ಆಮ್ನೆಸ್ಟಿ ವಿರುದ್ಧ ಕೇಂದ್ರಕ್ಕೆ ದೂರು : ದೇಶದ್ರೋಹಿಗಳ ಬಂಧನಕ್ಕೆ ಬಿಜೆಪಿ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

bjp-Protest

ಬೆಂಗಳೂರು, ಆ.20- ಯುನೈಟೆಡ್ ಆಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ದೇಶ ಮತ್ತು ಸೇನೆ ವಿರೋಧಿ ಘೋಷಣೆಗಳನ್ನು ಕೂಗಿದವರ ವಿರುದ್ಧ ಕ್ರಮಕೈ ಗೊಳ್ಳಲು ರಾಜ್ಯಸರ್ಕಾರ ಮೀನಾಮೇಷ ಎಣಿಸುತ್ತಿದ್ದು, ಕೇಂದ್ರ ಮಧ್ಯಪ್ರವೇಶಿಸಿ ದೇಶ ವಿದ್ರೋಹಿಗಳನ್ನು ಮಟ್ಟ ಹಾಕಬೇಕೆಂದು ಬಿಜೆಪಿ ಮುಖಂಡರಾದ ಆರ್. ಅಶೋಕ್, ಸುರೇಶ್ಕುಮಾರ್, ಪಿ.ಸಿ.ಮೋಹನ್ ಅವರು ಕೇಂದ್ರ ಗೃಹ ಸಚಿವ ರಾಜನಾಥ್ಸಿಂಗ್ ಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.  ಕಳೆದ ವಾರ ಬೆಂಗಳೂರಿನ ಜಮ್ಮು- ಕಾಶ್ಮೀರದಲ್ಲಿ ಸೇನೆಯಿಂದ ನಾಗರಿಕ ಹಕ್ಕುಗಳ ಹೊಣೆ ನಿರಾಕರಣೆ ಎಂಬ ವರದಿ ಹಿನ್ನೆಲೆಯಲ್ಲಿ ಒಡೆದ ಕುಟುಂಬಗಳು ಎಂಬ ಕಾರ್ಯಕ್ರಮ ಆಯೋಜಿಸಿದ್ದ ಸಂದರ್ಭದಲ್ಲಿ ದೇಶವಿರೋಧಿ ಮತ್ತು ಸೈನಿಕರಿಗೆ ಅವಮಾನ ಮಾಡುವಂತಹ ಘೋಷಣೆಗಳನ್ನು ಕೂಗಲಾಗಿತ್ತು.  ಆ ಸಂಸ್ಥೆ ವಿರುದ್ಧ ರಾಜ್ಯಸರ್ಕಾರ ಎಫ್ಐಆರ್ ದಾಖಲಿಸಿತ್ತು.

ಆದರೆ ಕಾಂಗ್ರೆಸ್ನ ಹೈಕಮಾಂಡ್ ಸೂಚನೆಯಂತೆ ಯಾರನ್ನೂ ಬಂಧಿಸದೆ ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುವ ಮೂಲಕ ಶಾಂತ ರೀತಿಯಲ್ಲಿದ್ದ ಕರ್ನಾಟಕದಲ್ಲಿ ದೇಶ ದ್ರೋಹದ ಕಿಡಿ ಹಚ್ಚುವ ಕೆಲಸ ಮಾಡಲಾಗುತ್ತಿದೆ. ತನಿಖೆ ನಡೆಸದೆ ವಿಳಂಬ ಮಾಡುತ್ತಿದೆ. ಆರೋಪಿಗಳನ್ನು ಬಂಧಿಸುವಲ್ಲಿ ನಿರ್ಲಕ್ಷ್ಯ ತೋರಿದೆ ಕೂಡಲೇ ಮಧ್ಯಪ್ರವೇಶ ಮಾಡಿ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕೇಂದ್ರ ಗೃಹ ಸಚಿವ ರಾಜನಾಥ್ಸಿಂಗ್ ಅವರಿಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಇದೊಂದು ದೇಶವಿರೋಧಿ ಶಕ್ತಿಗಳ ಷಡ್ಯಂತ್ರ ಎಂಬುದು ಬಹಿರಂಗಗೊಂಡಿದ್ದು, ದೇಶ ವಿರೋಧಿ ಚಟುವಟಿಕೆಗಳಲ್ಲಿ ನಿರತವಾಗಿರುವ ಇಂತಹ ಶಕ್ತಿಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ತನಿಖೆಯನ್ನು ಚುರುಕುಗೊಳಿಸಿಲ್ಲ. ಸೌಹಾರ್ದತೆಗೆ ಧಕ್ಕೆ ತರುವ ರೀತಿಯಲ್ಲಿ ನಡೆದಿರುವ ಈ ಪ್ರಕರಣವನ್ನು ದಾಖಲಿಸಿಕೊಂಡು ಸಾಕ್ಷಿಗಳನ್ನು ಪರಿಶೀಲಿಸುತ್ತಿದ್ದಾರೆ. ಆದರೆ ಈವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ತಿಳಿಸಿದ್ದಾರೆ.

ಈ ಪ್ರಕರಣದ ವಿಚಾರಣೆಗೆ ರಾಜಕೀಯ ಒತ್ತಡ ಅಡ್ಡಿಯಾಗುತ್ತಿರುವುದು ಕಂಡು ಬಂದಿದೆ. ಅಲ್ಲದೆ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆ ಬೆಂಗಳೂರು ಹೊರತಾಗಿ ದೆಹಲಿ, ಪುಣೆ ಹಾಗೂ ಚೆನ್ನೈಗಳಲ್ಲಿ ಶಾಖೆ ಹೊಂದಿರುವ ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು, ಬೆಂಗಳೂರು ಪೊಲೀಸರಿಗೆ ರಾಜ್ಯದ ಗಡಿಯ ಹೊರಗಿನ ವಿಚಾರಣೆಯನ್ನು ಸರಿಯಾಗಿ ನಡೆಸಲು ಅಸಾಧ್ಯವಾಗಿರಬಹುದು. ಈ ಹಿನ್ನೆಲೆಯಲ್ಲಿ ದೇಶದ್ರೋಹದ ಚಟುವಟಿಕೆಗಳಲ್ಲಿ ನಿರತವಾಗಿರುವ ಶಕ್ತಿಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಮತ್ತು ಸಾರ್ವಜನಿಕರ ಆತಂಕಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸುವಂತೆ ಆಗ್ರಹಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin