ಆಟೋ ಚಾಲಕನಿಗೆ ಚಾಕುವಿನಿಂದ ಇರಿದಿದ್ದ ವ್ಯಕ್ತಿ ಬಂಧನ
ಚನ್ನಪಟ್ಟಣ, ಆ.23- ಆಟೋ ಬಾಡಿಗೆಗೆ ಪಡೆದ ವ್ಯಕ್ತಿಯೊಬ್ಬ ಚಾಲಕನಿಗೆ ಚಾಕುವಿನಿಂದ ಇರಿದು ಮನಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ಘಟನೆ ನಡೆದ ಒಂದೇ ತಾಸಿನಲ್ಲಿ ನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಯಾರಬ್ನಗರ ನಿವಾಸಿ ನಿಸಾರ್ ಬಂಧಿತ ಆರೋಪಿ.ಆಟೋ ಚಾಲಕ ರಫಿ ಎಂಬಾತನನ್ನು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಆಟೋ ಬಾಡಿಗೆಗೆ ಪಡೆದು ನಿಸಾರ್ ಕರೆದುಕೊಂಡು ಹೋಗಿದ್ದಾನೆ. ಬಾಡಿಗೆ ವಿಚಾರವಾಗಿ ಜಗಳ ನಡೆದಿದ್ದು, ಏಕಾಏಕಿ ತನ್ನ ಬಳಿ ಇದ್ದ ಹರಿತವಾದ ಚಾಕುವಿನಿಂದ ಕತ್ತಿನ ಭಾಗಕ್ಕೆ ಇರಿದು ಮೊಬೈಲ್ ಕಸಿದು ಪರಾರಿಯಾಗಿದ್ದನು.
ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಆಟೋ ಚಾಲಕನನ್ನು ಸಾರ್ವಜನಿಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿ ನಿಸಾರ್ನನ್ನು ಘಟನೆ ನಡೆದ ಒಂದು ತಾಸಿನಲ್ಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತನು ಮಾದಕ ದ್ರವ್ಯ ವ್ಯಸನಿಯಾಗಿದ್ದು, ದಿನದ 24 ಗಂಟೆಯೂ ಮತ್ತಿನಲ್ಲೇ ಇರುತ್ತಾನೆಂದು ವಿಚಾರಣೆ ವೇಳೆ ತಿಳಿದುಬಂದಿದೆ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
► Follow us on – Facebook / Twitter / Google+