ಆನಂದ್‍ಗೆ ಬಿಬಿಎಂಪಿ ಉಪ ಮೇಯರ್ ಸ್ಥಾನ?

ಈ ಸುದ್ದಿಯನ್ನು ಶೇರ್ ಮಾಡಿ

 

Anandಬೆಂಗಳೂರು, ಆ.15- ಬಿಬಿಎಂಪಿ ಆಡಳಿತ ಹಂಚಿಕೊಳ್ಳುವ ವಿಚಾರದಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿಯಾದರೂ ಜೆಡಿಎಸ್‍ನ ಪಾಲಿಕೆ ಸದಸ್ಯ ಆನಂದ್‍ಗೆ ಉಪ ಮೇಯರ್ ಸ್ಥಾನ ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ. ಕಾಂಗ್ರೆಸ್‍ನೊಂದಿಗೆ ಜೆಡಿಎಸ್ ಮಾಡಿಕೊಂಡಿರುವ ಮೈತ್ರಿ ಒಂದು ವರ್ಷ ಪೂರ್ಣವಾಗುತ್ತಿದೆ. ಮತ್ತೊಂದು ವರ್ಷದ ಅವಧಿಯ ಅಧಿಕಾರಕ್ಕಾಗಿ ಕಾಂಗ್ರೆಸ್, ಬಿಜೆಪಿ ನಡುವೆ ಪೈಪೋಟಿ ಶುರುವಾಗಿದೆ. ಬಿಬಿಎಂಪಿ ಅಧಿಕಾರ ಹಂಚಿಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ಜೆಡಿಎಸ್ ಸದ್ಯಕ್ಕೆ ಕಾದು ನೋಡುವ ತಂತ್ರ ಅನುಸರಿಸುತ್ತಿದೆ.
ಬಿಬಿಎಂಪಿಯಲ್ಲಿ ಜೆಡಿಎಸ್ ಪಕ್ಷವು ಕಾಂಗ್ರೆಸ್ ಇಲ್ಲವೆ, ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ಎರಡು ಪಕ್ಷಗಳ ಪೈಕಿ ಯಾವುದೇ ಪಕ್ಷದೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡರೂ ಉಪ ಮೇಯರ್ ಸ್ಥಾನ ದೊರೆಯಲಿದೆ.

ಉಪ ಮೇಯರ್ ಸ್ಥಾನವನ್ನು ರಾಧಾಕೃಷ್ಣ ದೇವಾಲಯ ವಾರ್ಡ್‍ನ ಸದಸ್ಯ ಆನಂದ್ ಅವರಿಗೆ ನೀಡಲು ಜೆಡಿಎಸ್ ವರಿಷ್ಠರು ಒಲವು ತೋರಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಮುಂದಿನ ಒಂದು ವರ್ಷದ ಆಡಳಿತದ ಚುಕ್ಕಾಣಿ ಹಿಡಿಯಲು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಜೆಡಿಎಸ್ ವರಿಷ್ಠರೊಂದಿಗೆ ಮಾತುಕತೆಗೆ ಮಂದಾಗಿದ್ದು, ಇನ್ನು ಅಂತಿಮ ಸ್ವರೂಪ ಪಡೆದಿಲ್ಲ. ಆದರೆ, ಬಿಜೆಪಿ ರಾಜ್ಯಾಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜೆಡಿಎಸ್‍ನೊಂದಿಗಿನ ಮೈತ್ರಿಗೆ ಆಸಕ್ತಿ ತೋರಿಲ್ಲ. ಕಳೆದ ವರ್ಷ ಮೈತ್ರಿ ಮಾಡಿಕೊಂಡು ಬಿಬಿಎಂಪಿ ಅಧಿಕಾರ ಹಿಡಿದಿರುವ ಕಾಂಗ್ರೆಸ್-ಜೆಡಿಎಸ್ ಸಂಬಂಧ ಕೂಡಾ ಚೆನ್ನಾಗಿಲ್ಲ. ಆದರೂ ಮೈತ್ರಿ ಮುಂದುವರೆಸುವ ಬಗ್ಗೆ ಕಾಂಗ್ರೆಸ್ ನಾಯಕರು ಆಸಕ್ತಿ ಹೊಂದಿದ್ದಾರೆ. ಜೆಡಿಎಸ್ ನಾಯಕರು ಆಸಕ್ತಿ ಗುಟ್ಟು ಬಿಟ್ಟು ಕೊಟ್ಟಿಲ್ಲ.

ಬಿಬಿಎಂಪಿ ಮೇಯರ್, ಉಪ ಮೇಯರ್ ಚುನಾವಣೆ ಮುಂದಿನ ತಿಂಗಳು ನಡೆಯುವುದರಿಂದ ಜೆಡಿಎಸ್ ವರಿಷ್ಠರು ಎಚ್ಚರಿಕೆ ನಡೆ ಅನುಸರಿಸುತ್ತಿದ್ದಾರೆ. ಕಾಂಗ್ರೆಸ್‍ನೊಂದಿಗೆ ಮೈತ್ರಿಯಾಗುವಾಗ ಮುಂಚೂಣಿಯಲ್ಲಿದ್ದು, ಜೆಡಿಎಸ್‍ನಿಂದ ಅಮಾನತುಗೊಂಡಿರುವ ಶಾಸಕ ಜಮೀರ್ ಅಹಮದ್‍ಖಾನ್ ಈ ಬಾರಿ ತಟಸ್ಥವಾಗಿರುವುದಾಗಿ ಹೇಳಿದ್ದಾರೆ. ಯಾವ ಪಕ್ಷದ ಜೊತೆ ಮೈತ್ರಿಯಾಗುವುದೋ ಆ ಪಕ್ಷ ಮೇಯರ್ ಸ್ಥಾನ ಉಳಿಸಿಕೊಂಡು ಉಪ ಮೇಯರ್ ಸ್ಥಾನವನ್ನು ಬಿಟ್ಟು ಕೊಡಲಿದೆ ಎಂಬ ನಿರೀಕ್ಷೆ ಜೆಡಿಎಸ್‍ನಲ್ಲಿದೆ. ಕಳೆದ ಬಾರಿ ಹೊಂದಾಣಿಕೆ ಮಾಡಿಕೊಂಡಾಗ ಉಪ ಮೇಯರ್ ಸ್ಥಾನ ಜೆಡಿಎಸ್‍ಗೆ ದೊರೆತಿತ್ತು. ಹೇಮಲತಾ ಗೋಪಾಲಯ್ಯ ಅವರು ಉಪ ಮೇಯರ್ ಆಗಿದ್ದಾರೆ. ಈಗ ಶಾಸಕ ಗೋಪಾಲಯ್ಯ ಕೂಡ ಅಮಾನತುಗೊಂಡ ಶಾಸಕರಲ್ಲಿ ಒಬ್ಬರಾಗಿದ್ದಾರೆ.

ಜೆಡಿಎಸ್‍ನ ಉನ್ನತ ಮೂಲಗಳ ಪ್ರಕಾರ ಮೇಯರ್ ಚುನಾವಣೆ ಹತ್ತಿರವಾಗುವವರೆಗೂ ವರಿಷ್ಠರು ಮತ್ತು ಉಪ ಮೇಯರ್ ಅಭ್ಯರ್ಥಿ ಆಯ್ಕೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದಿಲ್ಲ.
ಕಳೆದ ವರ್ಷ ಕಾಂಗ್ರೆಸ್‍ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದರು. ಕೇವಲ ಮೂರು ತಿಂಗಳ ಅಂತರದಲ್ಲಿ ಉಭಯ ಪಕ್ಷಗಳ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಕಾಂಗ್ರೆಸ್ ವಿರುದ್ಧ ಆರೋಪವನ್ನು ಕುಮಾರಸ್ವಾಮಿ ಮಾಡಿದ್ದರು.  ಕಳೆದ ಬಾರಿ ಕುಮಾರಸ್ವಾಮಿ ವಿರೋಧದ ನಡುವೆ ಕಾಂಗ್ರೆಸ್‍ನೊಂದಿಗಿನ ಮೈತ್ರಿಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಅನುಮತಿ ನೀಡಿದ್ದರು. ಆದರೆ , ಈ ಬಾರಿ ಕುಮಾರಸ್ವಾಮಿಯವರೊಂದಿಗೆ ಸಮಾಲೋಚಿಸಿದ ನಂತರ ತೀರ್ಮಾನ ಕೈಗೊಳ್ಳುವುದಾಗಿ ಗೌಡರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.  ಕೊನೆ ಕ್ಷಣದಲ್ಲಿ ಜೆಡಿಎಸ್ ಕಾಂಗ್ರೆಸ್‍ನೊಂದಿಗೆ ಮೈತ್ರಿ ಮುಂದುವರೆಸುವುದೋ ಅಥವಾ ಬಿಜೆಪಿ ಕೈ ಹಿಡಿಯುವುದೋ ಕಾದು ನೋಡಬೇಕು.

► Follow us on –  Facebook / Twitter  / Google+

Facebook Comments

Sri Raghav

Admin