ಆಷಾಢ ಏಕಾದಶಿ ಪ್ರಯುಕ್ತ ಪಂಢರಾಪುರದಲ್ಲಿ ಲಕ್ಷಾಂತರ ಭಕ್ತರ ವಿಶೇಷ ಪೂಜೆ

ಈ ಸುದ್ದಿಯನ್ನು ಶೇರ್ ಮಾಡಿ

Pandarapura--02

ಮುಂಬೈ, ಜು.4-ಇಂದು ಆಷಾಢ ಶುದ್ಧ ಏಕಾದಶಿ. ಹಿಂದುಗಳ ಪ್ರಮುಖ ಆಚರಣೆಗಳಲ್ಲಿ ಒಂದಾಗಿರುವ ಏಕಾದಶಿಯನ್ನು ಸಂಪ್ರದಾಯದಂತೆ ದೇಶದ ಹಲವೆಡೆ ಶ್ರದ್ಧಾ-ಭಕ್ತಿಗಳಿಂದ ಆಚರಿಸಲಾಗುತ್ತಿದೆ. ಮಹಾರಾಷ್ಟ್ರದ ಪ್ರಸಿದ್ಧ ಪಂಢರಾಪುರದಲ್ಲಿ 12 ಲಕ್ಷಕ್ಕೂ ಹೆಚ್ಚು ಭಕ್ತರು ಪಾಂಡುರಂಗನ ದರುಶನ ಪಡೆದರು. ಈ ವಾರಿಕರಿ ಯಾತ್ರೆಯಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಕನ್ನಡಿಗರೂ ಪಾಲ್ಗೊಂಡರು. ಪಶ್ಚಿಮ ಮಹಾರಾಷ್ಟ್ರದ ಸೋಲಾಪುರ್ ಜಿಲ್ಲೆಯಲ್ಲಿರುವ ಪಂಢರಾಪುರಕ್ಕೆ ತೆರಳಿದ ಮುಖ್ಯಮಂತ್ರಿ ದೇವೇಂದ್ರ ಫಢ್ನವಿಸ್ ಮತ್ತು ಅವರ ಪತ್ನಿ ಅಮೃತ ಅವರು ಇಂದು ಮುಂಜಾನೆ ವಿಠಲನ ದೇವಸ್ಥಾನದಲ್ಲಿ ಮಹಾ ಪೂಜೆ ನೆರವೇರಿಸಿದರು.

Pandarapura--01

ವಿಶೇಷ ಪೂಜೆ ಕೈಂಕರ್ಯದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ, ವಿಠಲನ ದರುಶನ ಪಡೆದು ತಾವು ಪುನೀತರಾಗಿ ಧನ್ಯತಾಭಾವ ಹೊಂದಿರುವುದಾಗಿ ತಿಳಿಸಿದರು.   ಆಷಾಢ ಶುದ್ಧ ಏಕಾದಶಿ ಪ್ರಯುಕ್ತ ನಡೆಯುವ ವಾರಿ ಅಥವಾ ವಾರಿಕರಿ ಯಾತ್ರೆಯಲ್ಲಿ ಲಕ್ಷಾಂತರ ಜನರ ದೇಶ ಮೂಲೆ ಮೂಲೆಗಳಿಂದ ಪಂಢರಾಪುರಕ್ಕೆ ತಂಡೋಪತಂಡವಾಗಿ ಆಗಮಿಸುತ್ತಾರೆ. ಕರ್ನಾಟಕದಿಂದಲೂ ಸಹಸ್ರಾರು ಸಂಖ್ಯೆಯ ಆಸ್ತಿಕರು ಭಾಗವಹಿಸುತ್ತಾರೆ.

ವರ್ಷದಿಂದ ವರ್ಷಕ್ಕೆ ಯಾತ್ರಿಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ರೈತ ಕುಟುಂಬಗಳಿಗೆ ಸೀಮಿತವಾಗಿದ್ದ ಈ ಯಾತ್ರೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ವೈದ್ಯರು, ಸಾಫ್ಟ್‍ವೇರ್ ಎಂಜಿನಿಯರ್‍ಗಳೂ ಪಾಲ್ಗೊಳ್ಳುತ್ತಿರುವುದು ವಿಶೇಷ.  ಯಾತ್ರೆ ಮತ್ತು ಮಹಾ ಪೂಜೆಗೆ ವಿಶೇಷ ವ್ಯವಸ್ಥೆ ಕಲ್ಪಿಸಿರುವ ರಾಜ್ಯ ಸರ್ಕಾರವು ಭಾರೀ ಬಂದೋಬಸ್ತ್ ಮಾಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin