ಆಮ್ನೆಸ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಲೀನ್‍ಚಿಟ್

ಈ ಸುದ್ದಿಯನ್ನು ಶೇರ್ ಮಾಡಿ

cm

 

ಹುಬ್ಬಳ್ಳಿ, ಆ.೨೯- ದೇಶ ವಿರೋಧಿ ಚಟುವಟಿಕೆ ಆರೋಪಕ್ಕೆ ಸಿಲುಕಿ ರಾಜ್ಯಾದಂತ ಸಾಕಷ್ಟು ವಿರೋಧ ಎದುರಿಸುತ್ತಿರುವ ಮಾನವ ಹಕ್ಕುಗಳ ಸಂಘಟನೆ ಆಮ್ನೆಸ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಲೀನ್ಚಿಟ್ ನೀಡುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಈ ಸಂಘಟನೆಗೆ ನಿಷೇಧ ಹೇರುವುದು ಮತ್ತು ಮುಖಂಡರ ವಿರುದ್ಧ ದೇಶದ್ರೋಹಿ ಆರೋಪದಡಿ ಪ್ರಕರಣ ದಾಖಲಿಸಬೇಕೆಂದು ಎಬಿವಿಪಿ ಮತ್ತು ಬಿಜೆಪಿ ಮುಖಂಡರು ರಾಜ್ಯದೆಲ್ಲೆಡೆ ಭಾರೀ ಪ್ರತಿಭಟನೆ ನಡೆಸಿದ್ದರು.   ಆದರೆ ಈ ಸಂಘಟನೆಗೆ ಸ್ವತಃ ಮುಖ್ಯಮಂತ್ರಿಯವರೇ ಕ್ಲೀನ್ ಚಿಟ್ ನೀಡುವ ಮೂಲಕ ಪ್ರಕರಣಕ್ಕೆ ಇತ್ಯರ್ಥ ಹಾಡುವ ಮುನ್ಸೂಚನೆ ನೀಡಿದ್ದಾರೆ. ಹುಬ್ಬಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದ ವೇಳೆ ಆಮ್ನೆಸ್ಟಿ ಸಂಘಟನೆ ಹಾಗೂ ಅದರಲ್ಲಿ ಭಾಗವಹಿಸಿದ್ದ ಮುಖಂಡರು ದೇಶದ್ರೋಹಿ ಘೋಷಣೆಗಳನ್ನು ಕೂಗಿರುವುದಕ್ಕೆ ಮೇಲ್ನೋಟದ ದಾಖಲೆ ಸಿಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಕರಣ ದಾಖಲಾದ ಬಳಿಕ ಪೊಲೀಸರು ಕೂಲಂಕಷವಾಗಿ ತನಿಖೆ ನಡೆಸಿದ್ದಾರೆ. ಭಾರತೀಯ ಸೈನಿಕರ ವಿರುದ್ಧ ಧಿಕ್ಕಾರದ ಘೋಷಣೆ ಇಲ್ಲವೆ, ಪಾಕಿಸ್ತಾನ ಪರ ಜೈ ಕಾರ ಹಾಕಿರುವುದಕ್ಕೆ ಪುರಾವೆಗಳು ಲಭ್ಯವಾಗಿಲ್ಲ. ಇನ್ನು ಎಬಿವಿಪಿ, ಬಿಜೆಪಿ ಯಾವ ಉದ್ದೇಶಕ್ಕಾಗಿ ಪ್ರತಿಭಟನೆ ನಡೆಸುತ್ತಿವೆ ಎಂದು ಪ್ರಶ್ನಿಸಿದರು.  ಬಿಜೆಪಿಯವರು ಎಬಿವಿಪಿಯನ್ನು ಎತ್ತಿಕಟ್ಟಿ ರಾಜಕೀಯ ಲಾಭ ಪಡೆಯಲು ಹುನ್ನಾರ ನಡೆಸುತ್ತಿದ್ದಾರೆ. ಜನರು ಇದನ್ನು ನಂಬುವ ಸ್ಥಿತಿಯಲ್ಲಿಲ್ಲ ಎಂದು ಮುಖ್ಯಮಂತ್ರಿ ವ್ಯಂಗ್ಯವಾಡಿದರು.

ದೇಶಭಕ್ತಿ ಪಾಠ ಬೇಕಿಲ್ಲ:

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ ದೇಶಭಕ್ತಿಯನ್ನು ಆರ್ಎಸ್ಎಸ್ ಅಥವಾ ಬಿಜೆಪಿಯಿಂದ ಕಲಿಯಬೇಕಾದ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.  ಮಾಜಿ ಸಂಸದೆ ರಮ್ಯಾ ಪಾಕಿಸ್ತಾನ ಕುರಿತ ಹೇಳಿಕೆಯಲ್ಲಿ ಯಾವ ಪ್ರಮಾದವೂ ಇಲ್ಲ. ಅಲ್ಲಿನ ಜನರು ತಮ್ಮನ್ನು ಹೇಗೆ ಸತ್ಕರಿಸಿದರೆಂದು ಹೇಳಿದ್ದಾರಷ್ಟೆ. ಇದರಲ್ಲಿ ದೇಶದ್ರೋಹ ಹುಡುಕುವುದು ಎಷ್ಟರಮಟ್ಟಿಗೆ ಸರಿ ಎಂದು ಹರಿಹಾಯ್ದರು.  ರಮ್ಯಾ ಅವರ ಹೇಳಿಕೆಯಲ್ಲಿ ಯಾವ ತಪ್ಪು ಕಂಡುಬಂದಿಲ್ಲ. ಬಿಜೆಪಿ ಮತ್ತು ಎಬಿವಿಪಿ ಅನಗತ್ಯವಾಗಿ ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ, ಪಾಕ್ ಪ್ರಧಾನಿ ನವಾಜ್ ಷರೀಫ್ ಅವರ ಮೊಮ್ಮಗಳ ವಿವಾಹ ಕಾರ್ಯಕ್ರಮಕ್ಕೆ ಹೋಗಿರಲಿಲ್ಲವೇ? ಮೋದಿ ಉಭಯ ರಾಷ್ಟ್ರಗಳ ನಡುವೆ ಶಾಂತಿ, ಸೌಹಾರ್ದತೆ ಸೃಷ್ಟಿಸಲು ಹೋಗಿದ್ದರೆ ಎಂದು ಕಿಡಿಕಾರಿದರು.

ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ ವೇಳೆ ಮಹಮ್ಮದ್ ಆಲಿ ಜಿನ್ನಾ ಕುರಿತು ಏನು ಹೇಳಿದ್ದಾರೆಂಬುದು ಎಲ್ಲರಿಗೂ ಗೊತ್ತಿದೆ. ಇಂತಹ ದ್ವಂದ್ವ ನಿಲುವು ಹೊಂದಿರುವ ಬಿಜೆಪಿಯಿಂದ ದೇಶಭಕ್ತಿ ಪಾಠ ಬೇಕಿಲ್ಲ ಎಂದು ತಿರುಗೇಟು ನೀಡಿದರು. ಮೇಲ್ಮನೆ ಪ್ರತಿಪಕ್ಷದ ನಾಯಕ ಈಶ್ವರಪ್ಪ ಅವರಿಂದ ರಾಯಣ್ಣ ಬ್ರಿಗೇಡ್ ಸ್ಥಾಪನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಶ್ವರಪ್ಪನವರಿಗೆ ಧೈರ್ಯವಿದ್ದರೆ ತಾವೇ ಮುಂದಿನ ಸಿಎಂ ಎಂದು ಘೋಷಿಸಲಿ ಎಂದು ಸವಾಲು ಹಾಕಿದರು.  ಬಿಜೆಪಿ ಯಾವತ್ತೂ ಸಾಮಾಜಿಕ ನ್ಯಾಯದ ಪರವಾಗಿಲ್ಲ. ಮಂಡಲ್ ಕಮೀಷನ್ ವರದಿ ವಿರೋಧಿಸಿದ್ದು ಬಿಜೆಪಿ ಪಕ್ಷ ಎಂದು ಆರೋಪಿಸಿದರು.

ಯಡಿಯೂರಪ್ಪನವರ ಕಾಲೆಳೆಯಲು ಈಶ್ವರಪ್ಪ ಹಿಂದ ಶುರು ಮಾಡಿದ್ದಾರೆ. ಯಡಿಯೂರಪ್ಪ-ಈಶ್ವರಪ್ಪ ಇಬ್ಬರು ಹಿಂದುಳಿದವರ ಪರವಾಗಿಲ್ಲ. ಮೀಸಲಾತಿ ವಿರೋಧಿಸಿ ರಾಮಾಜೋಯಿಷ್ ಅವರು ಕೋರ್ಟ್ಗೆ ಹೋಗಿದ್ದಾಗ ಈಶ್ವರಪ್ಪ ಏನು ಮಾಡುತ್ತಿದ್ದರು. ರಾಜಕೀಯವಾಗಿ ಹಿಂದ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರನ್ನು ಬಿಟ್ಟು ಬರೀ ಹಿಂದ ಮಾಡುತ್ತಿದ್ದಾರೆ ಎಂದು ಹೇಳಿದರು.

► Follow us on –  Facebook / Twitter  / Google+

 

Facebook Comments

Sri Raghav

Admin