ಆರ್.ಆರ್.ನಗರ ಚುನಾವಣೆ : ವಿಡಿಯೋ ಚಿತ್ರೀಕರಣ ಕಡ್ಡಾಯಕ್ಕೆ ಬಿಜೆಪಿ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

Vote--0011
ಬೆಂಗಳೂರು,ಮೇ 24- ಇದೇ 28ರಂದು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆ ವೇಳೆ ಕ್ಷೇತ್ರದಲ್ಲಿರುವ ಎಲ್ಲ ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆ ಎಂದು ಘೋಷಿಸಿ ವಿಡಿಯೋ ಚಿತ್ರೀಕರಣ ಕಡ್ಡಾಯಗೊಳಿಸಬೇಕೆಂದು ಬಿಜೆಪಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.  ಈ ಸಂಬಂಧ ಇಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರನ್ನು ಭೇಟಿ ಮಾಡಿದ ಶಾಸಕ ಸಿ.ಟಿ.ರವಿ ನೇತೃತ್ವದ ನಿಯೋಗ ಕ್ಷೇತ್ರದಲ್ಲಿರುವ ಎಲ್ಲ ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆ ಎಂದು ಘೋಷಿಸಿ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಮನವಿ ಮಾಡಿದ್ದಾರೆ.

ಈ ಹಿಂದೆ ಖಾಸಗಿ ಫ್ಲಾಟ್‍ನಲ್ಲಿ ಸಿಕ್ಕಿಬಿದ್ದ ಗುರುತಿನ ಚೀಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದರಲ್ಲಿ ಭಾಗಿಯಾದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ. ಸೋಮವಾರ ನಡೆಯಲಿರುವ ಮತದಾನದ ಸಂದರ್ಭದಲ್ಲಿ ಕ್ಷೇತ್ರದ ಹೊರಗಿನಿಂದ ಜನರನ್ನು ಕರೆತಂದು ಮತದಾನ ನಡೆಸಲು ಕಾಂಗ್ರೆಸ್ ಮುಂದಾಗಿದೆ. ಇದಕ್ಕೆ ಜೆಡಿಎಸ್ ಕೂಡ ಬೆಂಬಲ ನೀಡಿದೆ. ಕ್ಷೇತ್ರದಲ್ಲಿ ಮತದಾನದ ಹಕ್ಕು ಹೊಂದಿಲ್ಲದವರು ಅಂದು ಕ್ಷೇತ್ರ ಬಿಟ್ಟು ಹೊರಹೋಗುವಂತೆ ನಿರ್ದೇಶನ ನೀಡುವಂತೆ ಕೋರಲಾಗಿದೆ. ಚುನಾವಣೆಯನ್ನು ನಿರ್ವಹಣೆ ಮಾಡಲು ಸ್ಥಳೀಯ ಅಧಿಕಾರಿಗಳನ್ನು ನಿಯೋಜಿಸಬಾರದು. ಕೆಲವು ಅಧಿಕಾರಿಗಳು ಅನ್ಯ ಪಕ್ಷಗಳ ರಾಜಕೀಯ ಮುಖಂಡರ ಜೊತೆ ಶಾಮೀಲಾಗಿರುವುದು ಕಂಡುಬಂದಿದೆ. ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ನಡೆಯಬೇಕಾದರೆ ಹೊರಗಿನ ಅಧಿಕಾರಿಗಳನ್ನು ನಿಯೋಜಿಸುವಂತೆ ಕೋರಿದೆ.

ಗುರುತಿನ ಚೀಟಿ ಪತ್ತೆಯಾದ ಪ್ರಕರಣದಲ್ಲಿ ಬಿಬಿಎಂಪಿ, ನಗರ ಪಾಲಿಕೆ ಸೇರಿದಂತೆ ಮತ್ತಿತರ ಇಲಾಖೆ ಅಧಿಕಾರಿಗಳು ಶಾಮೀಲಾಗಿರುವುದು ಕಂಡುಬಂದಿದೆ. ಪಾರದರ್ಶಕ ಮತದಾನ ನಡೆಯಬೇಕಿದ್ದರೆ ಹೊರಗಿನ ಅಧಿಕಾರಿಗಳನ್ನೇ ನಿಯೋಜಿಸಬೇಕು. ಕ್ಷೇತ್ರದಲ್ಲಿ ನಡೆಯತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದರು.  ಈ ಬಗ್ಗೆ ತನಿಖೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಸಂಜೀವ್‍ಕುಮಾರ್ ನೀಡಿದ್ದಾರೆ.  ನಿಯೋಗದಲ್ಲಿ ಪಕ್ಷದ ವಕ್ತಾರರಾದ ಅಶ್ವಥ್ ನಾರಾಯಣ, ಸಹ ವಕ್ತಾರ ಎಸ್.ಪ್ರಕಾಶ್, ಮಾಜಿ ಉಪಮೇಯರ್ ಎಸ್ ಹರೀಶ್ ಸೇರಿದಂತೆ ಮುಂತಾದವರು ಇದ್ದರು.

Facebook Comments

Sri Raghav

Admin