ಆರ್ ಆರ್ ನಗರ ಚುನಾವಣೆ ಮುಂದೂಡಿದರೆ ಒಳ್ಳೆಯದು : ಎಚ್‍ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy--02
ಬಾದಾಮಿ, ಮೇ 9-ಬೆಂಗಳೂರು ನಗರ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಮುಂದೂಡಿದರೆ ಒಳ್ಳೆಯದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಗುಳೇದಗುಡ್ಡದಲ್ಲಿ ಸುದ್ದಿಗರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷ ಎಲ್ಲೆಲ್ಲಿ ಪ್ರಬಲವಾಗಿದೆಯೋ ಅಂತಹ ಕಡೆಗಳಲ್ಲಿ ಮತದಾರರ ಗುರುತಿನ ಚೀಟಿಯನ್ನು ಸಂಗ್ರಹಿಸುವಂತಹ ಚುನಾವಣಾ ಅಕ್ರಮ ನಡೆಯುತ್ತಿದೆ. ಇದು ಕೇವಲ ರಾಜರಾಜೇಶ್ವರಿ ನಗರಕ್ಕೆ ಸೀಮಿತವಾಗಿಲ್ಲ ಎಂದು ಆರೋಪಿಸಿದ್ದಾರೆ.

ಮೈಸೂರು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಪಕ್ಷದ ಪರ ಇರುವ ಗ್ರಾಮದ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಡಿಲಿಟ್ ಮಾಡಲಾಗಿದ್ದು, ಸುಮಾರು 10 ಸಾವಿರಕ್ಕೂ ಹೆಚ್ಚುಮತದಾರರ ಹೆಸರನ್ನು ಡಿಲಿಟ್ ಮಾಡಲಾಗಿದೆ. ಕಾಂಗ್ರೆಸ್ ಕುತಂತ್ರ ರಾಜಕಾರಣ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಚುನಾವಣೆ ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ದೂರು ನೀಡಿದರೂ ಪ್ರಯೋಜನವಿಲ್ಲ. ಚುನಾವಣಾ ಆಯೋಗ ನಿಷ್ಪಕ್ಷಪಾತ ಚುನಾವಣೆ ನಡೆಸುವ ನಿರೀಕ್ಷೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಜನಾದೇಶ ನೀಡುವವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಲ್ಲ, ರಾಜ್ಯದ ಜನರೇ ಈ ಚುನಾವಣೆಯಲ್ಲಿ ತೀರ್ಪು ನೀಡಬೇಕು. ಹೀಗಾಗಿ ಚುನಾವಣಾ ಫಲಿತಾಂಶದವರೆಗೂ ಕಾದು ನೋಡೋಣ. ಆಗ ಯಾರ್ಯಾರಿಗೆ ಎಷ್ಟು ಸ್ಥಾನಗಳು ದೊರೆಯುತ್ತವೆ ಎಂದು ಗೊತ್ತಾಗಲಿದೆ.

ದೊಡ್ಡ ಮಟ್ಟದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ನಡೆಯುತ್ತಿದ್ದು, ನಿರೀಕ್ಷೆಗೆ ತಕ್ಕಂತೆ ದೊಡ್ಡ ಪ್ರಮಾಣದಲ್ಲಿ ಹಣ ಸಿಗುತ್ತಿಲ್ಲ. ಕೇವಲ ನೆಪಮಾತ್ರಕ್ಕೆ ಐಟಿ ದಾಳಿ ನಡೆಯುತ್ತಿದೆ ಎಂದು ಟೀಕಿಸಿದರು.

Facebook Comments

Sri Raghav

Admin