ಆದಿಚುಂಚನಗಿರಿ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಯೋಗಿ ಆದಿತ್ಯನಾಥ್

ಈ ಸುದ್ದಿಯನ್ನು ಶೇರ್ ಮಾಡಿ

Yogi--02

ಬೆಂಗಳೂರು, ಜ.7-ಪರಿವರ್ತನಾ ರ್ಯಾಲಿಯಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿದ್ದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಕುಂಬಳಗೋಡಿನಲ್ಲಿರುವ ಶ್ರೀ ಆದಿಚುಂಚನಗಿರಿ ಮಹಾಮಠದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ನಿನ್ನೆ ರಾತ್ರಿ ಲಖ್ನೋದಿಂದ ವಿಶೇಷ ವಿಮಾನದಲ್ಲಿ ಎಚ್‍ಎಎಲ್ ನಿಲ್ದಾಣಕ್ಕೆ ಆಗಮಿಸಿದ ಅವರು, ನೇರವಾಗಿ ಕುಂಬಳಗೋಡಿನ ಆದಿಚುಂಚನಗಿರಿ ಮಠಕ್ಕೆ ತೆರಳಿ ವಿಶ್ರಾಂತಿ ಗೃಹದಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದರು.

ಬೆಳಗ್ಗೆ 3 ಗಂಟೆಗೆ ಯೋಗಾಸನ ಪ್ರಾರಂಭಿಸುವ ಮೂಲಕ ತಮ್ಮ ದೈನಂದಿನ ಚಟುವಟಿಕೆಗಳನ್ನು ಆರಂಭಿಸಿದ ಯೋಗಿ ಆದಿತ್ಯನಾಥ್ ಬಳಿಕ 5 ಗಂಟೆಗೆ ಮಹಾಮಠದಲ್ಲಿ ವಿಶೇಷ ಪೂಜೆಗಳನ್ನು ನೆರವೇರಿಸಿದರು.  ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಡಾ.ನಿರ್ಮಲಾನಂದ ಮಹಾಸ್ವಾಮೀಜಿ, ಪ್ರಕಾಶನಾಥ ಸ್ವಾಮೀಜಿ ಉಪಸ್ಥಿತರಿದ್ದರು.   ಉತ್ತರಪ್ರದೇಶ ಗೋರಖ್‍ಪುರಕ್ಕೂ ಆದಿಚುಂಚನಗಿರಿ ಪೀಠಕ್ಕೂ ಶತಶತಮಾನಗಳಿಂದಲೂ ಅವಿನಾಭಾವ ಸಂಬಂಧವಿದೆ. ಎರಡು ಮಠಗಳು ನಾಥ ಸಂಪ್ರದಾಯವನ್ನು ಪಾಲನೆ ಮಾಡುತ್ತಿರುವುದು ವೈಶಿಷ್ಟ್ಯವಾಗಿದೆ.

ಇದಕ್ಕೂ ಮುನ್ನ ಕಳೆದ ರಾತ್ರಿ ಮಠಕ್ಕೆ ಆಗಮಿಸಿದ ಯೋಗಿ ಆದಿತ್ಯನಾಥ್ ಅವರನ್ನು ಶ್ರೀಗಳು ಆತ್ಮೀಯವಾಗಿ ಬರಮಾಡಿಕೊಂಡರು. ಯೋಗಿ ಆದಿತ್ಯನಾಥ್‍ಗೆ ಕೆಲ ಸಮಾಜಘಾತುಕ ಶಕ್ತಿಗಳಿಂದ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಮಠದ ಸುತ್ತಮುತ್ತ ಭಾರೀ ಭದ್ರತೆ ಕೈಗೊಳ್ಳಲಾಗಿತ್ತು.

Facebook Comments

Sri Raghav

Admin