ಆತ್ಮಹತ್ಯೆ ಪ್ರಕರಣಗಲ್ಲಿ ಮಂಡ್ಯ ಜಿಲ್ಲೆ ರಾಜ್ಯದಲ್ಲೇ ನಂ.1, ಮೈಸೂರಿಗೆ 2ನೇ ಸ್ಥಾನ

ಈ ಸುದ್ದಿಯನ್ನು ಶೇರ್ ಮಾಡಿ

Suicide

ಬೆಂಗಳೂರು, ಅ.4- ವಿವಿಧ ಕಾರಣಗಳಿಗಾಗಿ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಜಿಲ್ಲೆಗಳಲ್ಲಿ ಸಕ್ಕರೆ ನಾಡು ಮಂಡ್ಯ ಮೊದಲ ಸ್ಥಾನದಲ್ಲಿದ್ದರೆ, ಸಾಂಸ್ಕøತಿಕ ನಗರಿ ಮೈಸೂರು ಎರಡನೆ ಸ್ಥಾನದಲ್ಲಿದೆ. 2014ರಿಂದ 2016ರ ಸೆಪ್ಟೆಂಬರ್ ಅಂತ್ಯಕ್ಕೆ ರಾಜ್ಯದ ವಿವಿಧ ಭಾಗಗಳಲ್ಲಿ ಸರಿಸುಮಾರು ಒಟ್ಟು 2000 ಮಂದಿ ರೈತರು ಒಂದಿಲ್ಲೊಂದು ಕಾರಣಗಳಿಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಶೇಷವೆಂದರೆ, ಕಾವೇರಿ ಜಲಾನಯನ ಜಿಲ್ಲೆಗಳಾದ ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲೇ ಹೆಚ್ಚಿನ ರೈತರು ಸಾವನ್ನಪ್ಪಿದ್ದಾರೆ. ಕೈಕೊಟ್ಟ ಮಳೆ, ಬರಗಾಲ, ಬೆಳೆದು ನಿಂತ ಬೆಳೆ ನಷ್ಟ, ಖಾಸಗಿ ಲೇವಾದೇವಿದಾರರ ಕಿರುಕುಳ, ಬ್ಯಾಂಕ್ ಸಾಲ, ಕುಟುಂಬ ನಿರ್ವಹಣೆ ಹೀಗೆ ಹಲವು ಕಾರಣಗಳಿಗಾಗಿಯೇ 2014ರಿಂದ ಈವರೆಗೂ ಒಟ್ಟು 1903ಮಂದಿ ರೈತರು ಕೊನೆಯುಸಿರೆಳೆದಿದ್ದಾರೆ.

ಹೆಚ್ಚು ಆತ್ಮಹತ್ಯೆ ಮಾಡಿಕೊಂಡ ರಾಜ್ಯಗಳ ಪೈಕಿ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ನಂತರದ ಸ್ಥಾನದಲ್ಲಿ ಕರ್ನಾಟಕವಿದೆ.  2014-15ರಲ್ಲಿ 122, 2015-16ರಲ್ಲಿ ದಾಖಲೆಯ ಅಂದರೆ 1460 ಮಂದಿ ಹಾಗೂ ಈ ವರ್ಷದ ಮಾರ್ಚ್-ಸೆಪ್ಟೆಂಬರ್ ತಿಂಗಳಲ್ಲೇ 320 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ. ರಾಜ್ಯದಲ್ಲಿ ಕಳೆದ ವರ್ಷವೂ ಬರಗಾಲ ತಾಂಡವವಾಡಿತ್ತು. ಜಲಾಶಯಗಳಲ್ಲಿ ನೀರಿನ ಪ್ರಮಾಣ ಸಂಗ್ರಹವಾಗದೆ ಇರುವ ಹಿನ್ನೆಲೆಯಲ್ಲಿ ಬೆಳೆಗಳಿಗೆ ನೀರು ಹರಿಸಲು ಸಾಧ್ಯವಾಗಲಿಲ್ಲ. ಇದರಿಂದ ಬೆಳೆದು ನಿಂತ ಕಬ್ಬು ಒಣಗಿ ಹೋಯಿತು. ಈ ಕಾರಣಕ್ಕಾಗಿ ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

2014-15ರ ವೇಳೆ ಚಿಕ್ಕಮಗಳೂರಿನಲ್ಲಿ 17ಮಂದಿ, ಚಿತ್ರದುರ್ಗ 12, ಶಿವಮೊಗ್ಗ 12, ವಿಜಯಪುರ 10, ಮೈಸೂರು 9 ಜನ ಸಾವನ್ನಪ್ಪಿದ್ದರು. 2015-16ರಲ್ಲಿ ಮಂಡ್ಯ 121, ಹಾವೇರಿ 108, ಬೆಳಗಾವಿ 103, ಮೈಸೂರು 99 ಹಾಗೂ ಹಾಸನದಲ್ಲಿ 80 ಅನ್ನದಾತರು ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. 2016-17ರಲ್ಲಿ ಹಾವೇರಿ 34, ಮೈಸೂರು 29, ಬೀದರ್ 26, ಯಾದಗಿರಿ 26 ಹಾಗೂ ದಾವಣಗೆರೆಯಲ್ಲಿ 21 ಮಂದಿ ಸಾವನ್ನಪ್ಪಿರುವುದು ವರದಿಯಾಗಿದೆ. ಕಾವೇರಿ ಕೊಳ್ಳದ ಮಂಡ್ಯ ಹಾಗೂ ಮೈಸೂರಿನಲ್ಲಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ಸಂಭವಿಸಿರುವುದು ವಿಶೇಷ. ಇದರಲ್ಲಿ ಸಕ್ಕರೆ ಜಿಲ್ಲೆ ಎಂದೇ ಖ್ಯಾತಿಯಾಗಿದ್ದ ಮಂಡ್ಯದಲ್ಲಿ 2014-15ರಲ್ಲಿ 3, 2015-16ರಲ್ಲಿ 121, 2016-17ರಲ್ಲಿ 14, ಮೈಸೂರಿನಲ್ಲಿ 2014-15ರಲ್ಲಿ 9, 2015-16ರಲ್ಲಿ 16, 2016-17ರಲ್ಲಿ 29 ಸೇರಿದಂತೆ ಒಟ್ಟು 137 ಮಂದಿ ಸಾವನ್ನಪ್ಪಿದ್ದಾರೆ.  ಈ ಎರಡೂ ಜಿಲ್ಲೆಗಳು ಕಾವೇರಿ ಕೊಳ್ಳದ ವ್ಯಾಪ್ತಿಗೆ ಒಳಪಡಲಿದ್ದು, ಎರಡು ವರ್ಷದ ಅವಧಿಯಲ್ಲಿ 275 ಮಂದಿ ರೈತರು ಸಾವಿಗೆ ಶರಣಾಗಿದ್ದಾರೆ.

ಕಾರಣವೇನು..?

ರೈತರ ಆತ್ಮಹತ್ಯೆಗೆ ಕೇವಲ ಬೆಳೆ ನಷ್ಟ ಕಾರಣವಲ್ಲ. ಬರಗಾಲವಲ್ಲದೆ ಸರ್ಕಾರದ ವಿವಿಧ ಯೋಜನೆಗಳು ಕೂಡ ಫಲಾನುಭವಿಗಳಿಗೆ ನೇರವಾಗಿ ಕೈ ತಲುಪುತ್ತಿಲ್ಲ.
ಅಷ್ಟೋ ಇಷ್ಟೋ ಸಾಲ ಸೋಲ ಮಾಡಿ ಬೆಳೆ ರಕ್ಷಣೆ ಮಾಡಿಕೊಂಡರೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ಇರುವುದು, ದಲ್ಲಾಳಿಗಳ ಹಾವಳಿ, ಖಾಸಗಿ ಲೇವಾದೇವಿದಾರರ ಕಿರುಕುಳ, ಸಹಕಾರ ಮತ್ತು ರಾಷ್ಟ್ರೀಯ ಬ್ಯಾಂಕ್‍ಗಳಲ್ಲಿ ಪಡೆದಿದ್ದ ಬಡ್ಡಿ ಸಾಲದ ಪ್ರಮಾಣ ಏರಿಕೆ ಇತ್ಯಾದಿ ಕಾರಣಗಳಿಂದ ರೈತರು ಸಾವನ್ನಪ್ಪುತ್ತಿದ್ದಾರೆ. ಇದರ ಜತೆಗೆ ರಾಜ್ಯ ಸರ್ಕಾರ ರೈತರು ಆತ್ಮಹತ್ಯೆ ಮಾಡಿಕೊಂಡರೆ ನೀಡುವ ಪರಿಹಾರದ ಪ್ರಮಾಣ ಹೆಚ್ಚಳವೂ ಸಾವಿನ ಸಂಖ್ಯೆಗೆ ಪರೋಕ್ಷ ಕಾರಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮೊದಲೇ ಸಂಕಷ್ಟದ ಸ್ಥಿತಿಯಲ್ಲಿದ್ದ ರೈತನಿಗೆ ಪರಿಹಾರದ ಪ್ರಮಾಣವೂ ಒಂದು ರೀತಿ ಆಸರೆಯಾಗಿ ಆತ್ಮಹತ್ಯೆ ಮಾಡಿಕೊಂಡರೆ ನನ್ನ ಕುಟುಂಬವು ನೆಮ್ಮದಿಯಾಗಿರಲಿ ಎಂಬ ಒಂದೇ ಕಾರಣಕ್ಕಾಗಿ ಕ್ರಿಮಿನಾಶಕ ಸೇವಿಸುವುದು ಇಲ್ಲವೆ ನೇಣು ಹಾಕಿಕೊಳ್ಳುವಂತಹ ಸ್ಥಿತಿ ಅನ್ನದಾತನಿಗೆ ಬಂದೊದಗಿರುವುದು ದುರಂತವೇ ಸರಿ.

► Follow us on –  Facebook / Twitter  / Google+

Facebook Comments

Sri Raghav

Admin