ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್‍ ಕೊಲೆ ಕಾರಣ ಇನ್ನೂ ಪ್ರಕರಣ ನಿಗೂಢ

ಈ ಸುದ್ದಿಯನ್ನು ಶೇರ್ ಮಾಡಿ

Rudresh-Murder

ಬೆಂಗಳೂರು, ಅ.17- ನಗರದ ಕಮರ್ಷಿಯಲ್ ಸ್ಟ್ರೀಟ್‍ನಲ್ಲಿ ನಿನ್ನೆ ನಡೆದ ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್‍ನ ಕೊಲೆ ಪ್ರಕರಣ ನಿಗೂಢವಾಗಿದ್ದು, ಇನ್ನೂ ಕಾರಣ ತಿಳಿದುಬಂದಿಲ್ಲ.ಈ ಸಂಬಂಧ ಪೊಲೀಸರು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೂರ್ವ ವಿಭಾಗದ ಪೊಲೀಸರು ಮತ್ತು ಸಿಸಿಬಿ ಪೊಲೀಸರ ನೇತೃತ್ವದ ಆರು ವಿಶೇಷ ತಂಡಗಳನ್ನು ರಚನೆ ಮಾಡಿದ್ದು, ಆ ತಂಡಗಳು ವಿವಿಧ ದೃಷ್ಟಿಕೋನಗಳಲ್ಲಿ ತನಿಖೆ ನಡೆಸುತ್ತಿವೆ. ರುದ್ರೇಶ್ ನಡೆಸುತ್ತಿದ್ದರೆನ್ನಲಾದ ಲೇವಾದೇವಿ, ರಿಯಲ್ ಎಸ್ಟೇಟ್ ವ್ಯವಹಾರ ಘಟನೆಗೆ ಕಾರಣವಿರಬಹುದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಹಳೆ ದ್ವೇಷ ಅಥವಾ ಜಾತಿ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದೇ ಎಂಬ ಬಗ್ಗೆಯೂ ಕೂಡ ತನಿಖೆ ಮುಂದುವರಿದಿದೆ.

ತನಿಖಾ ತಂಡಗಳು, ಬೇರೆ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಗೆ ತೆರಳಿ ಈ ಕೊಲೆ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ನಿನ್ನೆ ಆರ್‍ಎಸ್‍ಎಸ್ ಗಣವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದಿರುಗಿ ಬಂದ ಸಂದರ್ಭದಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ರುದ್ರೇಶ್ ಅವರನ್ನು ಪಲ್ಸರ್ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಕೂಡಲೇ ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯದಲ್ಲಿ ಕೊನೆಯುಸಿರೆಳೆದಿದ್ದರು. ಈ ಘಟನೆ ಕಾಡ್ಗಿಚ್ಚಿನಂತೆ ಹರಡಿತ್ತು.

ನಿನ್ನೆ ಆರ್‍ಎಸ್‍ಎಸ್ ಸಂಘಟನೆ, ಬಿಜೆಪಿ ಪಕ್ಷದವರು ಈ ಘಟನೆ ಖಂಡಿಸಿ ಪ್ರತಿಭಟನೆ ನಡೆಸಿದ್ದರು. ಭದ್ರತೆ ಹಿನ್ನೆಲೆಯಲ್ಲಿ ಬೌರಿಂಗ್ ಆಸ್ಪತ್ರೆಯಿಂದ ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಇಂದು ಕೂಡ ಆರ್‍ಎಸ್‍ಎಸ್, ಬಿಜೆಪಿ ಸೇರಿದಂತೆ ವಿವಿಧ ಸಂಘಟನೆಗಳು ಹಂತಕರ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದವು.ಸೂಕ್ಷ್ಮ ಪ್ರದೇಶವಾದ ಶಿವಾಜಿನಗರದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin