ಆತ್ಮಹತ್ಯೆಗೆ ಕೆರೆಗೆ ಹಾರಿದ್ದ ಅಜ್ಜನನ್ನು ರಕ್ಷಿಸಲು ಹೋದ ಮೊಮ್ಮಗನೂ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Suicide-Water-02

ಕೆ.ಆರ್.ಪೇಟೆ, ನ.18- ಸಾಲದ ಬಾಧೆ ತಾಳಲಾರದೆ ರೈತನೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಜೊತೆಗೆ ರೈತನನ್ನು ರಕ್ಷಿಸಲು ಯತ್ನಿಸಿದ ಆತನ ಮೊಮ್ಮಗನೂ ನೀರು ಪಾಲಾಗಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ನಾಗರಘಟ್ಟ ಗ್ರಾಮದಲ್ಲಿ ನಡೆದಿದೆ.ನಾಗರಘಟ್ಟ ಗ್ರಾಮದ ಸುಬ್ಬಯ್ಯ(65) ಮತ್ತು ಸುಬ್ಬಯ್ಯ ಅವರ ಮೊಮ್ಮಗ ರವಿಕುಮಾರ್(18) ಮೃತಪಟ್ಟ ನತದೃಷ್ಟರು.

ಘಟನೆ ವಿವರ: ನಾಗರಘಟ್ಟ ಗ್ರಾಮದ ಸುಬ್ಬಯ್ಯ ಅವರು ಅಘಲಯ ಗ್ರಾಮದ ಭಾರತೀಯ ಸ್ಟೇಟ್ ಬ್ಯಾಂಕ್‍ನಲ್ಲಿ 2 ಲಕ್ಷ ಬೆಳೆ ಸಾಲ, ಜೊತೆಗೆ ಎರಡೂವರೆ ಲಕ್ಷ ರೂ. ಕೈಸಾಲ ಮಾಡಿಕೊಂಡಿದ್ದರು. ಈ ಭಾರಿ ಮುಂಗಾರು ಮಳೆ ಇಲ್ಲದೆ ಯಾವುದೇ ಬೆಳೆಯನ್ನು ಬೆಳೆಯಲು ಸಾಧ್ಯವಾಗಿರಲಿಲ್ಲ. ನಂತರ ಹಿಂಗಾರು ಮಳೆ ಬಿದ್ದು ಗ್ರಾಮದ ಕೆರೆ ತುಂಬಿದ್ದರೂ ಸಹ ಯಾವುದೇ ಬೆಳೆ ಹಾಕಲು ಅವಕಾಶವಾಗಿರಲಿಲ್ಲ.
ಬ್ಯಾಂಕ್‍ನವರು ಸಾಲವನ್ನು ಮರುಪಾವತಿ ಮಾಡುವಂತೆ ತಿಳುವಳಿಕೆ ಪತ್ರ ನೀಡಿದ್ದರು ಎನ್ನಲಾಗಿದೆ ಇದರಿಂದ ಮನನೊಂದು ನಾಗರಘಟ್ಟ ಗ್ರಾಮದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೇ ಮಾರ್ಗವಾಗಿ ಜಮೀನಿನ ಕಡೆ ಹೊರಟಿದ್ದ ಅವರ ಮೊಮ್ಮಗ ರವಿಕುಮಾರ್ ತಾತ ಬಿದ್ದ ಜಾಗದಲ್ಲಿ ನೀರಿಗಿಳಿದು ಮೇಲೆತ್ತುವ ಪ್ರಯತ್ನ ಮಾಡಿದನು. ಆದರೆ ಆತನೂ ಸಹ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಘಟನೆ ಕುರಿತು ಮೃತ ರವಿಕುಮಾರ್ ಅವರ ತಂದೆ ಗೋವಿಂದರಾಜು ಅವರು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಜಿ.ಪಂ.ಅಧ್ಯಕ್ಷೆ ಜೆ.ಪ್ರೇಮಕುಮಾರಿ, ಟಿಎಪಿಸಿಎಂಎಸ್ ಅಧ್ಯಕ್ಷ ಎ.ಎಸ್.ಶ್ರೀಧರ್, ತಾ.ಪಂ. ಉಪಾಧ್ಯಕ್ಷ ಜಾನಕೀರಾಂ, ರಾಜ್ಯ ಕಿಯೋನಿಕ್ಸ್ ನಿರ್ದೇಶಕ ಎ.ಎಸ್.ಮಂಜುನಾಥ್, ತಾ.ಪಂ.ಸದಸ್ಯ ರಾಜಾಹುಲಿ ದಿನೇಶ್, ಎಪಿಎಂಸಿ ನಿರ್ದೇಶಕ ಚಂದ್ರಹಾಸ ಮತ್ತಿತರರು ಮೃತರ ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸಾಂತ್ವನ ಹೇಳಿದರು.

Facebook Comments

Sri Raghav

Admin