ಆಡಂಬರವಿಲ್ಲದ ಸಾಂಪ್ರದಾಯಿಕ ದಸರಾ : ಉದ್ಘಾಟನೆಗೆ ಸಾಹಿತಿ ಚನ್ನವೀರಕಣವಿಗೆ ಆಹ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

channaveer-kanavi

ಮೈಸೂರು, ಆ.9- ಈ ಬಾರಿಯ ಮೈಸೂರು ದಸರಾ ಉದ್ಘಾಟನೆಗೆ ಖ್ಯಾತ ಸಾಹಿತಿ ಡಾ.ಚನ್ನವೀರಕಣವಿ ಅವರನ್ನು ಆಹ್ವಾನಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಇಂದಿಲ್ಲಿ ತಿಳಿಸಿದರು.   ನಗರದಲ್ಲಿಂದು ನಡೆದ ಮೈಸೂರು ದಸರಾ ಉಪಸಮಿತಿ ಸಭೆಯ ನಂತರ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ದಸರಾ  ಮಹೋತ್ಸವವನ್ನು ಅದ್ಧೂರಿ ಹಾಗೂ ಆಡಂಬರವಾಗಿ ನಡೆಸದೆ ಸಾಂಪ್ರದಾಯಿಕವಾಗಿ ಆಚರಿಸಲಾಗುವುದು ಎಂದರು.  ಆ.21ರಂದು ಆನೆಗಳ ಮೊದಲ ತಂಡ ಮೈಸೂರಿಗೆ ಆಗಮಿಸಲಿದೆ. ಅಂದು ಬೆಳಗ್ಗೆ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ 750ಕೆಜಿ ತೂಕದ ಚಿನ್ನದ ಅಂಬಾರಿ ಹೊರುವ ಆನೆ ಅರ್ಜುನ ನೇತೃತ್ವದಲ್ಲಿ 6 ಆನೆಗಳ ಮೊದಲ ತಂಡ ಮೈಸೂರಿಗೆ ಗಜಪಯಣ ಆರಂಭವಾಗಲಿದೆ ಎಂದು ತಿಳಿಸಿದರು.
ಆನೆಗಳ ಎರಡೂ ತಂಡ ಮೈಸೂರಿಗೆ ಆಗಮಿಸಲಿದ್ದು, ಆ.26ರಂದು ಅರಮನೆ ಆವರಣದಲ್ಲಿ ಆನೆಗಳನ್ನು ದಸರಾಗೆ ಬರಮಾಡಿಕೊಳ್ಳಲಾಗುವುದು ಎಂದರು.  ದಸರಾ ಪ್ರಯುಕ್ತ ಯುವದಸರಾ, ಯುವ ಸಂಭ್ರ, ರೈತ ದಸರಾ ಸೇರಿದಂತೆ 18 ಉಪ ಸಮಿತಿಗಳನ್ನು ರಚಿಸಲಾಗುವುದು ಎಂದು ತಿಳಿಸಿದ ಸಚಿವರು, ಪ್ರತಿ ಸಮಿತಿಯಲ್ಲಿ 10ರಿಂದ 15 ಮಂದಿ ಸದಸ್ಯರಿರುತ್ತಾರೆ. ಈ ಬಾರಿಯ ದಸರಾ ಮಹೋತ್ಸವಕ್ಕಾಗಿ 14.5 ಕೋಟಿ ರೂ.ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪೈಕಿ 1.5 ಕೋಟಿ ರೂ. ಚಾಮರಾಜನಗರಕ್ಕೆ, 50 ಲಕ್ಷ ಶ್ರೀರಂಗಪಟ್ಟಣಕ್ಕೆ ದಸರಾ ಆಚರಿಸಲು ನೀಡಲಾಗುತ್ತದೆ ಎಂದು ವಿವರಿಸಿದರು. ನಗರ ಪೊಲೀಸ್ ಆಯುಕ್ತ ದಯಾನಂದ್ ಮಾತನಾಡಿ, ದಸರಾಗೆ ಉಗ್ರರ ಕರಿಛಾಯೆ ಇಲ್ಲ. ನಾವು ಎಲ್ಲಾ ರೀತಿಯಲ್ಲೂ ಸನ್ನದ್ಧರಾಗಿದ್ದೇವೆ. ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.  ಸಭೆಯಲ್ಲಿ ಸಚಿವರಾದ ಪ್ರಿಯಾಂಕಖರ್ಗೆ, ತನ್ವೀರ್‍ಸೇಠ್, ಶಾಸಕರಾದ ಸಾ.ರಾ.ಮಹೇಶ್, ಎಂ.ಕೆ.ಸೋಮಶೇಖರ್ ಹಾಗೂ ಜಿಲ್ಲಾಧಿಕಾರಿ ಶಿಖಾ ಇದ್ದರು.

Facebook Comments

Sri Raghav

Admin