ಆನ್‍ಲೈನ್‍ನಲ್ಲಿ ಮಾರಾಟ ವಿರೋಧಿಸಿ ರಾಜ್ಯದಾದ್ಯಂತ ಔಷಧಿ ಅಂಗಡಿಗಳು ಬಂದ್, ರೋಗಿಗಳಿಗೆ ತಟ್ಟಿದ ಬಿಸಿ

ಈ ಸುದ್ದಿಯನ್ನು ಶೇರ್ ಮಾಡಿ

Medical

ಬೆಂಗಳೂರು, ಮೇ 30-ಆನ್‍ಲೈನ್‍ನಲ್ಲಿ ಔಷಧಿ ಮಾರಾಟಕ್ಕೆ ಅವಕಾಶ ಕೊಟ್ಟಿರುವ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ರಾಜ್ಯದ 25ಸಾವಿರಕ್ಕೂ ಹೆಚ್ಚು ಮೆಡಿಕಲ್ ಸ್ಟೋರ್‍ಗಳು ಸೇರಿದಂತೆ ದೇಶಾದ್ಯಂತ 8.5 ಲಕ್ಷ ಮೆಡಿಕಲ್ ಸ್ಟೋರ್‍ಗಳು ಇಂದು ಔಷಧಿ ಮಾರಾಟವನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ ಪರಿಣಾಮ ರೋಗಿಗಳು ಪರದಾಡುವಂತಾಯಿತು.  ಇಡೀ ದಿನ ಔಷಧಿಗಳ ಪೂರೈಕೆ ಸಂಪೂರ್ಣ ಬಂದ್ ಆಗಿತ್ತು. ಬೆಂಗಳೂರು ಮಹಾನಗರದಲ್ಲಿ 8.5 ಸಾವಿರ ಔಷಧಿ ಮಾರಾಟ ಮಳಿಗೆಗಳು ಬಂದ್ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿವೆ.ಮೈಸೂರಿನ 1500ಮೆಡಿಕಲ್ ಸ್ಟೋರ್‍ಗಳು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ನೀಡಿದರೆ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಎಲ್ಲಾ ಪ್ರಮುಖ ನಗರಗಳಲ್ಲಿ ಔಷಧಾಲಯಗಳು ಬಂದ್ ಆಗಿದ್ದವು.   ಬೆಳಗಾವಿಯಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡುಬಂತು. ಪ್ರತಿಭಟನೆ ಎಂಬ ಸೂಚನೆಯಿದ್ದರೂ ಕೆಲವರು ಔಷಧಿಗಳ ಮಾರಾಟ ಮಾಡುತ್ತಿದ್ದುದು ಕಂಡುಬಂತು. ಔಷಧಿ ಮಾರಾಟ ಸಂಘದ ಪದಾಧಿಕಾರಿಗಳು ಮನವೊಲಿಸಿ ಬಂದ್ ಮಾಡಿಸಿದರು. ವಿಜಯಪುರದಲ್ಲಿ ಎಂದಿನಂತೆ ಔಷಧಿ ಮಳಿಗೆಗಳು ತೆರೆದಿದ್ದವು.

ಮಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ 520 ಮೆಡಿಕಲ್ ಸ್ಟೋರ್‍ಗಳು ಬಂದ್ ಆಗಿವೆ. ಮೆಡ್‍ಪ್ಲಸ್ ಅಂಗಡಿಗಳವರು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಔಷಧಿ ಮಾರಾಟಗಾರರ ಸಂಘದ ವ್ಯಾಪ್ತಿಗೆ ಒಳಪಡದ ಕಾರಣ ಸ್ವತಃ ಆನ್‍ಲೈನ್ ಔಷಧಿ ವ್ಯಾಪಾರ ಮಾಡುವುದರಿಂದ ಮೆಡ್‍ಪ್ಲಸ್ ಬೆಂಬಲ ನೀಡಿಲ್ಲ. ತುಮಕೂರು ಜಿಲ್ಲೆಯಾದ್ಯಂತ 800 ಮೆಡಿಕಲ್ ಸ್ಟೋರ್‍ಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿವೆ. ನಗರದ ಎಂ.ಜಿ.ರಸ್ತೆ, ಬಾರ್‍ಲೈನ್, ಹನುಮಂತಪುರಗಳಲ್ಲಿ ಔಷಧಿ ಅಂಗಡಿಗಳು ಮುಚ್ಚಿದ್ದವು. ಮಾಹಿತಿ ಇಲ್ಲದೆ ನಗರಕ್ಕೆ ಬರುವ ರೋಗಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಗದಗ ಜಿಲ್ಲೆಯಲ್ಲೂ ಬಂದ್‍ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.

ಸಾರಾಸಗಟಾಗಿ ಎಲ್ಲಾ ಕಡೆ ಮೆಡಿಕಲ್ ಸ್ಟೋರ್ ಬಂದ್ ಆಗಿದ್ದರಿಂದ ರೋಗಿಗಳಿಗೆ ಔಷಧಿ ಅಲಭ್ಯದಿಂದ ತೊಂದರೆಯಾಗಿತ್ತು. ಜನರಿಕ್ ಔಷಧಿ ಮಳಿಗೆ, ಸರ್ಕಾರಿ ಔಷಧಿ ಮಳಿಗೆ, ಕೆಲ ನರ್ಸಿಂಗ್ ಹೋಂಗಳಲ್ಲಿರುವ ಮೆಡಿಕಲ್ ಸ್ಟೋರ್‍ಗಳನ್ನು ಹೊರತುಪಡಿಸಿದರೆ ರಾಜ್ಯದ ಎಲ್ಲಾ ಮೆಡಿಕಲ್ ಸ್ಟೋರ್‍ಗಳು ಬಂದ್‍ಗೆ ಬೆಂಬಲ ನೀಡಿ ಔಷಧಿ ಮಾರಾಟ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದವು.  ಔಷಧಿ ಸಿಗದ ಕಾರಣ ಸರ್ಕಾರಿ ಔಷಧಿ ಮಳಿಗೆ, ಜನರಿಕ್ ಔಷಧಿ ಮಳಿಗೆಗಳ ಮುಂದೆ ಔಷಧಿ ಪಡೆಯಲು ಜನ ಸರತಿ ಸಾಲಿನಲ್ಲಿ ನಿಂತಿದ್ದರು.ವೈದ್ಯರು ನೀಡುವ ಪ್ರತಿ ಪ್ರಿಸ್‍ಕ್ರಿಪ್ಷನ್‍ನನ್ನು ಸ್ಕ್ಯಾನ್ ಮಾಡಿ ಆಯಾ ಮೆಡಿಕಲ್ ಸ್ಟೋರ್‍ನವರು ಸೆಂಟ್ರಲ್ ಇ ಪೋರ್ಟಲ್‍ಗೆ ಅಪ್‍ಲೋಡ್ ಮಾಡಬೇಕು ಎಂಬ ವ್ಯವಸ್ಥೆಯನ್ನು ತಂದಿರುವ ಕೇಂದ್ರ ಸರ್ಕಾರ, ಈ ಕ್ರಮವನ್ನು ಕೈಬಿಡಬೇಕು ಹಾಗೂ ಆನ್‍ಲೈನ್ ಮೂಲಕ ಔಷಧಿ ಖರೀದಿ ಮಾಡಲು ನೀಡಿರುವ ಅನುಮತಿಯನ್ನು ಹಿಂಪಡೆಯಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.  ಆನ್‍ಲೈನ್‍ನಲ್ಲಿ ಔಷಧಿ ಖರೀದಿಗೆ ಅವಕಾಶ ಕಲ್ಪಿಸಿದರೆ ಮೆಡಿಕಲ್ ಸ್ಟೋರ್‍ನವರು ಬೀದಿಪಾಲಾಗಬೇಕಾಗುತ್ತದೆ. ಮೆಡಿಕಲ್ ಸ್ಟೋರ್‍ನವರಿಗೆ ಸಾಕಷ್ಟು ನಿಯಮಾವಳಿಗಳನ್ನು ರೂಪಿಸಿ ಆನ್‍ಲೈನ್‍ನಲ್ಲಿ ಮುಕ್ತ ಔಷಧಿಗಳ ಮಾರಾಟಕ್ಕೆ ಅವಕಾಶ ಕಲ್ಪಿಸಿರುವುದು ಸಮಂಜಸವಲ್ಲ. ಇದು ರೋಗಿಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಎಂದು ಔಷಧಿ ಮಾರಾಟಗಾರರ ಸಂಘದ ಪದಾಧಿಕಾರಿಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾಕಷ್ಟು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದೆವು. ನಮ್ಮ ಮನವಿ ಪುರಸ್ಕರಿಸದ ಕಾರಣ ಇಂದು ಮೆಡಿಕಲ್ ಸ್ಟೋರ್‍ಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಹೇಳಿದರು.  ರಾಜ್ಯ ಬಂದ್, ಕಫ್ರ್ಯೂ ಹೇರಿಕೆ ಎಂತಹದ್ದೇ ಸಂದರ್ಭ ಎದುರಾದರೂ ಆಸ್ಪತ್ರೆ, ಆ್ಯಂಬುಲೆನ್ಸ್, ಔಷಧ ಮಾರಾಟ ಮಳಿಗೆಗಳು ತೆರೆದಿರುತ್ತಿದ್ದವು. ಆದರೆ ಇಂದು ಮೆಡಿಕಲ್ ಸ್ಟೋರ್‍ನವರೇ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿರುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ.

ಮಹಾನಗರಗಳಲ್ಲಿ ಪ್ರತಿದಿನ ಔಷಧಿ ಕೊಳ್ಳುವವರು ಇರುತ್ತಾರೆ. ಅಲ್ಲದೆ ವೈದ್ಯರ ಪ್ರಿಸ್‍ಕ್ರಿಪ್ಷನ್ ಹಿಡಿದು ಔಷಧಿ ಮಳಿಗೆಗಳಿಗೆ ಬರುತ್ತಾರೆ. ಇಂದು ಬಂದವರಿಗೆ ಬಂದ್ ಆಗಿರುವ ಬೋರ್ಡ್ ನೋಡಿ ನಿರಾಸೆಯಿಂದ ಹೊರಟು ಹೋಗಿದ್ದು ಕಂಡು ಬಂತು.  ಕೆಲವು ಸಂದರ್ಭಗಳಲ್ಲಿ ತುರ್ತು ಔಷಧಿಗಳ ಅಗತ್ಯವಿರುತ್ತದೆ. ಆದರೆ ಇಂದು ಇಡೀ ದಿನ ಮೆಡಿಕಲ್ ಸ್ಟೋರ್‍ನವರು ಬಂದ್ ಮಾಡಿರುವುದರಿಂದ ಏನಾಗುತ್ತದೆಯೋ ಕಾದು ನೋಡಬೇಕು. ಸರ್ಕಾರಿ ಔಷಧಿ ಮಳಿಗೆ, ಜನರಿಕ್ ಔಷಧಿ ಮಳಿಗೆಗಳು ಎಲ್ಲಾ ರೋಗಿಗಳ ಔಷಧಿಗಳನ್ನು ಪೂರೈಕೆ ಮಾಡಲು ಸಾಧ್ಯವಿಲ್ಲ. ಆದರೂ ಬೆಂಗಳೂರಿನ ವಿವಿಧೆಡೆ ನೋಡಲ್ ಅಧಿಕಾರಿಗಳನ್ನು ನೇಮಿಸಿ ಔಷಧಿ ಪೂರೈಕೆಯ ಕ್ರಮ ಕೈಗೊಂಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin