ಆಧುನಿಕ ಭರಾಟೆಗೆ ಸವಾಲು ಹಾಕಿದ ವನಿತೆಯರು : ಮನಮೆಚ್ಚಿದ ಹುಡುಗಿಯರು

ಈ ಸುದ್ದಿಯನ್ನು ಶೇರ್ ಮಾಡಿ

22

ನರೇಗಲ್ಲ,ಫೆ.28– ಆಧುನಿಕ ಸಂಪ್ರದಾಯದ ಭರಾಟೆಯಲ್ಲಿ ಸಾಗುತ್ತಿರುವ ಇಂದು ಭಾರತೀಯ ಸಂಸ್ಕೃತಿ , ಆಚಾರ-ವಿಚಾರ ಉಡುಗೆ ತೊಡುಗೆಗಳು ಮರೀಚಿಕೆಯಾಗಿವೆ. ಪಾಶ್ಚಿಮಾತ್ಯ ಸಂಸ್ಕೃತಿ ಗೆ ಗೀಳುಬಿದ್ದ ಭಾರತೀಯ ವನಿತೆಯರು ಇಂದು ನಮ್ಮ ಸಂಪ್ರದಾಯವನ್ನೆ ಮರೆಯುತ್ತಿದ್ದಾರೆ, ಇಂತಹ ಸನ್ನಿವೇಶದಲ್ಲಿಯೂ ಕೆಲವು ಗ್ರಾಮೀಣ ಭಾಗಗಳಲ್ಲಿ ಅಲ್ಪಸ್ವಲ್ಪ ಜೀವ ಉಳಿದಂತಾಗಿ ಅಂತಹ ಉಡುಗೆ ತೊಡುಗೆಗಳನ್ನು ಪುನಃ ಸ್ಮರಿಸಿಕೊಳ್ಳುವುದರ ಮೂಲಕ ಸಂಪ್ರದಾಯ ಉಳಿಸಿ ಬೆಳೆಸಲು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಾಂಪ್ರದಾಯಕ ಉಡುಗೆಯನ್ನು ಧರಿಸುವುದರ ಮೂಲಕ ಗಮನ ಸೆಳೆದಿದ್ದಾರೆ. ಇದು ಸ್ಥಳೀಯ ಅನ್ನದಾನೇಶ್ವರ ಮಹಾವಿದ್ಯಾಲಯದಲ್ಲಿ ನಡೆದ ಟ್ರೆಡಿಷನಲ್ ಡೇ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಸಾಂಪ್ರದಾಯಕ ಉಡುಗೆಯಾದ ಸೀರೆ, ಕುಪ್ಪಸವನ್ನು ತೊಟ್ಟರೆ ವಿದ್ಯಾರ್ಥಿಗಳು ಧೋತಿ, ಜುಬ್ಬಾ, ಗಾಂಧಿ ಟೋಪಿ ಧರಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು.

ಇನ್ನು ಉಪನ್ಯಾಸಕ ವರ್ಗ ಇದಕ್ಕೇನು ಕಡಿಮೆಯನ್ನದಂತೆ ಅವರು ಕೂಡಾ ಸಾಂಪ್ರದಾಯಕ ಉಡುಗೆಯಲ್ಲಿಯೇ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳಿಗೆ ಮಾದರಿಯಾದರು. ಕೆಲವು ದಿನಾಚರಣೆಗಳು ಇತ್ತೀಚಿನ ದಿನಮಾನಗಳಲ್ಲಿ ಕೇವಲ ನೆಪಮಾತ್ರಕ್ಕೆ ಎನ್ನುವಂತಾಗಿರುವುದು ನಿಜಕ್ಕೂ ದುರ್ಧೈವದ ಸಂಗತಿ. ಇದನ್ನು ಅಲ್ಲಗಳೆಯುವ ನಿಟ್ಟಿನಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇಲ್ಲಿ ನಡೆದ ಕಾರ್ಯಕ್ರಮಕ್ಕೆ ಸಾಕ್ಷಿ ಆಗಿದ್ದಾರೆ. ಮಹಾವಿದ್ಯಾಲಯದ ಆವರಣದಲ್ಲಿ ನಡೆದ ವಿವಿಧ ಭಾರತೀಯ ಕ್ರೀಡೆಗಳಾದ ಗಡಿಗೆ ಒಡೆಯುವುದು, ಹಗ್ಗ ಜಗ್ಗಾಟ, ಕೆರೆದಡ ಆಟ, ಕಣ್ಣು ಕಟ್ಟಿ ಬಿಂದು ಹಚ್ಚುವುದು, ಕಣ್ಮುಚನಿಗಿ ಆಟ, ಬಲೂನ್ ಒಡೆಯುವುದು ಹೀಗೆ ವಿವಿಧ ಭಾರತೀಯ ಕೀಡೆಗಳಲ್ಲಿ ವನಿತೆಯರು ಭಾಗವಹಿಸಿ ಮರಳಿ ನೆನವು ಮಾಡಿಕೊಡುವ ಮೂಲಕ ಮೆರಗುತಂದರು.
ಇನ್ನು ವಿದ್ಯಾರ್ಥಿಗಳು ಇವರಿಗೇನು ಕಮ್ಮಿ ಎಂಬಂತೆ ಲಗೋರಿ, ಚಿನ್ನಿದಾಂಡು, ಸರಬಡಗಿ, ಮೆಕ್ಕೆದಾಂಡು, ರೈಲಿನಾಟ, ಡುಬ್ಚಂಡು, ಕೆರೆದಡ ಆಟ ಮುಂತಾದ ಕ್ರೀಡೆಗಳನ್ನು ಉಪನ್ಯಾಸಕರೊಂದಿಗೆ ಬೆರೆತು ಆಡುವುದರ ಮೂಲಕ ಕಾಲೇಜು ಮೈದಾನದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದ್ದು ನಿಜಕ್ಕೂ ವಿಶೇಷವಾಗಿತ್ತು. ಆಧುನಿಕ ಅಬ್ಬರಕ್ಕೆ ಕಾಲಗರ್ಭ ಸೇರುತ್ತಿರುವ ಗ್ರಾಮೀಣರ ಬದುಕು ಬವಣೆ, ಉಡುಗೆ ತೊಡುಗೆಗಳು ನಶಿಸುತ್ತಿರುವ ವಾಸ್ತವಿಕ ದಿನಮಾನದಲ್ಲಿ ಅನ್ನದಾನೇಶ್ವರ ಮಹಾವಿದ್ಯಾಲಯ ಸಾಂಪ್ರದಾಯಿಕ ದಿನ ಆಚರಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಭಾರತೀಯ ಸಂಪ್ರದಾಯದ ಸಂಭ್ರಮಕ್ಕೆ ಕೊನೆಯಿಲ್ಲದೆಂಬಂತೆ ಪ್ರಚೋದನೆ ನೀಡಿತು.ಮಹಾವಿದ್ಯಾಲಯದ ಸಮಸ್ತ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅಪ್ಪಟ ಸಂಪ್ರದಾಯಿಕ ಉಡುಗೆಯಲ್ಲಿ ಮಿಂದೆದ್ದು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೆಲ್ಪಿ ಗೀಳಿಗೆ ಮೊರೆಹೋಗಿ ಕಾಲೇಜಿನ ಮೈದಾನ ಸ್ವರ್ಗವನ್ನೆ ಸೃಷ್ಟಿಸುವಂತಿತ್ತು. ಇದರಲ್ಲಿ ಪ್ರಾಚಾರ್ಯರನ್ನೊಳಗೊಂಡಂತೆ ಸಮಸ್ತ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.

ಭಾರತೀಯ ಸಾಂಪ್ರದಾಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವು ಸಾಂಪ್ರದಾಯಿಕ ಉಡುಗೆ ನಮೂದಿಸಿದ್ದು, ಪ್ರತಿಯೊಬ್ಬರು ಆಧುನಿಕತೆಯನ್ನು ಕಡಿಮೆ ಮಾಡಿಕೊಳ್ಳುವುದರ ಜೊತೆಗೆ ಸಾಂಪ್ರದಾಯಿಕ ಅಂಶಗಳನ್ನು, ಸಂಸ್ಕಾರಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಲಿ ಎನ್ನುವುದೇ ನಮ್ಮ ಮೂಲ ಉದ್ದೇಶ ಎಂದು ಆಂಗ್ಲಭಾಷಾ ಪ್ರಾದ್ಯಾಪಕಿ ಸವಿತಾ ಬಡಿಗೇರ ತಿಳಿಸಿದರು.

ಪಠ್ಯ, ಪಠ್ಯೇತರಗಳ ಜೊತೆಗೆ ಟ್ರೆಡಿಷನಲ್ ಡೇ ಆಚರಿಸಿದ್ದು ನಿಜಕ್ಕೂ ವಿಶೇಷವಾಗಿತ್ತು, ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸಾಂಪ್ರದಾಯಿಕ ಕಲೆ, ಸಾಹಿತ್ಯಗಳನ್ನು ಅರಿವು ಮೂಡಿಸಿಕೊಳ್ಳಲು ನಮಗೆ ಇದು ಸಹಕಾರಿಯಾಯಿತು. ಇಂದು ಪ್ರತಿಯೊಬ್ಬ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದರೊಂದಿಗೆ ಬೇರೊಂದು ಲೋಕದಲ್ಲಿ ನಾವಿದ್ದೇವೆ ಎನ್ನುವಷ್ಟರ ಮಟ್ಟಿಗೆ ಈ ಕಾರ್ಯಕ್ರಮ ನಮಗೆಲ್ಲಾ ಸಂತೋಷವನ್ನುಂಟು ಮಾಡಿತು.
                                                                                                                          -ಶಿವಲೀಲಾ ತೊಂಡಿಹಾಳ, ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿನಿ
ಹಳೆಯ ಸಂಪ್ರದಾಯಗಳನ್ನು ಮಕ್ಕಳ ಮನದಂಗಳದಲ್ಲಿ ಉಳಿಸಿ ಮುಂದಿನ ಪೀಳಿಗೆಗೆ ಅದರ ನೆನಪು ಮಾಡಿಕೊಡುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದಕ್ಕೆ ಮಕ್ಕಳೂ ಕೂಡಾ ಉತ್ತಮ ರೀತಿಯಿಂದ ಪ್ರತಿಕ್ರಿಯಿಸಿರುವುದು ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು.
                                                                                                                                                     -ಎಸ್.ಜಿ. ಕೇಶಣ್ಣವರ, ಪ್ರಾಚಾರ್ಯರು

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin