ಆರ್‍ಎಸ್‍ಎಸ್ ಪಥಸಂಚಲನಕ್ಕೆ ನಿರಾಕರಣೆ : ಮಾತಿನ ಚಕಮಕಿ

ಈ ಸುದ್ದಿಯನ್ನು ಶೇರ್ ಮಾಡಿ

tumakuru
ತುಮಕೂರು, ಫೆ.18- ಆರ್.ಎಸ್.ಎಸ್.ಕಾರ್ಯಕರ್ತರು ನಡೆಸಲು ಉದ್ದೇಶಿಸಿದ್ದ ಕೌಮುದಿ (ಬೆಳದಿಂಗಳ) ಪಥಸಂಚಲನಕ್ಕೆ ಅನುಮತಿ ನೀಡಲು ಪೊಲೀಸರು ನಿರಾಕರಿಸಿದ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಗಣವೇಶದಾರಿಗಳ ನಡುವೆ ಮಾತಿನ ಚಕಮುಕಿ, ತಳ್ಳಾಟ, ನೂಕಾಟ ನಡೆದು ಕೊನೆಗೆ ಕೇಂದ್ರ ವಲಯದ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಮಧ್ಯ  ಪ್ರವೇಶಿಸಿ ಮಾ.11ಕ್ಕೆ ಅವಕಾಶ ಮಾಡಿಕೊಟ್ಟ ಹಿನ್ನಲೆಯಲ್ಲಿ ಪಥ ಸಂಚಲನ ಮುಂದೂಡಿದರು.ನಗರದ ಕೋತಿ ತೋಪಿನಲ್ಲಿರುವ ಸಾಧನ ಆರ್.ಎಸ್.ಎಸ್.ಕಚೇರಿಯಲ್ಲಿ ತಡರಾತ್ರಿ ದಕ್ಷಿಣ ಕರ್ನಾಟಕ ಪ್ರಾಂತ ಸಹವಾಹಕರಾದ ಪಟ್ಟಾಭಿರಾಮ ಅವರ ನೇತೃತ್ವದಲ್ಲಿ ಕೌಮುದೀ ಪಥಸಂಚಲನ ಆಯೋಜಿಸಲಾಗಿತ್ತು. ಸಂಜೆ ಸಭೆ ಸೇರಿದ್ದ ಗಣವೇಶದಾರಿಗಳು, ಸಭೆಯ ನಂತರ ನಗರದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಲು ಮುಂದಾದಾಗ ಅನುಮತಿ ನಿರಾಕರಿಸಿದ ಪೊಲೀಸರು ಕಚೇರಿ ಆವರಣದಿಂದ ಹೊರಹೋಗದಂತೆ ತಡೆದರು.

ಇತ್ತೀಚೆಗೆ ಶಿರಾ ನಗರದ ಯುವಕನೋರ್ವ ಹಿಂದೂಗಳ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿರುವ ಹಿನ್ನೆಲೆಯಲ್ಲಿ ಗಲಭೈಯಾಗುವ ಸಾಧ್ಯತೆಯ ಕಂಡು ಪೊಲೀಸರು ಅನುಮತಿ ನಿರಾಕರಿಸಿದ್ದಾರೆ ಎನ್ನಲಾಗಿದೆ.  ಇದನ್ನು ವಿರೋಧಿಸಿ ಮಾಜಿ ಸಚಿವ ಎಸ್.ಶಿವಣ್ಣ, ಮಾಜಿ ಸಂಸದ ಜಿ.ಎಸ್.ಬಸವರಾಜು,ಬಿಜೆಪಿ ಅಧ್ಯಕ್ಷ ಜೋತಿಗಣೇಶ್,ಶಾಸಕ ಬಿ.ಸುರೇಶಗೌಡ, ಎಂ.ಬಿ.ನಂದೀಶ್,ರುದ್ರೇಶ್, ಸೇರಿದಂತೆ ಹಲವರು ಪೊಲೀಸರೊಂದಿಗೆ ವಾಗ್ವಾಧಕ್ಕೆ ಇಳಿದಿದ್ದು, ಈ ವೇಳೆ ಕೆಲ ಕಾಲ ಆ ಭಾಗದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.ಆರ್.ಎಸ್.ಎಸ್.ಗಣವೇಶದಾರಿಗಳು ಕೌಮುದಿ ಪಥಸಂಚಲನಕ್ಕೆ ತೆರಳದಂತೆ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾಪಂತ್ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ ಆರ್‍ಎಸ್‍ಎಸ್ ಪ್ರಮುಖರೊಂದಿಗೆ ಮಾತುಕತೆ ನಡೆಸಿ ಪಥ ಸಂಚಲನ ಹಿಂಪಡೆಯುವಂತೆ ಮನವಿ ಮಾಡಿದ್ದರೂ ಸಹ ಇದಕ್ಕೆ ಜಗ್ಗದ ಕಾರ್ಯಕರ್ತರು ಪಥ ಸಂಚಲನಕ್ಕೆ ಮುಂದಾಗಿದ್ದರು.

ನಮ್ಮ ಜೀವ ಹೋದರೂ ಸರಿ ಪಥ ಸಂಚಲನ ಮಾಡಿಯೇ ತೀರುತ್ತೇವೆ ಎಂದು ಹೊರಟಿರುವ ಆರ್.ಎಸ್.ಎಸ್. ಕಾರ್ಯಕರ್ತರು ಹಿರಿಯರೊಂದಿಗೆ ಮತೊಂದು ಸುತ್ತಿನ ಸಭೈನಡೆಸಿದರು.ಈ ವೇಳೆ ಸ್ಥಳಕ್ಕೆ ಕೇಂದ್ರ ವಲಯ ಐಜಿಪಿ ಸೀಮಂತ್‍ಕುಮಾರ್ ಸಿಂಗ್ ಭೇಟಿ ನೀಡಿ ಮಾತುಕತೆ ನಡೆಸಿ ಮಾ.11 ಕ್ಕೆ ಅವಕಾಶ ನೀಡಿದ ಹಿನ್ನಲೆಯಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತರು ಇದಕ್ಕೆ ಒಪ್ಪಿ ಪಥ ಸಂಚಲನ ಮುಂದೂಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin