ಆರ್.ಆರ್. ನಗರ ಚುನಾವಣೆ, ಮತದಾನ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

RR-Nagara-Rajarajeshwari-Na

ಬೆಂಗಳೂರು. ಮೇ. 28 : ವೋಟರ್ ಐಡಿ ಅಕ್ರಮ ಸಂಗ್ರಹ ಆರೋಪದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಆರ್ ಆರ್ ನಗರ ಚುನಾವಣೆ ಇಂದು ನಡೆಯುತ್ತಿದ್ದು ಬೆಳಿಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದೆ. ಬೆಳಿಗ್ಗೆಯಿಂದಲೇ ಸಾಲುಗಟ್ಟಿ ನಿಂತು ಜನ ಮತಹಾಕುತ್ತಿದ್ದಾರೆ. ಕಾಂಗ್ರೆಸ್ ನಿಂದ ಮುನಿರತ್ನ, ಜೆಡಿಎಸ್‌ನಿಂದ ಜಿ.ಎಚ್.ರಾಮಚಂದ್ರ ಮತ್ತು ಬಿಜೆಪಿಯ ಪಿ. ಮುನಿರಾಜು ಗೌಡ ಕಣದಲ್ಲಿದ್ದಾರೆ.

ಆರ್‍ಆರ್ ನಗರ ಚುನಾವಣೆ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿರುವುದರಿಂದ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಕೇಸರಿ ಪಡೆಯ ಹೆಡೆಮುರಿ ಕಟ್ಟಲು ತೀರ್ಮಾನಿಸಿದ್ದವು. ಆದರೆ, ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಹಾಗೂ ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಅವರು ಕಣದಿಂದ ಹಿಂದೆ ಸರಿಯಲು ಸಮ್ಮತಿಸದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಅನಿವಾರ್ಯವಾಗಿದೆ. ಈ ಚುನಾವಣೆ ಮೈತ್ರಿ ಸರ್ಕಾರದ ಮೊದಲ ‘ಅಗ್ನಿ ಪರೀಕ್ಷೆ’ ಎಂದೇ ಪಪರಿಗಣಿಸಲಾಗುತ್ತಿದೆ.

ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ನಡೆಯುತ್ತಿರುವ ಈ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ತಮ್ಮ ಪಕ್ಷದ ಬಗ್ಗೆ ಮತದಾರರಲ್ಲಿ ಒಲವಿದೆ ಎನ್ನುವುದನ್ನು ಸಾಬೀತುಪಡಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ. ರಾಮಚಂದ್ರ ಅವರ ಪರ ಇಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಪ್ರಜ್ವಲ್ ರೇವಣ್ಣ ಮತ್ತಿತರ ಜೆಡಿಎಸ್ ಮುಖಂಡರು ಮತ ಯಾಚಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮುನಿರತ್ನ ಅವರು ಎರಡನೆ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದು, ಅವರನ್ನು ಗೆಲ್ಲಿಸಿಕೊಳ್ಳಲು ಡಿಸಿಎಂ ಡಾ.ಜಿ.ಪರಮೇಶ್ವರ್ ಹಾಗೂ ಸಂಸದ ಡಿ.ಕೆ.ಸುರೇಶ್ ಪಣ ತೊಟ್ಟಿದ್ದಾರೆ. ಹೀಗಾಗಿ ಈ ಚುನಾವಣೆ ಭಾರೀ ಕುತೂಹಲ ಕೆರಳಿಸಿದ್ದು, 31ರಂದು ನಡೆಯಲಿರುವ ಮತ ಎಣಿಕೆಯಲ್ಲಿ ಮೂರೂ ಪಕ್ಷಗಳ ಅಭ್ಯರ್ಥಿಗಳ ಹಣೆಬರಹ ಪ್ರಕಟವಾಗಲಿದೆ.

ಬಿಗಿ ಪೊಲೀಸ್ ಬಂದೋಬಸ್ತ್:
ಚುನಾವಣೆಗೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು ಇಬ್ಬರು ಡಿಸಿಪಿ, 12 ಎಸಿಪಿ, 14 ಇನ್ಸ್‍ಪೆಕ್ಟರ್, 26 ಸಬ್‍ಇನ್ಸ್‍ಪೆಕ್ಟರ್ ಸೇರಿದಂತೆ 880 ಸಿವಿಲ್ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇದರ ಜತೆಗೆ 15 ಕೆಎಸ್‍ಆರ್‍ಪಿ, ಸಿಎಆರ್ ತುಕಡಿ ಹಾಗೂ 10 ಅರೆಸೇನಾ ಪಡೆಗಳನ್ನು ನಿಯೋಜನೆ ಮಾಡಲಾಗಿದೆ.

Facebook Comments

Sri Raghav

Admin