ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಕುಟುಂಬ : ಪತ್ನಿ-ಮಕ್ಕಳು ಸಾವು, ಕಾನ್‍ಸ್ಟೆಬಲ್ ಸ್ಥಿತಿ ಚಿಂತಾಜನಕ

ಈ ಸುದ್ದಿಯನ್ನು ಶೇರ್ ಮಾಡಿ

Police-Family-Suicide

ಬೆಂಗಳೂರು, ಮೇ 23-ಇಡೀ ಪೊಲೀಸ್ ಕುಟುಂಬ ಆತ್ಮಹತ್ಯೆಗೆ ಯತ್ನಿಸಿದ್ದು, ಪತ್ನಿ ಮತ್ತು ಮಕ್ಕಳು ಸಾವನ್ನಪ್ಪಿ ಕಾನ್‍ಸ್ಟೆಬಲ್ ಚಿಂತಾಜನಕ ಸ್ಥಿತಿ ತಲುಪಿರುವ ಕರುಣಾಜನಕ ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮುಖ್ಯಮಂತ್ರಿಗಳ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಎಆರ್ ಕಾನ್‍ಸ್ಟೆಬಲ್ ಸುಭಾಷ್ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಪತ್ನಿ ವೀಣಾ, ಮಕ್ಕಳಾದ ಮಾನ್ಯ(3), ಒಂದೂವರೆ ವರ್ಷದ ಪೃಥ್ವಿ ದಾರುಣ ಸಾವನ್ನಪ್ಪಿದ್ದಾರೆ. ನಿನ್ನೆ ರಾತ್ರಿಯೇ ಸುಭಾಷ್ ಕುಟುಂಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದ್ದು, ಇಂದು ಮುಂಜಾನೆ ಪ್ರಕರಣ ಬೆಳಕಿಗೆ ಬಂದಿದೆ .ಬೆಳ್ಳಂಬೆಳಗ್ಗೆ ಸುಭಾಷ್ ಸಹೋದರ ಮನೆಗೆ ಬಂದಾಗ ಸುಭಾಷ್ ಸ್ಥಿತಿ ಚಿಂತಾಜನಕವಾಗಿದ್ದನ್ನು ಕಂಡು ತಕ್ಷಣ ಅಕ್ಕಪಕ್ಕದವರನ್ನು ಕರೆತಂದರು. ನೆರೆಹೊರೆಯವರು ಬಂದು ನೋಡಿದಾಗ ಸುಭಾಷ್ ಪತ್ನಿ, ಮಕ್ಕಳು ಮೃತಪಟ್ಟಿದ್ದರು. ಸುಭಾಷ್ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದುದನ್ನು ಕಂಡು ತಕ್ಷಣ ಆಸ್ಪತ್ರೆಗೆ ದಾಖಲಿಸಿದರು.   ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾನ್‍ಸ್ಟೆಬಲ್ ಸುಭಾಷ್ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರಣ ತಿಳಿದುಬಂದಿಲ್ಲ:

ಸಿಎಆರ್‍ನ ಕಾನ್‍ಸ್ಟೆಬಲ್ ಆಗಿರುವ ಸುಭಾಷ್ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಸಂಪಿಗೆಹಳ್ಳಿ ಠಾಣೆ ಹಿಂಭಾಗದಲ್ಲಿರುವ ಪೊಲೀಸ್ ವಸತಿ ಗೃಹದಲ್ಲಿ ವಾಸವಾಗಿದ್ದರು. ಕುಟುಂಬ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಸುಭಾಷ್ ಇಡೀ ಕುಟುಂಬದೊಂದಿಗೆ ಆತ್ಮಹತ್ಯೆಗೆ ಯತ್ನಿಸಲು ಕಾರಣವೇನೆಂಬುದು ತಿಳಿದುಬಂದಿಲ್ಲ ಎಂದು ಪೊಲೀಸರು ವಿವರಿಸಿದ್ದಾರೆ.

ಮೂಲತಃ ಬಳ್ಳಾರಿಯವರಾದ ಸುಭಾಷ್ ದಾವಣಗೆರೆಯ ವೀಣಾ ಅವರನ್ನು ಐದು ವರ್ಷದ ವಿವಾಹವಾಗಿದ್ದು, ನಾಲ್ಕು ವರ್ಷಗಳಿಂದ ಬೆಂಗಳೂರಿನಲ್ಲೇ ನೆಲೆಸಿದ್ದರು. ಬದುಕುಳಿದಿರುವ ಸುಭಾಷ್‍ನೇ ಪತ್ನಿ ಮತ್ತು ಮಕ್ಕಳಿಗೆ ವಿಷ ಉಣಿಸಿದನೇ ಅಥವಾ ಪತ್ನಿಯೂ ಆತ್ಮಹತ್ಯೆಗೆ ಸಮ್ಮತಿಸಿದ್ದಳೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಸಂಪಿಗೆ ಹಳ್ಳಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin