ಆಟೋಗೆ ಅತಿ ವೇಗವಾಗಿ ಗುದ್ದಿದ ಲಾರಿ, ಸ್ಥಳದಲ್ಲೇ ನಾಲ್ವರ ದುರ್ಮರಣ
ಚಿತ್ರದುರ್ಗ, ಆ.17- ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಆಟೋಗೆ ಅತಿ ವೇಗವಾಗಿ ಮುನ್ನುಗ್ಗಿದ ಲಾರಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಧ್ಯರಾತ್ರಿ ಸಂಭವಿಸಿದೆ.
ಹಿರಿಯೂರು ನಗರದ ನಂಜಯ್ಯನಕೊಟ್ಟಿಗೆ ಗ್ರಾಮದ ನಿವಾಸಿಗಳಾದ ಮುತ್ತು (28), ಚರಣ್ (30), ಚಿದಾನಂದ (27) ಮತ್ತು ಮನು (29) ಮೃತಪಟ್ಟ ದುರ್ದೈವಿಗಳು.
ಗಾಯಗೊಂಡಿರುವ ಇನ್ನಿಬ್ಬರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂಜಯ್ಯನಕೊಟ್ಟಿಗೆಯಿಂದ ಆಟೋದಲ್ಲಿ ಆರು ಮಂದಿ ಪ್ರಯಾಣಿಕರು ಚಳ್ಳಕೆರೆ ಕಡೆಗೆ ಹೋಗುತ್ತಿದ್ದಾಗ ಶ್ರೀರಂಗಪಟ್ಟಣ-ಬೀದರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಳ್ಳಕೆರೆ ಕಡೆಯಿಂದ ಹಿರಿಯೂರು ಕಡೆಗೆ ಹೋಗುತ್ತಿದ್ದ ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುದ್ದಿ ತಿಳಿದ ಸಿಪಿಐ ಗುರುರಾಜ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಾರಿಯ ಡಿಕ್ಕಿ ರಭಸಕ್ಕೆ ಆಟೋ ನಜ್ಜುಗುಜ್ಜಾಗಿದ್ದಲ್ಲದೆ ನಾಲ್ವರ ಮೃತದೇಹಗಳು ಒಂದೊಂದು ಕಡೆ ಬಿದ್ದಿದ್ದವು.
ಮಧ್ಯರಾತ್ರಿ 12.30ರಿಂದ 1 ಗಂಟೆ ನಡುವೆ ಸಂಭವಿಸಿದ ಈ ಅಪಘಾತದಿಂದಾಗಿ ಮುಂಜಾನೆ ಸುಮಾರು ಒಂದು ಕಿಲೋ ಮೀಟರ್ ಉದ್ದದಷ್ಟು ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿ ವಾಹನಗಳು ನಿಂತಲ್ಲೇ ನಿಂತಿದ್ದುದು ಕಂಡುಬಂತು. ಐಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.