋ ಉಗ್ರರ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

18-KIled

ವಿಶಾಖಪಟ್ಟಣಂ, ಅ.24- ಭದ್ರತಾಪಡೆಗಳ ಮಾರಣಹೋಮ ನಡೆಸುತ್ತಿರುವ ನಕ್ಸಲರ ನಿಗ್ರಹಕ್ಕೆ ಪಣ ತೊಟ್ಟಿರುವ ಆಂಧ್ರಪ್ರದೇಶ ಮತ್ತು ಓಡಿಶಾ ಗ್ರೇಹೌಂಡ್ ಪಡೆಗಳು ಈ ರಾಜ್ಯಗಳ ಗಡಿ ಭಾಗದಲ್ಲಿ 21 ಮಾವೋವಾದಿಗಳನ್ನು ಭೀಕರ ಗುಂಡಿನ ಚಕಮಕಿಯಲ್ಲಿ ಕೊಂದು ಹಾಕಿವೆ. ಸುಮಾರು ಒಂದು ಗಂಟೆ ಕಾಲ ನಡೆದ ಎನ್‍ಕೌಂಟರ್‍ನಲ್ಲಿ ಓರ್ವ ಡಿಎಸ್ಪಿ ಸೇರಿದಂತೆ ಮೂವರು ಪೇದೆಗಳು ತೀವ್ರ ಗಾಯಗೊಂಡಿದ್ದಾರೆ.  ಹತರಾದ ಮಾವೋವಾದಿಗಳಿಂದ ನಾಲ್ಕು ಎಕೆ-45 ರೈಫಲ್‍ಗಳು, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಘಟನೆ ವಿವರ :

ಆಂಧ್ರಪ್ರದೇಶ ಮತ್ತು ಓಡಿಶಾ ಗಡಿಯ ಮಲ್ಕನ್‍ಗಿರಿಯ ಗಾಮಗುರ್ಹಾದಿಂದ 10 ಕಿ.ಮೀ.ದೂರದ ಐಬೋವೊ ದಟ್ಟ ಅರಣ್ಯ ಪ್ರದೇಶದಲ್ಲಿ ಕನಿಷ್ಠ 50-60 ಮಾವೋ ಉಗ್ರರು ಜಮಾವಣೆಗೊಂಡಿದ್ದಾರೆ ಎಂಬ ಬಗ್ಗೆ ಗ್ರೇಹೌಂಡ್ ಫೋ ರ್ಸ್‍ಗೆ (ನಕ್ಸಲ್ ನಿಗ್ರಹ ಜಂಟಿ ವಿಶೇಷ ಪಡೆ) ನಿಖರ ಮಾಹಿತಿ ಲಭಿಸಿತು.  ವಿಶೇಷ ಪಡೆ ಇಂದು ನಸುಕಿನಲ್ಲಿ ಆ ಪ್ರದೇಶದ ಮಾವೋವಾದಿ ಶಿಬಿರದ ಮೇಲೆ ಹಠಾತ್ ದಾಳಿ ನಡೆಸಿತು. ಅಲ್ಲಿದ್ದ ಬಂಡುಕೋರರು ತಕ್ಷಣ ಎಚ್ಚೆತ್ತುಕೊಂಡು ಪ್ರತಿದಾಳಿ ನಡೆಸಿದಾಗ ಭೀಕರ ಎನ್‍ಕೌಂಟರ್ ನಡೆಯಿತು.
ಮೇಲುಗೈ ಸಾಧಿಸಿದ ಗ್ರೇಹೌಂಡ್ ಪಡೆ 21 ಮಾವೋವಾದಿಗಳನ್ನು ಕೊಂದರು. ಉಳಿದ ನಕ್ಸಲರು ಪರಾರಿಯಾಗಿದ್ದು, ಆ ಪ್ರದೇಶದಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ.

ಗುಂಡಿನ ಚಕಮಕಿಯಲ್ಲಿ ಡಿಎಸ್ಪಿ ಶ್ರೇಣಿಯ ಓರ್ವ ಅಧಿಕಾರಿ ಮತ್ತು ಇಬ್ಬರು ಪೇದೆಗಳು ತೀವ್ರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೆಲಿಕಾಪ್ಟರ್ ಮೂಲಕ ಕಿಂಗ್ ಜಾರ್ಜ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸುದ್ದಿ ತಿಳಿದ ಕೂಡಲೇ ಆಂಧ್ರಪ್ರದೇಶದ ಪೊಲೀಸ್ ಮಹಾ ನಿರ್ದೇಶಕ ನಂದೂರಿ ಸಾಂಬಶಿವ ರಾವ್ ವಿಶಾಖಪಟ್ಟಣಕ್ಕೆ ಧಾವಿಸಿದರು.
ಹತರಾದ ಮಾವೋವಾದಿಗಳಿಂದ ನಾಲ್ಕು ಎಕೆ-45 ರೈಫಲ್‍ಗಳು, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.  ಈ ಅರಣ್ಯ ಪ್ರದೇಶದಲ್ಲಿ ಮತ್ತಷ್ಟು ಮಾವೋವಾದಿ ಉಗ್ರರು ಅಡಗಿರುವ ಶಂಕೆ ಇದ್ದು, ಶೋಧ ಕಾರ್ಯಾಚರಣೆ ತೀವ್ರಗೊಂಡಿದೆ.

► Follow us on –  Facebook / Twitter  / Google+

Facebook Comments

Sri Raghav

Admin