ಆಮ್ನೆಸ್ಟಿ ಇಂಟರ್ನ್ಯಾಷನಲ್ ವಿರುದ್ಧದ ದೇಶದ್ರೋಹಿ ಪ್ರಕರಣವನ್ನು ಹಿಂಪಡೆಯಲು ಮುಂದಾದ ರಾಜ್ಯ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

Amnesty

ಬೆಂಗಳೂರು, ಆ.19- ದೇಶದಾದ್ಯಂತ ಭಾರೀ ವಿವಾದವನ್ನೇ ಹುಟ್ಟುಹಾಕಿರುವ ಮಾನವ ಹಕ್ಕುಗಳ ಸಂಘಟನೆ ಆಮ್ನೆಸ್ಟಿ ಇಂಟರ್ನ್ಯಾಷನಲ್ ವಿರುದ್ಧ ದಾಖಲಾಗಿದ್ದ ದೇಶದ್ರೋಹಿ ಪ್ರಕರಣವನ್ನು ಹಿಂಪಡೆಯಲು ರಾಜ್ಯ ಸರ್ಕಾರ ಮುಂದಾಗಿದೆ.  ಈ ಬೆಳವಣಿಗೆಯಿಂದ ಪ್ರಕರಣವನ್ನು ಮುಚ್ಚಿಹಾಕಲು ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ತೆರೆಮರೆಯಲ್ಲಿ ಷಡ್ಯಂತ್ರ ನಡೆಸುತ್ತಿದೆ ಎಂಬ ಆರೋಪಕ್ಕೆ ಇನ್ನಷ್ಟು ಪುಷ್ಟಿ ಸಿಕ್ಕಂತಾಗಿದೆ.  ಬುಧವಾರವಷ್ಟೆ ರಾಜ್ಯ ಉಸ್ತುವಾರಿ ಹಾಗೂ ಕಾಂಗ್ರೆಸ್ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವ ಯಾವುದೇ ವ್ಯಕ್ತಿಗಳನ್ನು ಬಂಧಿಸುವುದಾಗಲಿ ಇಲ್ಲವೆ ಕಾರ್ಯಕ್ರಮ ಆಯೋಜಿಸಿದ ಸಂಸ್ಥೆ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ಗೆ ನಿರ್ದೇಶನ ನೀಡಿದ್ದರು.

ಇದೀಗ ಹೈಕಮಾಂಡ್ ಆಣತಿಯಂತೆ ರಾಜ್ಯ ಸರ್ಕಾರ ಇಡೀ ಪ್ರಕರಣವನ್ನೇ ತಿಪ್ಪೆ ಸಾರಿಸಲು ಮುಂದಾಗಿದೆ. ಆಮ್ನೆಸ್ಟಿ ಸಂಘಟನೆ ಹಾಗೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೆಲವರ ವಿರುದ್ಧ ಬೆಂಗಳೂರಿನ ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕಾರಣವೇನು..? ಥಿಯಾಲಾಜಿಕಲ್ ಕಾಲೇಜಿನಲ್ಲಿ ನಡೆದ ವಿಚಾರ ಸಂಕಿರಣದ ವೇಳೆ ಕೆಲ ಯುವಕರು ಘೋಷಣೆ ಕೂಗಿರುವುದು ನಿಜ. ಆದರೆ, ಅವರು ಭಾರತೀಯ ಸೈನಿಕರ ವಿರುದ್ಧವಾಗಲಿ, ಇಲ್ಲವೆ ಪಾಕಿಸ್ತಾನ ಪರ ಘೋಷಣೆ ಕೂಗಿರುವುದಕ್ಕೆ ಸಾಕ್ಷ್ಯಾಧಾರಗಳಿಲ್ಲ ಎಂದು ಸರ್ಕಾರ ಹೊಸ ಕಟ್ಟುಕಥೆ ಹುಟ್ಟುಹಾಕಿದೆ.

ಇದನ್ನೇ ಆಧಾರವಾಗಿಟ್ಟುಕೊಂಡಿರುವ ಪೊಲೀಸರು ಇಡೀ ಪ್ರಕರಣವನ್ನು ಮುಚ್ಚಿಹಾಕುವ ಕುತಂತ್ರಕ್ಕೆ ಶರಣಾಗಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನೆ ನಡೆದ ವೇಳೆ ವಿಡಿಯೋ ಚಿತ್ರೀಕರಣವನ್ನು ಕೂಲಂಕುಶವಾಗಿ ಪರಿಶೀಲಿಸಲಾಗಿದೆ. ಕೆಲವರು ಆಜಾದಿ ಎಂದು ಕೂಗಿದ್ದಾರೆ. ಆದರೆ, ಅವರು ಭಾರತದ ವಿರುದ್ಧ ಇಲ್ಲವೆ ಸೈನಿಕರಿಗೆ ಅಪಮಾನ ಮಾಡಿಲ್ಲ. ಇದನ್ನೇ ಕಾರಣವಾಗಿಟ್ಟುಕೊಂಡು ದೇಶದ್ರೋಹಿ ಪ್ರಕರಣ ದಾಖಲಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ಮೂಲಭೂತ ಪ್ರಶ್ನೆಯನ್ನು ಸರ್ಕಾರ ತನಿಖಾಧಿಕಾರಿಗಳ ಮುಂದಿಟ್ಟಿದೆ.
ಈ ಹಿಂದೆ ದೆಹಲಿಯ ಜೆಎನ್ಯುನಲ್ಲಿ ಇಂತಹದ್ದೇ ಘಟನೆ ನಡೆದಾಗ ವಿದ್ಯಾರ್ಥಿ ಸಂಘಟನೆ ಮುಖಂಡ ಕನ್ನಯ್ಯಕುಮಾರ್ ವಿರುದ್ಧವೂ ಇದೇ ಪ್ರಕರಣ ದಾಖಲಾಗಿತ್ತು. ಬಳಿಕ ದೆಹಲಿ ಹೈಕೋರ್ಟ್ ದೇಶದ್ರೋಹಿ ಘಟನೆ ಬಗ್ಗೆ ಸ್ಪಷ್ಟ ವ್ಯಾಖ್ಯಾ ನೀಡಿದೆ. ವಾಸ್ತವಿಕತೆ ಹೀಗಿದ್ದರೂ ಆಮ್ನೆಸ್ಟಿ ಇಂಟರ್ನ್ಯಾಷನಲ್ ವಿರುದ್ಧ ದೇಶದ್ರೋಹಿ ಪ್ರಕರಣ ದಾಖಲಿಸುವುದು ಸರಿಯಲ್ಲ ಎಂದು ಕಾಂಗ್ರೆಸ್ನ ಹಿರಿಯ ಮುಖಂಡರು ಸರ್ಕಾರದ ಮೇಲೆ ಒತ್ತಡ ಹಾಕಿದ್ದಾರೆ.  ಹೀಗೆ ಸರ್ಕಾರದ ಮೇಲೆ ಒತ್ತಡ ಬಂದಿರುವುದರಿಂದ ಪೊಲೀಸರು ಕೂಡ ಏನೂ ಮಾಡಲಾಗದ ನಿಸ್ಸಾಹಯಕ ಸ್ಥಿತಿಗೆ ಬಂದಿದ್ದಾರೆ.

ಪ್ರಕರಣದ ಹಿನ್ನೆಲೆ:

ಶನಿವಾರ ಸಂಜೆ ಬೆಂಗಳೂರಿನ ವಸಂತನಗರದಲ್ಲಿರುವ ಥಿಯಾಲಾಜಿಕಲ್ ಕಾಲೇಜಿನಲ್ಲಿ ಆಮ್ನೆಸ್ಟಿ ಸಂಘಟನೆ ಬ್ರೋಕನ್ ಫ್ಯಾಮಿಲೀಸ್ (ಒಡೆದ ಕುಟುಂಬಗಳು) ಎಂಬ ಹೆಸರಿನಡಿ ವಿಚಾರ ಸಂಕಿರಣವೊಂದನ್ನು ಆಯೋಜಿಸಿತ್ತು.  ಈ ವೇಳೆ ಕೆಲವು ಕಾಶ್ಮೀರಿ ಯುವಕರು ಭಾರತೀಯ ಸೈನಿಕರ ವಿರುದ್ಧ ಧಿಕ್ಕಾರ ಕೂಗಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ದೊಡ್ಡ ರಾದ್ಧಾಂತವನ್ನೇ ಸೃಷ್ಟಿಸಿತ್ತು.  ಪ್ರಕರಣಕ್ಕೆ ಸಂಬಂಧಿಸಿದಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮುಖಂಡರು ಆಮ್ನೆಸ್ಟಿ ಮತ್ತು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೆಲವರ ವಿರುದ್ಧ ದೂರು ದಾಖಲಿಸಿ ಬಂಧಿಸಬೇಕೆಂದು ಒತ್ತಡ ಹಾಕಿದ್ದರು.  ಸೋಮವಾರ ಜೆಸಿ ನಗರ ಪೊಲೀಸರು ಆಮ್ನೆಸ್ಟಿ ಸಂಘಟನೆ ವಿರುದ್ಧ ದೇಶದ್ರೋಹಿ ಕಾಯ್ದೆಯಡಿ ದೂರು ದಾಖಲಿಸಿ ನಿನ್ನೆಯಷ್ಟೆ ಕೆಲ ಮುಖಂಡರನ್ನು ವಿಚಾರಣೆಗೊಳಪಡಿಸಿದ್ದರು.

ಪೊಲೀಸರ ಮೇಲೆ ಒತ್ತಡ:

ಎಬಿವಿಪಿ ರಾಜ್ಯಾದ್ಯಂತ ದೇಶದ್ರೋಹಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಪ್ರತಿಭಟನೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿಯೇ ಪರಿಗಣಿಸಿದ್ದರು.
ಪ್ರಕರಣ ಕುರಿತಂತೆ ನಿನ್ನೆ ಕೆಲವರನ್ನು ವಿಚಾರಣೆಗೊಳಪಡಿಸಿದ್ದರೆ ಸಂಘಟನೆ ವಿರುದ್ಧ ದೇಶದ್ರೋಹಿ ಕಾಯ್ದೆಯಡಿ ದೂರು ದಾಖಲಿಸಿದ್ದರು. ಆದರೆ, ದೆಹಲಿ ನಾಯಕರು ಮುಖ್ಯಮಂತ್ರಿ ಗೃಹ ಸಚಿವರ ಮೇಲೆ ಒತ್ತಡ ಹಾಕಿ ಸಂಘಟಿಕರು ಮತ್ತು ಸಂಘಟನೆ ವಿರುದ್ಧ ತನಿಖೆ ಪೂರ್ಣಗೊಳ್ಳುವವರೆಗೂ ಯಾವುದೇ ರೀತಿಯ ಕ್ರಮ ಜರುಗಿಸದಂತೆ ಒತ್ತಡ ಹಾಕಿದರು.
ಇದರಿಂದ ಇಕ್ಕಟ್ಟಿಗೆ ಸಿಲುಕಿದ ರಾಜ್ಯ ಸರ್ಕಾರ ಪೊಲೀಸರ ಮೇಲೆ ಒತ್ತಡ ಹಾಕಿ ಪ್ರಕರಣದ ವಿಚಾರಣೆಯನ್ನು ನಿಧಾನಗತಿಯಲ್ಲಿ ನಡೆಸುವಂತೆ ಸರ್ಕಾರ ಸೂಚನೆ ಕೊಟ್ಟಿದೆ ಎಂದು ತಿಳಿದುಬಂದಿದೆ.

ಡಿಜಿ ಹೇಳಿದ್ದೇನು..?

ನಿನ್ನೆ ಹುಬ್ಬಳ್ಳಿಗೆ ತೆರಳಿದ್ದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್, ನಾವು ಈಗಾಗಲೇ ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತಿದ್ದೇವೆ. ಪ್ರಕರಣದಲ್ಲಿ ಯಾರೇ ಭಾಗಿಯಾದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಆದರೆ, ಕಳೆದ ರಾತ್ರಿ ಪ್ರಕರಣದ ಬಗ್ಗೆ ಮೃದುಧೋರಣೆ ತಾಳಬೇಕೆಂದು ಸರ್ಕಾರದ ವತಿಯಿಂದ ನಿರ್ದೇಶನ ಬಂದ ಕಾರಣ ಡಿಜಿಪಿ ತನಿಖಾಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಾರೆ ಎನ್ನಲಾಗಿದೆ.  ಸದ್ಯಕ್ಕೆ ಯಾರನ್ನೂ ವಿಚಾರಣೆಗೊಳಪಡಿಸುವುದಾಗಲಿ, ಇಲ್ಲವೆ ಹೊಸದಾಗಿ ದೂರು ದಾಖಲಿಸಿಕೊಳ್ಳಬಾರದು. ನನ್ನ ನಿರ್ದೇಶನವಿಲ್ಲದೆ ಯಾವುದೇ ಕ್ರಮ ತೆಗೆದುಕೊಳ್ಳದಂತೆ ವಿಚಾರಣಾಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ ಎಂದು ತಿಳಿದುಬಂದಿದೆ.

► Follow us on –  Facebook / Twitter  / Google+

Facebook Comments

Sri Raghav

Admin