ಆಶ್ಚರ್ಯವೆನಿಸಿದರೂ ಇದು ಸತ್ಯ : ರಾಜ್ ಸ್ಮಾರಕ ಜಾಗಕ್ಕೆ ಇನ್ನೂ ಹಣ ಕೊಟ್ಟಿಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

Raj--01

ಬೆಂಗಳೂರು, ನ.20- ಇದು ಆಶ್ಚರ್ಯ ವೆನಿಸಿದರೂ ಸತ್ಯ. ವರನಟ ಡಾ.ರಾಜ್‍ಕುಮಾರ್ ಸ್ಮಾರಕ ನಿರ್ಮಾಣಕ್ಕೆಂದು ಸರ್ಕಾರ ಕಂಠೀರವ ಸ್ಟುಡಿಯೋದಿಂದ ತೆಗೆದು ಕೊಂಡ ಎರಡೂವರೆ ಎಕರೆ ಜಾಗಕ್ಕೆ ಇನ್ನೂ ಹಣ ನೀಡಿಲ್ಲ. ಈ ಸಂಬಂಧ ಕಂಠೀರವ ಸ್ಟುಡಿಯೋದ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ್ ಸರ್ಕಾರದ ವಿರುದ್ಧ ಆಪಾದನೆ ಮಾಡಿದ್ದಾರೆ. ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಇನ್ನೂ ಜಾಗ ನೀಡಲು ಸಾಧ್ಯವಾಗಿಲ್ಲ. ವಿಷ್ಣು ಸ್ಮಾರಕ ನಿರ್ಮಾಣ ಈವರೆಗೂ ಆಗಿಲ್ಲ. ರಾಜ್ ಸ್ಮಾರಕ ನಿರ್ಮಾಣವಾಗಿದ್ದರೂ ಅದಕ್ಕಾಗಿ ನೀಡಿದ ಜಾಗಕ್ಕೆ ಹಣ ಪಾವತಿ ಆಗಿಲ್ಲದಿರುವುದು ವಿಪರ್ಯಾಸ ಸಂಗತಿ.

ಕಳೆದ 12 ವರ್ಷಗಳ ಹಿಂದೆ ಕಂಠೀರವ ಸ್ಟುಡಿಯೋದ 17.5 ಎಕರೆ ಜಾಗದಲ್ಲಿ ಎರಡೂವರೆ ಎಕರೆ ಜಾಗವನ್ನು ಡಾ.ರಾಜ್ ಸ್ಮಾರಕಕ್ಕೆ ನೀಡಲಾಯಿತು. ಈ ವೇಳೆ ಆ ಜಾಗಕ್ಕೆ ಹಣ ನೀಡುವುದಾಗಿ ಸರ್ಕಾರ ಹೇಳಿತ್ತು. ಅಂದಿನಿಂದ ಬಾಕಿ ಉಳಿಸಿಕೊಂಡಿರುವ ಹಣದ ಮೊತ್ತ ಇಂದು ಬರೋಬ್ಬರಿ 16 ಕೋಟಿಗೆ ಏರಿದೆ ಎಂದು ಮೀನಾಕ್ಷಿ ಸಂಗ್ರಾಮ್ ಆರೋಪಿಸಿದ್ದಾರೆ. ಕಂಠೀರವ ಸ್ಟುಡಿಯೋ ಕೂಡ ನಷ್ಟದಲ್ಲಿ ನಡೆಯುತ್ತಿದ್ದು, ಬಾಕಿ ಉಳಿಸಿಕೊಂಡ ಇಷ್ಟು ಪ್ರಮಾಣದ ಹಣವನ್ನು ವಾಪಸ್ ನೀಡಿದರೆ ಸ್ಟುಡಿಯೋದ ಆರ್ಥಿಕತೆ ಸುಧಾರಣೆಯಾಗಲಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.

ಇಷ್ಟು ದೊಡ್ಡ ಪ್ರಮಾಣದ ಹಣವನ್ನು ಬಾಕಿ ಉಳಿಸಿಕೊಳ್ಳುವ ಮೂಲಕ ಸರ್ಕಾರ ರಾಜ್‍ಕುಮಾರ್ ಅವರ ಹೆಸರಿಗೆ ಧಕ್ಕೆ ತರುವ ಪ್ರಯತ್ನ ಮಾಡಿದೆ ಎನ್ನುವ ಆರೋಪ ಡಾ.ರಾಜ್ ಅಭಿಮಾನಿಗಳಿಂದ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಮೀನಾಕ್ಷಿ ಸಂಗ್ರಾಮ್ ತಿಳಿಸಿದ್ದಾರೆ.

Facebook Comments

Sri Raghav

Admin