ಆನೆ ದಾಳಿಗೆ ರೈತ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

elephant-attack

ರಾಮನಗರ, ಸೆ.4– ಹೊಲಕ್ಕೆ ಹೋಗುತ್ತಿದ್ದ ರೈತನ ಮೇಲೆ ಆನೆ ದಾಳಿ ಮಾಡಿ ಕೊಂದುಹಾಕಿರುವ ಘಟನೆ ಇಂದು ಮುಂಜಾನೆ ಮಾಗಡಿ ತಾಲೂಕಿನ ನಾಯಕನಪಾಳ್ಯದಲ್ಲಿ ನಡೆದಿದೆ.
ಮೃತನನ್ನು ತಿಮ್ಮಯ್ಯ (55) ಎಂದು ಗುರುತಿಸಲಾಗಿದೆ.  ಸುಮಾರು 5 ಗಂಟೆ ಸಂದರ್ಭದಲ್ಲಿ ಬಹಿರ್ದೆಸೆಗೆಂದು ಜಮೀನಿನ ಕಡೆಗೆ ಹೋಗುವ ಮಾರ್ಗಮಧ್ಯೆ ಎದುರಾದ ಕಾಡಾನೆಯೊಂದು ಏಕಾಏಕಿ ತಿಮ್ಮಯ್ಯ ಅವರನ್ನು ಸೊಂಡಿಲಿನಿಂದ ಸುತ್ತಿ ಎಸೆದು ತುಳಿದು ಸಾಯಿಸಿದೆ. ಗ್ರಾಮಕ್ಕೆ ಆನೆ ನುಗ್ಗಿರುವುದನ್ನು ಅರಿತ ಗ್ರಾಮಸ್ಥರು ಅದನ್ನು ಓಡಿಸಲು ಮುಂದಾದಾಗ ತಿಮ್ಮಯ್ಯ ಸತ್ತುಬಿದ್ದಿರುವುದನ್ನು ನೋಡಿ ಆತಂಕಗೊಂಡಿದ್ದಾರೆ.

ತಕ್ಷಣ ಅರಣ್ಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ಕೈಗೊಂಡಿದ್ದಾರೆ.  ಆನೆಯನ್ನು ಕಾಡಿನತ್ತ ಅಟ್ಟುವ ಕಾರ್ಯದಲ್ಲಿ ತೊಡಗಿದ್ದು, ಗೌರಿ ಹಬ್ಬದ ದಿನದಂದೇ ಆನೆ ದಾಳಿಯಿಂದ ನಡೆದಿರುವ ಅವಾಂತರಕ್ಕೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ರೈತರು ಬೆಳಗ್ಗಿನಿಂದಲೇ ಸಾವನದುರ್ಗ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.

ಬಂಗಾರಪೇಟೆಯಲ್ಲೂ ದಾಂಧಲೆ:

ಕಳೆದ 15 ದಿನಗಳಿಂದ ಬಂಗಾರಪೇಟೆ ತಾಲೂಕಿನ ಕೋಟಿಗಾನಹಳ್ಳಿಯಲ್ಲಿ ಬೀಡುಬಿಟ್ಟಿರುವ ಆನೆಗಳು ರೈತರನ್ನು ಕಂಗೆಡುವಂತೆ ಮಾಡಿವೆ.   ಸುಮಾರು ಮೂರು ಆನೆಗಳು ಬೆಳೆದಿರುವ ಫಸಲುಗಳನ್ನೆಲ್ಲ ತುಳಿದುಹಾಕಿ ನಾಶಪಡಿಸಿವೆ. ಟೊಮ್ಯಾಟೋ, ಕೋಸು, ಜೋಳ ಮತ್ತಿತರ ಬೆಳೆಗಳನ್ನು ತಿಂದುಹಾಕಿವೆ.  ಸ್ಥಳದಲ್ಲಿ ಅರಣ್ಯ ಸಿಬ್ಬಂದಿ ಬೀಡುಬಿಟ್ಟು ಎಷ್ಟೇ ಪ್ರಯತ್ನ ನಡೆಸುತ್ತಿದ್ದರೂ ಆನೆಗಳು ಗ್ರಾಮ ತೊರೆಯುತ್ತಿಲ್ಲ. ಇದರಿಂದ ಗ್ರಾಮಸ್ಥರು ಕೂಡ ಚಿಂತೆಗೀಡಾಗಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin