‘ಆರೋಗ್ಯ ಕ್ಷೇತ್ರವನ್ನು ಉದ್ಯಮವನ್ನಾಗಿ ನೋಡದೆ ಸೇವಾ ಕ್ಷೇತ್ರವನ್ನಾಗಿ ಪರಿಗಣಿಸಬೇಕು’

ಈ ಸುದ್ದಿಯನ್ನು ಶೇರ್ ಮಾಡಿ

Ramesh-Kumar--000-2185

ಬೆಂಗಳೂರು, ಏ.11- ಆರೋಗ್ಯ ಕ್ಷೇತ್ರವನ್ನು ಉದ್ಯಮವನ್ನಾಗಿ ನೋಡದೆ ಸೇವಾ ಕ್ಷೇತ್ರವನ್ನಾಗಿ ಪರಿಗಣಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್‍ಕುಮಾರ್ ಹೇಳಿದರು.  ನಗರದ ಖಾಸಗಿ ಹೋಟೆಲ್‍ನಲ್ಲಿ ಆರೋಗ್ಯ ಕಾಳಜಿ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಪೊರೇಟ್ ಅಥವಾ ಖಾಸಗಿ ಸಂಸ್ಥೆಗಳ ಮುಂದೆ ನನ್ನದೊಂದು ಪ್ರಶ್ನೆ ಇದೆ. ಆರೋಗ್ಯ ವಲಯವನ್ನು ಉದ್ಯಮವನ್ನಾಗಿ ಪರಿಗಣಿಸಿದ್ದೀರಾ ಅಥವಾ ಸೇವಾ ಕ್ಷೇತ್ರ ಎಂದು ಭಾವಿಸಿದ್ದೀರಾ ಎಂಬುದನ್ನು ಮೊದಲು ಸ್ಪಷ್ಟಪಡಿಸಿಕೊಳ್ಳಿ. ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಕಲ್ಪಿಸಬೇಕು. ಅದನ್ನು ಉದ್ಯಮ ಎಂದು ತೀರ್ಮಾನಿಸುವುದಾದರೆ ಕೆಳ ಹಂತದ ಜನರಿಗೆ ಆರೋಗ್ಯ ಸೇವೆ ಒದಗಿಸುವುದು ಕಷ್ಟವಾಗಲಿದೆ.

ವ್ಯಾಪರವೇ ಬೇರೆ, ಸೇವೆಯೇ ಬೇರೆ. ಆರೋಗ್ಯ ಕ್ಷೇತ್ರ ವ್ಯಾಪಾರವಾಗಬಾರದು ಎಂದು ಹೇಳಿದರು. ಔಷಧಿ ಬೆಲೆ ದುಬಾರಿಯಾಗಲು ಯಾರು ಕಾರಣ ಎಂಬ ಪ್ರಶ್ನೆ ಇದೆ. ಜನರಿಕ್ ಔಷಧಿಗಳು ಮತ್ತೊಂದೆಡೆ ಬ್ರಾಂಡೆಡ್ ಔಷಧಿಗಳು. ಜನರಿಕ್ ಔಷಧಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಂಗೀಕಾರ ಪಡೆದಿದೆ. ಹಲವಾರು ಪರೀಕ್ಷೆಗಳನ್ನು ಎದುರಿಸಿದೆ. ಜತೆಗೆ ಬ್ರಾಂಡೆಂಡ್ ಔಷಧಿಯಲ್ಲಿರುವ ಸಮಾನ ಅಂಶಗಳನ್ನು ಒಳಗೊಂಡಿವೆ. ಆದರೂ ಜನರಿಕ್ ಔಷಧಿಯನ್ನು ಬಳಸಲು ಶಿಫಾರಸು ಮಾಡುವಾಗ ಹಿಂದೇಟು ಹಾಕುತ್ತೇವೆ. ಅದೇ ರೀತಿ ಚಿಕಿತ್ಸೆಯ ವಿಷಯದಲ್ಲೂ ನಾನಾ ಗೊಂದಲಗಳನ್ನು ಸೃಷ್ಟಿಸಲಾಗುತ್ತಿದೆ.

ಹರ್ನಿಯಾಗೆ ಸರ್ಜರಿ ಮಾಡಬೇಕಾದರೆ ಸರ್ಕಾರಿ ಆಸ್ಪತ್ರೆಯಾಗಲಿ, ಖಾಸಗಿ ಆಸ್ಪತ್ರೆಯಾಗಲಿ ಒಂದೇ ರೀತಿಯ ವಿಧಾನ ಬಳಸುತ್ತೇವೆ. ಆದರೆ, ಖಾಸಗಿ ಆಸ್ಪತ್ರೆಗಳ ದರಪಟ್ಟಿ ನೋಡಿದರೆ ಆತಂಕವಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಗುಣಮಟ್ಟ ಇಲ್ಲ ಎನ್ನುವುದಾದರೆ ಜನರ ಜೀವ ಉಳಿಸಲು ಹೇಗೆ ಸಾಧ್ಯ? ಗುಣಮಟ್ಟ ಇಲ್ಲ ಎಂದು ಸಾಬೀತು ಪಡಿಸಿ ನಾನು ಸರ್ಕಾರಿ ಆಸ್ಪತ್ರೆಗಳನ್ನು ಮುಚ್ಚಲು ಸಿದ್ದನಿದ್ದೇನೆ. ಆದರೆ, ಅನಗತ್ಯವಾಗಿ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ನಕಾರಾತ್ಮಕ ಭಾವನೆ ಮೂಡಿಸುವ ನಿರ್ಧಾರ ಮಾಡಬಾರದು ಎಂದು ಹೇಳಿದರು.

ವಿಮಾ ಕಂಪೆನಿಗಳು ಆರೋಗ್ಯ ಕ್ಷೇತ್ರದ ಹಲವಾರು ಕಂಪೆನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಿವೆ. ಇದಕ್ಕೆ ಕಾರಣ ಏನು ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಸಾಕಷ್ಟು ಹಣ ನೀಡುತ್ತಿದೆ. ಅದು ಸರಿಯಾಗಿ ತಲುಪಬೇಕು. ಜನರ ಪ್ರತಿನಿಧಿಯಾಗಿ ನಾನು ಅವರ ಅಗತ್ಯಗಳಿಗೆ ತಕ್ಕಂತೆ ಮಾತನಾಡುವುದನ್ನು ರೂಢಿಸಿಕೊಂಡಿದ್ದೇನೆ. ನನ್ನ ಮಾತುಗಳು ಖಾರವಾಗಿದ್ದರೆ ಚರ್ಚೆ ಮಾಡಬಹುದು ಎಂದರು.

ನಮ್ಮ ಸರ್ಕಾರ ಪ್ರತಿ ಜಿಲ್ಲೆಗೊಂದರಂತೆ ವೈದ್ಯಕೀಯ ಕಾಲೇಜು ಆರಂಭಿಸುವ ಗುರಿ ಹೊಂದಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಮೆಡಿಕಲ್ ಕಾಲೇಜುಗಳಿವೆ. ವರ್ಷಕ್ಕೆ 6ಸಾವಿರ ವೈದ್ಯಕೀಯ ಪದವೀಧರರನ್ನು ತಯಾರು ಮಾಡುತ್ತೇವೆ. ಆದರೆ, ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡಲು ಅಗತ್ಯ ಇರುವ 200 ವೈದ್ಯರು ಸಿಗುತ್ತಿಲ್ಲ ಎಂದು ವಿಷಾದಿಸಿದರು.

ಈ ಬಾರಿ ಬಜೆಟ್‍ನಲ್ಲಿ ಆರೋಗ್ಯ ಕ್ಷೇತ್ರಕ್ಕೆ 5ಸಾವಿರ ಕೋಟಿಗೂ ಹೆಚ್ಚು ಹಣವನ್ನು ಕಾಯ್ದಿರಿಸಲಾಗಿದೆ. ಎಲ್ಲರಿಗೂ ಎಲ್ಲೆಡೆಗೂ ಆರೋಗ್ಯ ತಲುಪಬೇಕು ಎಂಬುದು ನಮ್ಮ ಉದ್ದೇಶ ಎಂದರು. ಕೇರಳದ ಆರೋಗ್ಯ ಸಚಿವರಾದ ಕೆ.ಕೆ.ಶೈಲಾಜಾಟೀಚರ್ ಮಾತನಾಡಿ, ಕೇರಳ ಸರ್ಕಾರ ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.

ಇತ್ತೀಚೆಗೆ ಆಗ್ರಂ ಮಿಷನ್ ಆರಂಭಿಸಲಾಗಿದೆ. ಪ್ರಾಥಮಿಕ ಆರೋಗ್ಯ ಸಂಸ್ಥೆಗಳನ್ನು ಬಲಗೊಳಿಸಲು ಇದು ನೆರವಾಗಿದೆ. 30ಸಾವಿರ ಮಂದಿಗೆ ಒಬ್ಬ ವೈದ್ಯರಿದ್ದು, ಅದರ ಪ್ರಮಾಣವನ್ನು 10ಸಾವಿರ ಮಂದಿಗೆ ಕಡಿಮೆ ಮಾಡುವ ಗುರಿ ಹೊಂದಲಾಗಿದೆ. ತಾಲ್ಲೂಕು ಕೇಂದ್ರಗಳಲ್ಲಿ ಡಯಾಲಿಸಿಸ್ ಕೇಂದ್ರಗಳಲ್ಲಿ, ಜಿಲ್ಲಾ ಕೇಂದ್ರಗಳಲ್ಲಿ ಟ್ಯಾಪ್‍ಲಾಗ್ ಸೇವೆಯನ್ನು ಆರಂಭಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.
ಖಾಸಗಿ ವಿಮಾ ಸಂಸ್ಥೆಯ ಡಿ.ಎಲ್.ಅಲಮೇಲು ಮಾತನಾಡಿ, ದೇಶದಲ್ಲಿ ಶೇ.17ರಷ್ಟು ಜನ ಮಾತ್ರ ಆರೋಗ್ಯ ವಿಮಾ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಕರ್ನಾಟಕದಲ್ಲಿ 6 ಸ್ವತಂತ್ರ ಹಾಗೂ 28 ವಿಮಾ ಕಂಪೆನಿಗಳಿದ್ದು, ಅವು ಕೆಲಸ ಮಾಡುತ್ತಿವೆ. ಆದರೂ ಬಡವರಿಗೆ ಆರೋಗ್ಯ ವಿಮೆ ಒದಗಿಸಲು ಸಾಧ್ಯವಾಗುತ್ತಿಲ್ಲ. ವಿಮಾ ಕಂಪೆನಿಗಳ ಮುಂದಿರುವ ಪ್ರಮುಖ ಸವಾಲು ಎಂದರೆ, ಕೆಲವು ಆಸ್ಪತ್ರೆಗಳು ದುಬಾರಿ ವೆಚ್ಚ ವಿಧಿಸುತ್ತಿವೆ. ವಿಮಾ ಕಂತಿನಿಂದ ಸಂಗ್ರಹಿಸುವ ಹಣಕ್ಕಿಂತಲೂ ದುಬಾರಿ ಬಿಲ್‍ಗಳನ್ನು ನೀಡುತ್ತಿವೆ. ಸರ್ಕಾರ ಆರೋಗ್ಯ ಸೇವೆಯ ದರಗಳ ಮೇಲೆ ಸ್ಪಷ್ಟ ನಿಯಮಾವಳಿಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.

ಆರೋಗ್ಯ ಮಿಷನ್‍ನ ಡಾ.ರತನ್‍ಕೇಲ್ಕರ್, ಸುವರ್ಣ ಸುರಕ್ಷಾ ಆರೋಗ್ಯ ಟ್ರಸ್ಟ್‍ನ ಡಾ.ಸುಧಾಚಂದ್ರಶೇಖರ್, ಬಯೋಕಾನ್ ಸಂಸ್ಥೆಯ ರಾಣಿದೇಸಾಯಿ, ಜಯಶ್ರೀ ಟಾಕ್ಕರ್, ಹಿರಿಯ ಅಧಿಕಾರಿ ಡಾ.ಕೆ.ರಾಜೇಶ್ವರರಾವ್ ಮತ್ತಿತರರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin