ಆಲಮಟ್ಟಿ-ಚಿತ್ರದುರ್ಗ ನೂತನ ರೈಲು ಮಾರ್ಗಕ್ಕೆ ಕೇಂದ್ರ ಒಪ್ಪಿಗೆ

ಈ ಸುದ್ದಿಯನ್ನು ಶೇರ್ ಮಾಡಿ

Train-mYsuru

ಚಿತ್ರದುರ್ಗ, ಮಾ.10- ಆಲಮಟ್ಟಿಯಿಂದ ಚಿತ್ರದುರ್ಗದವರೆಗೆ ಹೊಸ ರೈಲು ಮಾರ್ಗ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಸರ್ವೆ ಕಾರ್ಯಕ್ಕಾಗಿ 1.32 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ ಎಂದು ಸಂಸದ ಕರಡಿ ಸಂಗಣ್ಣ ತಿಳಿಸಿದ್ದಾರೆ. ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಕೇಂದ್ರ ಸರ್ಕಾರ ಹೊಸ ಮಾರ್ಗ ಮಂಜೂರು ಮಾಡಿದ್ದು, ಸೊಲ್ಲಾಪುರ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಹೊಸಪೇಟೆ ಜನರಿಗೆ ಈ ರೈಲು ಮಾರ್ಗದಿಂದ ಅನುಕೂಲವಾಗಲಿದೆ ಎಂದರು.

ಈ ರೈಲು ಮಾರ್ಗದಿಂದ ವಾಣಿಜ್ಯ, ಕೈಗಾರಿಕೆ ಮತ್ತು ಪ್ರವಾಸೋದ್ಯಮದ ಅಭಿವೃದ್ಧಿಗೂ ಸಹಾಯಕವಾಗಲಿದೆ. ಪ್ರಸ್ತುತ ಇರುವ ಗುಂಟಕಲ್ ಮತ್ತು ಹುಬ್ಬಳ್ಳಿ ಮೂಲಕ ಇರುವ ಮಾರ್ಗಕ್ಕಿಂತ 170 ಕಿ.ಮೀ. ಅಂತರ ಹೊಸ ಮಾರ್ಗದಿಂದ ಕಡಿಮೆಯಾಗಲಿದೆ. ಇದರಿಂದಾಗಿ ಸುಮಾರು 2.30 ಗಂಟೆಗಳ ಕಾಲದ ಪ್ರವಾಸದ ಅವಧಿಯೂ ಕಡಿಮೆಯಾಗಿ ಜನರಿಗೆ ಅನುಕೂಲವಾಗಲಿದೆ. ಹೊಸ ಮಾರ್ಗಕ್ಕೆ ಒಪ್ಪಿಗೆ ನೀಡಿದ ರೈಲ್ವೆ ಇಲಾಖೆ, ಇಲಾಖೆಯ ಅಧಿಕಾರಿಗಳಿಗೆ ಸಂಸದರು ಅಭಿನಂದನೆ ಸಲ್ಲಿಸಿದರು. ಆಲಮಟ್ಟಿ-ಚಿತ್ರದುರ್ಗ ಈ ಹೊಸ ರೈಲು ಮಾರ್ಗ ಕೂಡಲಸಂಗಮ, ಹುನಗುಂದಾ, ಇಲಕಲ್, ಕುಷ್ಟಗಿ, ಕುಕನಪಳ್ಳಿ, ಹಿಟ್ನಾಳ, ಟಿ.ಬಿ. ಡ್ಯಾಂ ಮತ್ತು ಕೂಡ್ಲಿಗಿ ಮೂಲಕ ಹಾದು ಹೋಗಲಿದೆ.

Facebook Comments

Sri Raghav

Admin