ಆರ್.ಟಿ.ನಗರದ ವ್ಯಕ್ತಿ ಕಿಡ್ನಾಪ್, ಗೌರಿಬಿದನೂರಲ್ಲಿ ಮರ್ಡರ್

ಈ ಸುದ್ದಿಯನ್ನು ಶೇರ್ ಮಾಡಿ

Crime--01

ಬೆಂಗಳೂರು, ಅ.10- ಕುರಿಗಳನ್ನು ಮಾರಿದ ಹಣಕಾಸಿನ ವಿಚಾರದಲ್ಲಿ ವೈಷಮ್ಯ ಉಂಟಾಗಿ ಆರ್.ಟಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೆ.ಸಿ.ನಗರದ ಯುವಕ ಹಾಗೂ ಆತನ ಇಬ್ಬರು ಸ್ನೇಹಿತರನ್ನು ಕಿಡ್ನ್ಯಾಪ್ ಮಾಡಿದ ಗುಂಪು ಯುವಕನನ್ನು ಕೊಲೆ ಮಾಡಿರುವ ಘಟನೆ ಗೌರಿಬಿದನೂರು ಪಟ್ಟಣದ ಸಮೀಪದಲ್ಲಿನ ಚಿಗಟಗೆರೆ ಗ್ರಾಮದ ಹೊರವಲಯದಲ್ಲಿ ಇಂದು ಮುಂಜಾನೆ ಜರುಗಿದೆ. ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೆ.ಸಿ.ನಗರದ ನಿವಾಸಿ ನೂರ್ ಅಹಮ್ಮದ್(27) ಕೊಲೆಯಾದ ವ್ಯಕ್ತಿಯಾಗಿದ್ದಾನೆ.

ಈತನ ಸ್ನೇಹಿತರಾದ ಮುಬಾಷೀರ್ (35), ಖುಲೇಕ್(32) ಗಂಭೀರವಾಗಿ ಹಲ್ಲೆಗೊಳಗಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಮುಬಾಷೀರ್ ಸ್ಥಿತಿ ಚಿಂತಾಜನಕವಾಗಿದೆ. ಘಟನೆಗೆ ಸಂಬಂಧಿಸಿದಂತೆ 21 ಮಂದಿ ಆರೋಪಿಗಳನ್ನು ಗೌರಿಬಿದನೂರು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ: ಗೌರಿಬಿದನೂರು ತಾಲೂಕಿನ ಕೆಳಗಿನ ಕುರುಬರ ಹಳ್ಳಿ ಗ್ರಾಮದ ವಾಸಿ ನವೀನ್ ಕುಮಾರ್ ಎಂಬುವರಿಗೆ ಸೇರಿದ ಚೀಗಟಗೆರೆ ಗ್ರಾಮದ ಹೊರವಲದಲ್ಲಿರುವ ಫಾರಂ ಹೌಸ್‍ನ್ನು ಬೆಂಗಳೂರಿನ ವಾಸಿ ಆಶ್ರಫ್ ಎಂಬುವವರಿಗೆ ಲೀಸ್‍ಗೆ ನೀಡಿದ್ದರು.

ಆಶ್ರಫ್ ಎಂಬುವವರು ಬೆಂಗಳೂರು ವಾಸಿ ಜುನೇದ್ ಅಹಮದ್ ಬಿನ್ ಅಬ್ದುಲ್ ಬಷೀರ್ ಎಂಬುವರಿಗೆ ಸಬ್ ಲೀಸ್‍ಗೆ ನೀಡಿದ್ದ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಜುನೇದ್ ಅಹಮದ್ ಕುರಿ ವ್ಯಾಪಾರದ ಜತೆಗೆ ಬೆಂಗಳೂರಿನಲ್ಲಿ ಟ್ರಾವೆಲ್ ನಡೆಸುತ್ತಿದ್ದು, ಇತ್ತೀಚೆಗೆ ಜುನೇದ್ ಅಹಮದ್ ಬೆಂಗಳೂರಿನ ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೆ.ಸಿ.ನಗರದ ನೂರ್ ಅಹಮದ್ ಎಂಬುವವರಿಂದ ಕುರಿಗಳನ್ನು ಪಡೆದಿದ್ದು ಇದರ ಹಣ ನೀಡಬೇಕಾಗಿತ್ತು.

ಜುನೇದ್ ಅಹಮದ್ ಹಣವನ್ನು ನೀಡದೆ ಸತಾಯಿಸುತ್ತಿದ್ದಾಗ ನೂರ್ ಅಹಮದ್ ತನ್ನ ಸಹಚರರಾದ ಬೆಂಗಳೂರಿನ ಚಾಮರಾಜಪೇಟೆ ವಾಸಿಗಳಾದ ಮುಬಾಶೀರ್, ಖುಲೇಕ್ ಎಂಬುವವರೊಂದಿಗೆ ಹೋಗಿ ಜುನೇದ್ ಅಹಮದ್ ಅವರ ಎರಡು ವಾಹನಗಳನ್ನು ತೆಗೆದುಕೊಂಡು ಬಂದಿದ್ದನು. ಮೂರು ದಿನಗಳ ಹಿಂದೆ ಜುನೇದ್ ಅಹಮದ್ ರವರ ಮನೆಗೆ ನೂರ್ ಅಹಮದ್ ಮತ್ತು ಮುಭಾಶೀರ್, ಖುಲೇಕ್ ಹೋಗಿ ಗಲಾಟೆ ಮಾಡಿದ್ದನು.  ಇದೇ ದ್ವೇಷದ ಹಿನ್ನೆಲೆಯಲ್ಲಿ ಜುನೇದ್ ಅಹಮದ್ ತನ್ನ ಸಹಚರರೊಂದಿಗೆ ಸಂಚು ರೂಪಿಸಿ ಅ.9 ರಂದು ಐದಾರು ವಾಹನಗಳನ್ನು ಬಾಡಿಗೆಗೆ ಪಡೆದು ಸುಮಾರು 21 ಮಂದಿ ಹುಡುಗರೊಂದಿಗೆ ಬೆಂಗಳೂರಿನ ಜೆ.ಸಿ.ನಗರದ ವ್ಯಾಪ್ತಿಯಲ್ಲಿ ಹೊಂಚು ಹಾಕಿ ಹಣವನ್ನು ಕೊಡುವುದಾಗಿ ನೂರು ಅಹಮದ್ ರವರಿಗೆ ದೂರವಾಣಿ ಮೂಲಕ ತಿಳಿಸಿದ್ದಾನೆ.

ಈತನ ಮಾತನ್ನು ನಂಬಿದ ನೂರ್ ಅಹಮ್ಮದ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಹೇಳಿದ ಜಾಗಕ್ಕೆ ಹೋಗುತ್ತಿದ್ದಂತೆ ಸಹಚರರೊಂದಿಗೆ ಸೇರಿಕೊಂಡು ಈ ಮೂವರನ್ನು ಕಿಡ್ಯ್ನಾಪ್ ಮಾಡಿಕೊಂಡು ಗೌರಿಬಿದನೂರು ಪಟ್ಟಣದ ಸಮೀಪದ ಚೀಗಟಗೆರೆಯ ಹೊರವಲಯದ ಜುನೈದ್ ಅಹಮದ್‍ಗೆ ಸೇರಿದ ಫಾರಂ ಹೌಸ್‍ಗೆ ಕರೆತಂದು ಲಾಂಗ್ ಮತ್ತು ಮಚ್ಚುಗಳಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಸ್ಥಳದಲ್ಲೇ ನೂರ್‍ಅಹಮದ್ ಸಾವನ್ನಪ್ಪಿದ್ದು, ಸಹಚರರಾದ ಮುಬಾಷೀರ್ ಮತ್ತು ಖುಲೇಕ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇತ್ತ ಮಗ ತಡರಾತ್ರಿಯಾದರೂ ಮನೆಗೆ ಬಾರದಿರುವುದನ್ನು ಕಂಡು ನೂರ್ ಅಹಮ್ಮದ್ ತಂದೆ ಆರ್.ಟಿ.ನಗರ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಾಗ ನೂರ್ ಅಹಮದ್ ಮತ್ತು ಸಹಚರರನ್ನು ಕಿಡ್ನಾಪ್ ಮಾಡಿರುವ ಬಗ್ಗೆ ಮಾಹಿತಿಯನ್ನು ಕಲೆಹಾಕಿದ ಬೆಂಗಳೂರು ಪೊಲೀಸರು ಬಾಡಿಗೆ ಸ್ಕಾಪ್ರಿಯೋ ವಾಹನಗಳ ಜಿಪಿಎಸ್ ಲೊಕೇಶ್ ಆಧಾರದ ಮೇಲೆ ಗೌರಿಬಿದನೂರು ಪಕ್ಕದ ಚೀಗಟಗೆರೆಯಲ್ಲಿರುವ ಬಗ್ಗೆ ಗೌರಿಬಿದನೂರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.  ತಕ್ಷಣ ಕಾರ್ಯಪ್ರವೃತ್ತರಾದ ಗೌರಿಬಿದನೂರು ವೃತ್ತ ನಿರೀಕ್ಷ ಅಮರನಾರಾಯಣ್, ಎಸೈ ಅವಿನಾಶ್, ಮತ್ತು ಸಿಬ್ಬಂದಿ ಕ್ಷಣಾರ್ಧದಲ್ಲಿ ಸ್ಥಳವನ್ನು ಪತ್ತ ಮಾಡಿ ಫಾರಂ ಹೌಸ್ ಮುಂದೆ ಜಮಾವಣೆ ಗೊಂಡು ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಗಳನ್ನು ಬಂದಿಸಿದ್ದಾರೆ.

ಟಾರ್ಚರ್:

ರೌಡಿಶೀಟ್‍ರ್‍ಗಳು ತಮ್ಮ ಮೇಲೆ ವಿನಾಕಾರಣ ದೌಜನ್ಯ ಮಾಡಿ ಹಪ್ತ ವಸೂಲಾಗಿ ಮಾಡುತ್ತಿದ್ದು, ಜತೆಗೆ ನಮ್ಮ ಮನೆಗಳಿಗೆ ಬಂದು ನಮ್ಮ ಹೆಣ್ಣು ಮಕ್ಕಳ ಮೇಲೆ ಅಸಭ್ಯವಾಗಿ ವರ್ತಿಸುತ್ತಿದ್ದು, ಇದನ್ನು ಪ್ರಶ್ನಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು ಇದರಿಂದ ಬೇಸತ್ತು ಇವರಿಗೆ ಒಂದು ಗತಿಯನ್ನು ಕಾಣಿಸುವ ಸಲುವಾಗಿ ಈ ಕೊಲೆಯನ್ನು ಮಾಡಿರುವುದಾಗಿ 21 ಮಂದಿ ಯುವಕರು ಪೊಲೀಸರಿಗೆ ವಿಚಾರಣೆಯ ವೇಳೆ ತಿಳಿಸಿದ್ದಾರೆ.

ಬಂದಿತ ಆರೋಪಿಗಳು: ಜೆ.ಸಿ.ನಗರದ ವಾಸಿಗಳಾದ ಜುನೈದ್ ಅಹಮದ್,ಪೈಜಾನ್, ಅಹಮದ್, ಪಾಷಾ, ಪೈಸಲ್ ಸುಲ್ತಾನ್, ಮಾಸಿನ್, ಜಾಹಿರ್, ಮೋಹನ್, ಅಪ್ಸ್‍ರ್, ಬಿಲಾಲ್,, ಶಿವಾಜಿನಗರ ವಾಸಿಗಳಾದ ಉಸ್ಮಾನ್,ವಿಕ್ರಮ್,ಬಿಲಾಲ್, ಭೂಪಸಂದ್ರದ ಜಯಾಯನ್,ಉಮರ್, ಜವಾದ್, ಆರ್.ಟಿ.ನಗರದ ಹರ್ಷದ್, ಸೋನು, ಗೋವಿಂದಪುರದ ಮಹಮದ್ ಸೈಪ್,ಸುಹೇಲ್ ಖಾನ್, ರವರುಗಳು ಬಂದಿತ ಆರೋಪಿಗಳು, ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ತನಿಕೆ ಮುಂದುವರಿಸಿದ್ದಾರೆ, ಸ್ಥಳಕ್ಕೆ ಎಸ್ಪಿ ಕಾರ್ತೀಕ್‍ರೆಡ್ಡಿ ಡಿವೈಎಸ್ಪಿ ಬೇಟಿ ನೀಡಿ ಪರಿಶೀಲನೆ ನಡೆಸಿದರು.

Facebook Comments

Sri Raghav

Admin