ಆಧಾರ್ ಲಿಂಕ್ ಮಾಡದ ಪಡಿತರ ಕಾರ್ಡ್‍ಗಳನ್ನು ರದ್ದುಗೊಳಿಸಿಲ್ಲ : ಖಾದರ್ ಸ್ಪಷ್ಟನೆ

ಈ ಸುದ್ದಿಯನ್ನು ಶೇರ್ ಮಾಡಿ

UT-Khadar

ಬೆಳಗಾವಿ (ಸುವರ್ಣಸೌಧ), ನ.24- ಆಧಾರ್ ಲಿಂಕ್ ಮಾಡದ ಪಡಿತರ ಕಾರ್ಡ್‍ಗಳಿಗೆ ಆಹಾರ ಧಾನ್ಯ ವಿತರಣೆ ಮಾಡುವುದನ್ನು ನಿಲ್ಲಿಸಿಲ್ಲ ಹಾಗೂ ಯಾವುದೇ ಕಾರ್ಡ್‍ಗಳನ್ನು ರದ್ದುಪಡಿಸಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದರು. ಶೂನ್ಯವೇಳೆಯಲ್ಲಿ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಸಚಿವರು, ರಾಜ್ಯದಲ್ಲಿ 3 ಕೋಟಿ 12 ಲಕ್ಷ ಪಡಿತರ ಚೀಟಿಗಳಿದ್ದು, 3 ಕೋಟಿ 9 ಲಕ್ಷ ಪಡಿತರ ಚೀಟಿಗಳಿಗೆ ಆಧಾರ್ ಲಿಂಕ್ ಮಾಡಲಾಗಿದೆ. 3 ಲಕ್ಷ ಪಡಿತರ ಚೀಟಿಗಳು ಆಧಾರ್ ಲಿಂಕ್ ಮಾಡದೆ ಬಾಕಿ ಉಳಿದಿವೆ. ಇವುಗಳನ್ನು ಲಿಂಕ್ ಮಾಡುವ ಪ್ರಕ್ರಿಯೆ ಮುಂದುವರಿದಿದೆ. ಲಿಂಕ್ ಮಾಡದವರು ಅರ್ಜಿ ಪಡೆದು ಲಿಂಕ್ ಮಾಡಬಹುದಾಗಿದೆ. ಯಾವುದೇ ಕಾರ್ಡ್‍ಗಳನ್ನು ರದ್ದುಪಡಿಸಿಲ್ಲ ಮತ್ತು ಪಡಿತರ ವಿತರಿಸುವುದನ್ನು ಸ್ಥಗಿತಗೊಳಿಸಿಲ್ಲ.

ಆದರೆ, ಪಡಿತರ ಚೀಟಿಗಳಿಗೆ ಆಧಾರ್ ಲಿಂಕ್ ಮಾಡದ ಅಂಗಡಿ ಮಾಲೀಕರ ವಿರುದ್ಧ ಪಡಿತರ ಅಗತ್ಯ ಸೇವಾ ಕಾಯ್ದೆ ವ್ಯಾಪ್ತಿಯಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು. ಇದಕ್ಕೂ ಮುನ್ನ ಶೆಟ್ಟರ್ ಮಾತನಾಡಿ, ರಾಜ್ಯದಲ್ಲಿ ಆಧಾರ್ ಲಿಂಕ್ ಮಾಡದ 58 ಲಕ್ಷ ಮಂದಿಗೆ ಪಡಿತರ ಕಡಿತ ಮಾಡಲಾಗಿದೆ.  ಅಂಗಡಿ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಸದನದ ಗಮನಕ್ಕೆ ತಂದರಲ್ಲದೆ ಬರಗಾಲದಲ್ಲಿ ಪಡಿತರ ವಿತರಿಸುವುದನ್ನು ನಿಲ್ಲಿಸಬೇಡಿ. ಅಂಗಡಿ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದು ಬೇಡ. ಕೇವಲ ಎಚ್ಚರಿಕೆ ನೀಡಿ ಎಂದು ಸಲಹೆ ಮಾಡಿದರು. ಅಂಗಡಿಯವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕಿಂತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ. ಅವರನ್ನು ರಕ್ಷಿಸುವುದು ಬೇಡ ಎಂದು ಶೆಟ್ಟರ್ ಹೇಳಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin