ಆರೋಪಿ ಹಿಡಿಯಲು ಹೋದ ಪೊಲೀಸರೇ ಆರೋಪಿಯಾದರು..!

ಈ ಸುದ್ದಿಯನ್ನು ಶೇರ್ ಮಾಡಿ

Police-01

ಕೆಜಿಎಫ್,ಅ.13-ಆರೋಪಿಯನ್ನು ಹಿಡಿಯಲು ಹೋದ ಪೊಲೀಸರು ತಾವೇ ಆರೋಪಿಗಳಾದ ಘಟನೆ ನಗರದಲ್ಲಿ ಬಿಸಿ ಬಿಸಿ ಸುದ್ದಿಯಾಗಿದೆ. ಹೆಡ್ಕಾನ್ಸ್ಟೇಬಲ್ ಗೋಪಾಲ್ ಸಿಂಗ್ ಮತ್ತು ಈತನ ಸಹಚರ ಸಾಧಿಕ್ ಬಂಧಿತರಾಗಿದ್ದು , ಇವರ ವಿರುದ್ಧ ರಾಬರ್ಟ್ಸನ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಕೆನಡಾ ದೇಶದ ಲೆದರ್ ಕಾರ್ಖಾನೆಯಲ್ಲಿ ಕೆಲಸ ಕೊಡಿಸುವುದಾಗಿ 49 ಮಂದಿಯಿಂದ ಲಕ್ಷಾಂತರ ರೂ. ಪಡೆದ ವಂಚಕರಿಗೆ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪದ ಮೇಲೆ ಈ ಇಬ್ಬರನ್ನು ಬಂಧಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಗೋಪಿನಾಥ್ ಅವರೇ ಖುದ್ದಾಗಿ ಗೋಪಾಲ್ ಸಿಂಗ್ರನ್ನು ತನಿಖೆ ನಡೆಸಿದ ನಂತರ, ಇವರ ವಿರುದ್ಧ ಮಹಿಳೆಯರೊಂದಿಗೆ ಅಸಭ್ಯ ವರ್ತನೆ, ಸುಲಿಗೆ ಪ್ರಕರಣಗಳಡಿ ಕೇಸ್ ದಾಖಲಾಗಿದ್ದು, ಈ ಘಟನೆ ಪೊಲೀಸ್ ಇಲಾಖೆಯಲ್ಲಿ ಭಾರೀ ಸಂಚಲನ ಉಂಟು ಮಾಡಿದೆ.

ಘಟನೆ ವಿವರ:

ಆನೇಕಲ್ನ ಅಜಯ್ಕುಮಾರ್, ಧರ್ಮಪುರಿ ಸಮೀಪದ ರಾಯಕೋಟೆಯ ಅರುಣ್ಕುಮಾರ್ ಎಂಬುವರು ನಗರದ ಚಾಂಪಿಯನ್ ರೀಫ್ನ ವಿಷ್ಣುಕುಮಾರ್ ಎಂಬಾತನ ಮೂಲಕ ಕೆನಡಾದಲ್ಲಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿದ್ದ.  ಇದನ್ನು ನಂಬಿದ ಜಂಬು ಟ್ರಾವೆಲ್ ಮಾಲೀಕ ಜಂಬು ಎಂಬುವರು ತಾವು ಹಣ ನೀಡಿದಲ್ಲದೆ ಇತರ 48 ಮಂದಿಯಿಂದ ತಲಾ 1.60 ಲಕ್ಷ ರೂಪಾಯಿಗಳನ್ನು ಆರೋಪಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದರು. ಹಣ ಪಡೆದುಕೊಂಡ ಅಜಯ್ಕುಮಾರ್, ಅರುಣ್ಕುಮಾರ್ ಕೆಲಸದ ಬಗ್ಗೆ ಯಾವುದೇ ಮಾಹಿತಿ ನೀಡದೆ ನಾಪತ್ತೆಯಾಗಿದ್ದರು.  ಗಾಬರಿಯಾದ ಇವರು ಜೂ.17ರಂದು ರಾಬರ್ಟ್ಸನ್ಪೇಟೆ ಪೊಲೀಸರಿಗೆ ದೂರು ನೀಡಿದ್ದರು.  ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇಲ್ಲಿನ ಅಧಿಕಾರಿಗಳು ಕೂಡಲೇ ರಾಬರ್ಟ್ಸನ್ಪೇಟೆ ಸಬ್ಇನ್ಸ್ಪೆಕ್ಟರ್ ಹರೀಶ್ ಮತ್ತು ಚಾಂಪಿಯನ್ರೀಫ್ ಸಬ್ಇನ್ಸ್ಪೆಕ್ಟರ್ ಅಮರೇಶ್ ಗೌಡ ಅವರನ್ನು ಗೋವಾಕ್ಕೆ ಕಳುಹಿಸಿಕೊಟ್ಟಿದ್ದರು.  ನಂತರ ನ್ಯಾಯಾಲಯದ ಅನುಮತಿ ಪಡೆದು ವಂಚಕರ ಬ್ಯಾಂಕ್ ಖಾತೆ ಸ್ಥಗಿತಗೊಳಿಸಿ ಎರಡು ಕಾರು, ಬೈಕ್ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದರು.

ವಂಚಕ ಅಜಯ್ಕುಮಾರ್ನನ್ನು ಪತ್ತೆಹಚ್ಚಲು ಮೂರು ವಾರಗಳ ಹಿಂದೆ ಮುಂಬೈಗೆ ತೆರಳಿದ್ದ ಪೊಲೀಸ್ ತಂಡದಲ್ಲಿ ಹೆಡ್ಕಾನ್ಸ್ಟೇಬಲ್ ಗೋಪಾಲ್ ಸಿಂಗ್, ಕಾನ್ಸ್ಟೇಬಲ್ ಗಜೇಂದ್ರ, ದೂರುದಾರ ಜಂಬು ಮತ್ತು ಕಾರಿನ ಚಾಲಕ ಸ್ಟಾಲಿನ್ ಇದ್ದರು.  ಮುಂಬೈನಲ್ಲಿ ಎರಡು ವಾರ ಮೊಕ್ಕಾಂ ಹೂಡಿದ್ದ ಪೊಲೀಸ್ ತಂಡಕ್ಕೆ ಆರೋಪಿ ಗೋವಾದಲ್ಲಿರುವುದನ್ನು ಖಚಿತಪಡಿಸಿಕೊಂಡು ಗೋವಾಕ್ಕೆ ತಲುಪಿತ್ತು.  ಆದರೆ ಗೋಪಾಲ್ ಸಿಂಗ್ ತನ್ನ ಸಹಚರ ಸಾಧಿಕ್ ಎಂಬಾತನನ್ನು ಯಾರಿಗೂ ತಿಳಿಯದಂತೆ ಗೋವಾದಲ್ಲಿ ಲಾಡ್ಜ್ನಲ್ಲಿಟ್ಟಿದ್ದರು. ಆರೋಪಿ ಸುಳಿವು ಅರಿತು ಚಾಲಕನನ್ನು ಕರೆದುಕೊಂಡು ಆರೋಪಿಯ ಮನೆಗೆ ಹೋದ ಸಂದರ್ಭದಲ್ಲಿ ಸಾಧಿಕ್ನನ್ನು ಅಲ್ಲಿಗೆ ಕರೆಸಿಕೊಂಡಾಗಲೇ ಗೋಪಾಲ್ ಸಿಂಗ್ ಮಾಸ್ಟರ್ ಮೈಂಡ್ ಎಲ್ಲರಿಗೂ ಗೊತ್ತಾಗಿದ್ದು .  ಆರೋಪಿಯನ್ನು ಬಂಧಿಸುವ ಬದಲು ಆತನನ್ನು ಹೆದುರಿಸಿ ಲಕ್ಷಾಂತರ ಮೌಲ್ಯದ ಚಿನ್ನ ಮತ್ತು ಹಣ ಸುಲಿಗೆ ಮಾಡಿ ಆರೋಪಿ ತಪ್ಪಿಸಿಕೊಳ್ಳಲು ಸಹಾಯ ಮಾಡಿದರೆಂಬ ಆರೋಪ ಕೇಳಿಬಂದಿದೆ.

ಈ ಪ್ರಕರಣ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದರಿಂದ ಅದು ಮುಂದೊಂದು ದಿನ ತೊಂದರೆಯಾಗಬಹುದೆಂದು ಅರಿತ ಸಿಬ್ಬಂದಿ ಆರೋಪಿಯ ಮನೆಯ ನೀರಿನ ತೊಟ್ಟಿಯಲ್ಲಿ ಹಾಕಿದ್ದನೆಂದು ತಿಳಿದುಬಂದಿದೆ.  ಅತ್ತ ಗಂಡನನ್ನು ವಿಚಾರಣೆ ನಡೆಸುವ ನೆಪದಲ್ಲಿ ಗೋಪಾಲ್ಸಿಂಗ್ ತನ್ನ ಜೊತೆ ಅಸಭ್ಯವಾಗಿ ವರ್ತಿಸಿದನಲ್ಲದೆ ಪ್ರಾಣ ಬೆದರಿಕೆ ಹಾಕಿದ್ದಾನೆಂದು ಆರೋಪಿ ಪತ್ನಿ ಗೋವಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂಬ ಆರೋಪ ಸಹ ಕೇಳಿಬಂದಿದೆ.  ಮುಖ್ಯಪೇದೆ ಗೋಪಾಲ್ಸಿಂಗ್ ಕ್ರಿಮಿನಲ್ ಮೈಂಡ್ ಉಪಯೋಗಿಸಿದ್ದು, ಪೊಲೀಸ್ ಇಲಾಖೆಗೆ ಗೊತ್ತಿರಲಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಉರಿಗಾಂ ಠಾಣೆ ಇನ್ಸ್ಪೆಕ್ಟರ್ ಸುಧೀರ್ ಅವರನ್ನು ನೇಮಿಸಲಾಗಿದೆ.  ಹೆಡ್ಕಾನ್ಸ್ಟೇಬಲ್ ಗೋಪಾಲ್ ಸಿಂಗ್ ವಿರುದ್ದ ಪೂರ್ವಭಾವಿ ವಿಚಾರಣೆ ನಡೆಸುವಂತೆ ರಾಬರ್ಟ್ಸನ್ ಪೇಟೆ ವೃತ್ತ ನಿರೀಕ್ಷಕ ಜಗದೀಶ್ ಅವರನ್ನು ಇಲಾಖಾ ವಿಚಾರಣಾಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು ಎಸ್ಪಿ ದಿವ್ಯಾಗೋಪಿನಾಥ್ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin