ಆಟೋ ಚಾಲಕನನ್ನು ಕೊಲೆ ಮಾಡಿದ್ದ ಆರೋಪಿ 24 ಗಂಟೆಯೊಳಗೆ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Bengaluru--Murder-01

ಬೆಂಗಳೂರು, ಜು.25- ಹಣಕಾಸಿನ ವಿಚಾರವಾಗಿ ಸ್ನೇಹಿತನ ಜತೆ ಜಗಳವಾಡಿ ಆತನನ್ನು ಕೊಲೆ ಮಾಡಿದ್ದ ಆರೋಪಿಯನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಮೂಲತಃ ಮಾಗಡಿ ತಾಲೂಕಿನ ನಾಗೇಂದ್ರ (26) ಬಂಧಿತ ಕೊಲೆ ಆರೋಪಿ.
ನಾಗೇಂದ್ರ ಮತ್ತು ಕುಣಿಗಲ್ ತಾಲೂಕು ಅಂಚೆಪಾಳ್ಯದ ರವಿಕುಮಾರ್ ಆಟೋ ಚಾಲಕರಾಗಿದ್ದು, ಇವರಿಬ್ಬರೂ ಸ್ನೇಹಿತರು.  ನಾಲ್ಕು ವರ್ಷದ ಹಿಂದೆ ರವಿಕುಮಾರ್ ತನ್ನ ಸ್ನೇಹಿತ ನಾಗೇಂದ್ರನಿಗೆ 4.5 ಲಕ್ಷ ರೂ. ಸಾಲ ನೀಡಿದ್ದನು. ಈ ಹಣ ಹಿಂದಿರುಗಿಸುವಂತೆ ಹಲವಾರು ಬಾರಿ ರವಿ ಕೇಳುತ್ತಿದ್ದರೂ ಕೊಡದೆ ನಾಗೇಂದ್ರ ಸತಾಯಿಸುತ್ತಿದ್ದನು. ಸಾಲದ ವಿಚಾರವಾಗಿ ಅನೇಕ ಸಲ ಇವರಿಬ್ಬರ ನಡುವೆ ಜಗಳವೂ ನಡೆದಿತ್ತು ಎನ್ನಲಾಗಿದೆ.

ಭಾನುವಾರ ರಾತ್ರಿ ಸಾಲದ ಹಣದ ವಿಚಾರವಾಗಿ ಮಾತನಾಡಬೇಕೆಂದು ನಾಗೇಂದ್ರ ಮಾಳಗಾಲದಲ್ಲಿರುವ ತನ್ನ ಸ್ನೇಹಿತ ಶಿವರಾಜ್ ಎಂಬಾತನ ರೂಮ್‍ಗೆ ರವಿಕುಮಾರ್‍ನನ್ನು ಕರೆದೊಯ್ದು ಪಾರ್ಟಿ ಮಾಡಿದ್ದಾರೆ. ಈ ವೇಳೆ ಮೂವರೂ ಮದ್ಯ ಸೇವಿಸಿದ್ದು, ಮದ್ಯದ ನಶೆಯಲ್ಲಿದ್ದ ರವಿಕುಮಾರ್ ಸಾಲ ಹಿಂದಿರುಗಿಸುವಂತೆ ನಾಗೇಂದ್ರನಿಗೆ ಕೇಳಿದ್ದಾನೆ. ಈ ವಿಚಾರವಾಗಿ ಸಣ್ಣದಾಗಿ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿದಾಗ ನಾಗೇಂದ್ರ ಕೈಗೆ ಸಿಕ್ಕ ಕ್ರಿಕೆಟ್ ಬ್ಯಾಟ್‍ನಿಂದ ರವಿಕುಮಾರ್ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದನು.

ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಹಣದ ವಿಚಾರವಾಗಿ ಕೊಲೆ ನಡೆದಿರಬಹುದೆಂದು ಶಂಕೆ ವ್ಯಕ್ತಪಡಿಸಿ ತನಿಖೆ ಕೈಗೊಂಡು ಇಂದು ಬೆಳಗ್ಗೆ 6 ಗಂಟೆಯಲ್ಲಿ ಆರೋಪಿ ನಾಗೇಂದ್ರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ನಾಗೇಂದ್ರನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ನಡೆದ ಘಟನೆಯನ್ನು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin