ಆಪ್ತಮಿತ್ರನ ಅಗಲಿಕೆ ತಾಳಲಾಗದೆ ಬಿಕ್ಕಿಬಿಕ್ಕಿ ಅತ್ತ ಖರ್ಗೆ

ಈ ಸುದ್ದಿಯನ್ನು ಶೇರ್ ಮಾಡಿ

Dharm-Singh--01ಬೆಂಗಳೂರು, ಜು.27- ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ ಎಂದು ಗಳಗಳನೆ ಅತ್ತವರು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ. ಆಪ್ತಮಿತ್ರನನ್ನು ಕಳೆದುಕೊಂಡ ದುಃಖ ಉಮ್ಮಳಿಸಿ ಬರುತ್ತಿತ್ತು. ಕಣ್ಣೀರು ಸುರಿಸುತ್ತಲೇ ಇಂದು ನಿಧನರಾದ ತನ್ನ ಗೆಳೆಯ ಧರಂಸಿಂಗ್ ಅವರಿಗೆ ಶೋಕ ವ್ಯಕ್ತಪಡಿಸಿದರು. ಖರ್ಗೆಯವರು ಅಳುತ್ತಿದ್ದುದನ್ನು ಗಮನಿಸಿದರೆ ಎಂತಹವರ ಕರುಳೂ ಕಿತ್ತು ಬರುತ್ತಿತ್ತು. ನಾವಿಬ್ಬರೂ ಎಂಎಲ್‍ಎಗಳಾಗಿ, ಸಂಸದರಾಗಿ ಜತೆ ಜತೆಯಲ್ಲಿಯೇ ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಇಷ್ಟು ಬೇಗ ಧರಂಸಿಂಗ್ ನಮ್ಮನ್ನು ಬಿಟ್ಟು ಹೋಗುತ್ತಾರೆ ಎಂದುಕೊಂಡಿರಲಿಲ್ಲ. ನನಗೆ ಆರೋಗ್ಯ ಸರಿ ಇರಲಿಲ್ಲ.  [ ಮಾಜಿ ಮುಖ್ಯಮಂತ್ರಿ ಎನ್. ಧರಂಸಿಂಗ್ ಇನ್ನಿಲ್ಲ ]

ಆಗ ನನ್ನನ್ನು ನೋಡಲು ಬರುತ್ತೇನೆ ಎಂದು ಅವರ ಅನಾರೋಗ್ಯದ ನಡುವೆಯೇ ತಿಳಿಸಿದ್ದರು. ಆದರೆ, ನಾನು ನೀವು ಬರುವುದು ಬೇಡ, ನಾನೇ ಬರುತ್ತೇನೆ ಎಂದು ತಿಳಿಸಿದ್ದೆ. ಅಷ್ಟರೊಳಗೆ ಅವರೇ ನನ್ನ ಮನೆಗೆ ಬಂದಿದ್ದರು. ಇಂದು ನನ್ನನ್ನು ಬಿಟ್ಟು ಅಗಲಿ ಹೋಗಿದ್ದಾನೆ ಎಂದು ಉಮ್ಮಳಿಸಿ ಬರುತ್ತಿದ್ದ ದುಃಖದ ನಡುವೆಯೇ ಖರ್ಗೆ ತಿಳಿಸಿದರು. [ ಅಜಾತಶತ್ರುವಾಗಿ ಧರ್ಮಸಿಂಗ್ ಸಿಂಗ್ ನಡೆದು ಬಂದ ದಾರಿ ]

ನಾವಿಬ್ಬರೂ ಹಲವಾರು ವಿಚಾರಗಳ ಬಗ್ಗೆ ಚರ್ಚಿಸುತ್ತಿದ್ದೆವು. ನಮ್ಮ ನಡುವೆ ಅಭಿಪ್ರಾಯ ಭೇದವಿದ್ದರೂ ಅಂತಿಮವಾಗಿ ಒಂದು ನಿರ್ಣಯವನ್ನು ತೆಗೆದುಕೊಳ್ಳುತ್ತಿದ್ದೆವು. ಅವರು ಅಜಾತ ಶತ್ರು. ಎಲ್ಲರೊಂದಿಗೆ ಬೆರೆಯುತ್ತಿದ್ದರು. ಶಾಂತಚಿತ್ತರು ಕೂಡ. ನನ್ನ ಕುಟುಂಬದ ಸದಸ್ಯನನ್ನು ಕಳೆದುಕೊಂಡಂತಾಗಿದೆ. ಅವರ ಕುಟುಂಬ ಸದಸ್ಯರಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಖರ್ಗೆ ಕಣ್ಣೀರಿಟ್ಟರು.  ನಮ್ಮಿಬ್ಬರ ಗೆಳೆತನ ಹಲವರ ಅಸೂಯೆಗೂ ಕಾರಣವಾಗಿತ್ತು. ಅಂತಹ ಸ್ನೇಹ ನಮ್ಮದಾಗಿತ್ತು ಎಂದು ಖರ್ಗೆ ತಿಳಿಸಿದರು.

ಲವ-ಕುಶರಂತಿದ್ದ ಖರ್ಗೆ-ಧರಂ : 

ಬೆಂಗಳೂರು, ಜು.27- ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವರು ಲವ-ಕುಶರೆಂದೇ ಖ್ಯಾತರಾಗಿದ್ದರು.   ಈ ಇಬ್ಬರು ಪರಮಾಪ್ತರು.ಜೇವರ್ಗಿ ಹಾಗೂ ಗುರುಮಿಟ್ಕಲ್ ವಿಧಾನಸಭಾ ಕ್ಷೇತ್ರಗಳಿಂದ ಸತತವಾಗಿ ಜಯಗಳಿಸುತ್ತಿದ್ದ ಈ ಜೋಡಿ ಬೇರೆಯವರಿಗೆ ಅಸೂಯೆ ಮೂಡಿಸುವಂತಿತ್ತು.  ಪಕ್ಷ ಅಧಿಕಾರದಲ್ಲಿರಲಿ, ಇಲ್ಲದಿರಲಿ ಈ ಇಬ್ಬರ ಗೆಲುವು ಮಾತ್ರ ಎರಡು ಕ್ಷೇತ್ರಗಳಲ್ಲಿ ನಿಶ್ಚಿತವಾಗಿರುತ್ತಿತ್ತು.

ಪಕ್ಷದಲ್ಲಿ, ಸರ್ಕಾರದಲ್ಲಿ ಈ ಇಬ್ಬರು ಮುರಿಯದ ಜೋಡಿಯಾಗಿದ್ದರು. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ, ಹೈದರಾಬಾದ್ ಕರ್ನಾಟಕ ಭಾಗದ ಪ್ರಗತಿಯಲ್ಲಿ ಈರ್ವರ ಸೇವೆ ಅಪಾರ. ಕಾಂಗ್ರೆಸ್‍ನ ಕಲಿಗಳೆಂದೇ ಖ್ಯಾತರಾಗಿದ್ದರು. ಧರಂಸಿಂಗ್ ಅವರು ಮುಖ್ಯಮಂತ್ರಿ ಹುದ್ದೆಗೇರಿದರು. ಮಲ್ಲಿಕಾರ್ಜುನ ಖರ್ಗೆ ಅವರು ಸಂಸತ್‍ನಲ್ಲಿ ಸಂಸದೀಯ ನಾಯಕರಾಗಿ ಆಯ್ಕೆಯಾದರು.  ಇವರ ಗೆಳೆತನದಲ್ಲಿ ಎಲ್ಲೂ ಲೋಪ ಕಂಡುಬರಲಿಲ್ಲ. ಮೊದಲಿನಿಂದ ಕೊನೆಯವರೆಗೂ ಇವರು ಪರಮಾಪ್ತರಾಗಿದ್ದರು. ರಾಜಕಾರಣದಲ್ಲಿ , ಅಧಿಕಾರದಲ್ಲಿ, ವೈಯಕ್ತಿಕವಾಗಿ ಎಲ್ಲಿಯೂ ಕೂಡ ಇವರ ನಡುವೆ ವೈಮನಸ್ಸು ಬರಲಿಲ್ಲ. ಇಂದು ಧರಂಸಿಂಗ್ ಅವರು ಅಗಲಿದ್ದು , ಪರಮಾಪ್ತನನ್ನು ಕಳೆದುಕೊಂಡ ದುಃಖವನ್ನು ಖರ್ಗೆ ವ್ಯಕ್ತಪಡಿಸಿದ್ದನ್ನು ನೋಡಿದರೆ ಇವರ ಸ್ನೇಹ ಎಂಥದ್ದೆಂಬುದು ಅರ್ಥವಾಗುತ್ತದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin