ಆಂಧ್ರ ಮುಖ್ಯಮಂತ್ರಿ ನಾಯ್ಡು ವಿರುದ್ಧ ಅರೆಸ್ಟ್ ವಾರಂಟ್

ಈ ಸುದ್ದಿಯನ್ನು ಶೇರ್ ಮಾಡಿ

Chandrababu-Naidu
ಹೈದರಾಬಾದ್,ಸೆ.14- ಗೋದಾವರಿ ನದಿಯ ಬಬ್ಲಿ ಪ್ರಾಜೆಕ್ಟ್ ವಿರುದ್ಧ 2010ರಲ್ಲಿ ನಡೆದ ಆಂದೋಲನದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಮತ್ತು ಇತರ 15 ಮಂದಿ ವಿರುದ್ಧ ಮಹಾರಾಷ್ಟ್ರದ ಸ್ಥಳೀಯ ನ್ಯಾಯಾಲಯ ಅರೆಸ್ಟ್ ವಾರಂಟ್ ಜಾರಿ ಮಾಡಿದೆ.

ಸೆ.21ರಂದು ತನ್ನ ಮುಂದೆ ಹಾಜರುಪಡಿಸಬೇಕೆಂದು ನಾಂದೇಡ್ ಜಿಲ್ಲೆಯ ಧರ್ಮಬಾದ್‍ನ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಎನ್ ಆರ್.ಗಜಭಿಯೇ ಆದೇಶ ಹೊರಡಿಸಿದ್ದಾರೆ. ಮಹಾರಾಷ್ಟ್ರದ ಬಬ್ಲಿ ಯೋಜನೆಯ ತಾಣದಲ್ಲಿ 2010ರಲ್ಲಿ ಚಂದ್ರಬಾಬು ನಾಯ್ಡು ಮತ್ತು ಇತರ 15 ಮಂದಿ ಪ್ರತಿಭಟನೆ ನಡೆಸಿ ಬಂಧಿತರಾಗಿ ಪುಣೆ ಜೈಲು ಸೇರಿದ್ದರು.

ಅಂದು ವಿರೋಧ ಪಕ್ಷದಲ್ಲಿದ್ದ ಈ ಬಂಧಿತರಲ್ಲಿ ಯಾರೂ ಜಾಮೀನು ಪಡೆದಿರಲಿಲ್ಲ; ಆದರೂ ಅನಂತರ ಅವರನ್ನು ಬಿಡುಗಡೆ ಮಾಡಲಾಗಿತ್ತು.
ಮಹಾರಾಷ್ಟ್ರ ನಿವಾಸಿಗಳು ದಾಖಲಿಸಿದ್ದ ಅರ್ಜಿಯ ಪ್ರಕಾರ ನ್ಯಾಯಾಲಯವು ಜು.5ರಂದು ಹೊರಡಿಸಿದ್ದ ಅರೆಸ್ಟ್ ವಾರಂಟನ್ನು ಆ.16ರಂದು ಜಾರಿ ಮಾಡುವುದಿತ್ತು. ಆದರೆ ಅದನ್ನು ಮಾರ್ಪಡಿಸಲಾಗಿ ಸೆ.21ಕ್ಕೆ ನಿಗದಿಪಡಿಸಲಾಯಿತು.

ನಾಯ್ಡು ಅವರಲ್ಲದೆ ಅಂದು ಕೇಸು ದಾಖಲಿಸಿದ್ದ ಜಲಸಂಪನ್ಮೂಲ ಸಚಿವ ದೇವಿನೇನಿ ಉಮಾಮಹೇಶ್ವರ ರಾವ್, ಸಮಾಜ ಕಲ್ಯಾಣ ಸಚಿವ ಎನ್ ಆನಂದ ಬಾಬು, ಮಾಜಿ ಶಾಸಕ ಜಿ ಕಮಲಾಕರ್ (ಇವರೆಲ್ಲ ಅನಂತರ ಟಿಆರ್‍ಎಸ್ ಸೇರಿದರು) ಅಂದು ತೆಲುಗು ದೇಶಂ ಪಕ್ಷದ ಕಾರ್ಯಕರ್ತರಾಗಿದ್ದರು.

Facebook Comments

Sri Raghav

Admin