ಆಷಾಢದ ನಂತರ ಸಂಪುಟ ವಿಸ್ತರಣೆ ಮಾಡದಿದ್ದರೆ ಬಿಜೆಪಿ ಕಡೆ ನಮ್ಮ ನಡೆ

ಈ ಸುದ್ದಿಯನ್ನು ಶೇರ್ ಮಾಡಿ

Congress-To-BJP--01

ಬೆಂಗಳೂರು, ಆ.9- ಆಷಾಢ ಮುಗಿದ ಕೂಡಲೇ ಸಚಿವ ಸಂಪುಟ ವಿಸ್ತರಣೆ ಮಾಡದಿದ್ದರೆ ಬಿಜೆಪಿ ಕಡೆ ನಮ್ಮ ನಡೆ ಎಂದು ಸುಮಾರು 10ರಿಂದ 15 ಕಾಂಗ್ರೆಸ್ ಶಾಸಕರು ಸ್ಪಷ್ಟ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ತಳಮಳ ಆರಂಭಗೊಂಡಿದೆ. ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾದರೆ ಕಾಂಗ್ರೆಸ್ ಆಪರೇಷನ್ ಹಸ್ತ ನಡೆಸಲು ಸಜ್ಜಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೈಲೆಂಟ್ ಆಪರೇಷನ್‍ನಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಾರೆ ರಾಜಕೀಯ ಚಟುವಟಿಕೆಗಳು ಮತ್ತೆ ಬಿರುಸುಪಡೆದುಕೊಂಡಿವೆ.

ಕಾಂಗ್ರೆಸ್‍ನ ಸಚಿವಾಕಾಂಕ್ಷಿಗಳು ಕಳೆದೊಂದು ವಾರದಿಂದ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಎಡೆಮಾಡಿದೆ.

ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್‍ನ ಎಂ.ಬಿ.ಪಾಟೀಲ್ ಹಾಗೂ ಬಿ.ಎಸ್.ಯಡಿಯೂರಪ್ಪ ಅವರು ಒಂದೇ ವಿಮಾನದಲ್ಲಿ ದೆಹಲಿಗೆ ಹೋಗಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ. ದೆಹಲಿಯಲ್ಲಿ ಬೀಡುಬಿಟ್ಟಿರುವ ಸಚಿವಾಕಾಂಕ್ಷಿ ಕಾಂಗ್ರೆಸ್ ಶಾಸಕರು, ಸಚಿವ ಸಂಪುಟ ವಿಸ್ತರಿಸಬೇಕು, ಇಲ್ಲದಿದ್ದರೆ ನಾವು ಪರ್ಯಾಯ ಮಾರ್ಗ ನೋಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.

ಇದರಿಂದ ಕಾಂಗ್ರೆಸ್‍ಗೆ ಆಪರೇಷನ್ ಕಮಲದ ಭೀತಿ ಎದುರಾಗಿದೆ. ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಮಾತನಾಡಿ, ಬಿಜೆಪಿ ನಾಯಕರು ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಯಾವ್ಯಾವ ಶಾಸಕರನ್ನು ಎಲ್ಲೆಲ್ಲಿ ಭೇಟಿಯಾಗಿ ಮಾತನಾಡಿದ್ದಾರೆ, ಏನೇನು ಆಮಿಷ ಒಡ್ಡಿದ್ದಾರೆ ಎಂಬುದು ನಮಗೆ ಗೊತ್ತಿದೆ. ಸದ್ಯದಲ್ಲೇ ಅವನ್ನು ಬಹಿರಂಗಪಡಿಸುತ್ತೇವೆ ಎಂದು ಹೇಳಿದ್ದಾರೆ.

ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿದರೆ ಮೈತ್ರಿ ಸರ್ಕಾರವನ್ನು ಮುಗಿಸಲು ತಂತ್ರ ಹೆಣೆದಂತಿದೆ. ರಾಜಕೀಯ ಸುನಾಮಿ ಸೃಷ್ಟಿಸಲು ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳಿ ಕಾಂಗ್ರೆಸ್‍ನಿಂದ ಅಸಮಾಧಾನಗೊಂಡು ಬಿಜೆಪಿ ಸೇರುವವರ ಪಟ್ಟಿಯನ್ನು ಹೈಕಮಾಂಡ್‍ಗೆ ಗೌಪ್ಯವಾಗಿ ನೀಡಿದ್ದಾರೆ ಎನ್ನಲಾಗಿದೆ. ಈ ಪಟ್ಟಿಯಲ್ಲಿ ಉತ್ತರ ಕರ್ನಾಟಕದ ಹಲವು ಶಾಸಕರು, ಲಿಂಗಾಯತ ಸಮುದಾಯದ ಶಾಸಕರು, ಸಂಪುಟ ವಂಚಿತರು ಸೇರಿದ್ದಾರೆ ಎಂದು ತಿಳಿದುಬಂದಿದೆ.

ಸರ್ಕಾರ ಅಸ್ಥಿರಗೊಳಿಸಿ ಹೊಸ ಸರ್ಕಾರ ರಚನೆಯಾದರೆ ಇವರಿಗೆ ಸಂಪುಟದಲ್ಲಿ ಸ್ಥಾನಮಾನ ನೀಡುವ ಭರವಸೆ ನೀಡಲಾಗಿದೆ. ಮಾತ್ರವಲ್ಲ ಅವರಿಂದ ರಾಜೀನಾಮೆ ನೀಡಿಸಿ, ಮತ್ತೆ ಗೆಲ್ಲಿಸಿಕೊಂಡು ಬರುವ ಭರವಸೆಯನ್ನೂ ಕೂಡ ಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ.ಲೋಕಸಭಾ ಚುನಾವಣೆಗೆ ಮುನ್ನವೇ ಈ ಕಾರ್ಯಾಚರಣೆ ನಡೆಸುವ ಬಗ್ಗೆಯೂ ಕೂಡ ಚರ್ಚೆ ನಡೆದಿದೆ ಎನ್ನಲಾಗಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಒಡಕಿನ ಲಾಭವನ್ನು ಪಡೆದು ಸರ್ಕಾರ ರಚನೆ ಮಾಡಲು ಬಿಜೆಪಿ ತಂತ್ರ ಹೆಣೆಯುತ್ತಿದೆ ಎಂದು ತಿಳಿದುಬಂದಿದೆ.

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡ ಪ್ರತಿತಂತ್ರ ರೂಪಿಸುತ್ತಿದೆ ಎನ್ನಲಾಗಿದೆ. ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಡಳಿತಾರೂಡ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸಾಧ್ಯವಾಗಿಲ್ಲ. ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಎಲ್ಲಾ ಸೀಟು ಹೊಂದಾಣಿಕೆ ಕಷ್ಟ ಸಾಧ್ಯ ಎಂದು ಹೇಳಲಾಗುತ್ತಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಸದ್ದಿಲ್ಲದೆ ಕಾರ್ಯಾಚರಣೆಗೆ ಇಳಿದಿದೆ ಎಂದು ತಿಳಿದುಬಂದಿದೆ.
ಆಷಾಢ ಮುಗಿದ ಕೂಡಲೇ ಸರ್ಕಾರ ಸಂಪುಟ ವಿಸ್ತರಣೆಗೆ ಮುಂದಾಗಬಹುದು, ಕೇವಲ ಆರು ಸ್ಥಾನಗಳನ್ನು ಭರ್ತಿ ಮಾಡುವ ಸಾಧ್ಯತೆ ಇದೆ. ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಇಲ್ಲೂ ಭಿನ್ನಮತ ಉಲ್ಭಣವಾಗುವುದು ಖಚಿತ. ಈ ಸಂಭಾವ್ಯ ಭಿನ್ನಮತ ತಪ್ಪಿಸಲು ಹೈಕಮಾಂಡ್ ಕಸರತ್ತು ನಡೆಸುತ್ತಿದೆ. ಒಂದು ಹಂತದಲ್ಲಿ ಸಂಪುಟ ವಿಸ್ತರಣೆ ಮುಂದೂಡುವುದೇ ಲೇಸು ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.

ಅತ್ತ ದೆಹಲಿಯಲ್ಲಿರುವ ಆಕಾಂಕ್ಷಿಗಳು ಲೋಕಸಭಾ ಚುನಾವಣೆವರೆಗೆ ಸಂಪುಟ ವಿಸ್ತರಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿ ಬಿಡಿ, ಸುಮ್ಮನೆ ನಾವು ಕಾಯುವುದು, ಪದೇ ಪದೇ ದೆಹಲಿಗೆ ಬರುವುದು ತಪ್ಪುತ್ತದೆ ಎಂದು ಹೈಕಮಾಂಡ್ ನಾಯಕರ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಂದ್ರಗ್ರಹಣ ಮುಗಿಯುವವರೆಗೆ ಯಾವ ಕೆಲಸ ಮಾಡುವುದಿಲ್ಲ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದರು. ಗ್ರಹಣ ಮುಗಿಯುತ್ತಿದ್ದಂತೆ ದೆಹಲಿಗೆ ತೆರಳಿ ಅಖಾಡಕ್ಕಿಳಿದ ಅವರು, ರಾಜಕೀಯ ದಾಳಗಳನ್ನು ಉರುಳಿಸಲು ಪ್ರಾರಂಭಿಸಿದ್ದಾರೆ. ಶ್ರಾವಣ ಮಾಸದಲ್ಲಿ ಕಾಂಗ್ರೆಸ್ ಶಾಸಕರು ಪಕ್ಷಕ್ಕೆ ಕೈಕೊಡುತ್ತಾರೆಯೇ ? ಆಪರೇಷನ ಕಮಲ ಯಶಸ್ವಿಯಾಗುತ್ತದೆಯೇ ? ಯಡಿಯೂರಪ್ಪ ಅವರ ಕೈ ಮೇಲಾಗುತ್ತದೆಯೋ ಮೈತ್ರಿ ಸರ್ಕಾರದ ಕೈ ಮೇಲಾಗುತ್ತದೆಯೋ ಎಂಬುದನ್ನು ಕಾದುನೋಡಬೇಕಾಗಿದೆ.

ಮೂರೂ ಪಕ್ಷಗಳು ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ಸಜ್ಜಾಗತೊಡಗಿವೆ. ಈ ಮಧ್ಯೆಯೇ ಆಪರೇಷನ ಕಮಲ, ಆಪರೇಷನ ಹಸ್ತ ಕಾರ್ಯಾಚರಣೆ ಮಾತುಗಳು ಕೇಳಿಬರುತ್ತಿವೆ. ಈ ಪರಿಸ್ಥಿತಿಯನ್ನು ಉಭಯ ಪಕ್ಷಗಳ ನಾಯಕರು ಯಾವ ರೀತಿ ನಿಭಾಯಿಸುತ್ತಾರೋ ಕಾದು ನೋಡಬೇಕಾಗಿದೆ.

Facebook Comments

Sri Raghav

Admin