ಆಸ್ಟ್ರೇಲಿಯಾಕ್ಕೆ 539 ರನ್ ಗುರಿ

ಈ ಸುದ್ದಿಯನ್ನು ಶೇರ್ ಮಾಡಿ

Cricket

ಪರ್ಥ್, ನ.6- ದಕ್ಷಿಣ ಆಫ್ರಿಕಾದ ಬಾಲಂಗೋಚಿಗಳ ರೋಚಕ ಆಟದ ನೆರವಿನಿಂದ ಆಸ್ಟ್ರೇಲಿಯಾಕ್ಕೆ 539 ಬೃಹತ್ ರನ್ ಗುರಿಯನ್ನು ನೀಡಿದೆ. ಮೂರನೆ ದಿನದ ಅಂತ್ಯಕ್ಕೆ 6 ವಿಕೆಟ್‍ಗಳನ್ನು ಕಳೆದುಕೊಂಡು 390 ರನ್ ಗಳಿಸಿದ್ದ ದಕ್ಷಿಣ ಆಫ್ರಿಕಾ ಇಂದು ಆರಂಭದಿಂದಲೂ ಬಿರುಸಿನ ಆಟಕ್ಕೆ ಮುಂದಾಯಿತು.

ಕಾಕ್- ಫಿಲೆಂಡರ್ ಶತಕದ ಜೊತೆಯಾಟ:

ನಿನ್ನೆ ಅಜೇಯರಾಗಿ ಉಳಿದಿದ್ದ ಕ್ಲಿಂಟನ್ ಡಿ ಕಾಕ್ ಹಾಗೂ ಫಿಲೆಂಡರ್ ಇಂದು ಆಸ್ಟ್ರೇಲಿಯಾದ ಬೌಲರ್‍ಗಳನ್ನು ದಿಟ್ಟವಾಗಿ ಎದುರಿಸಿ 7ನೆ ವಿಕೆಟ್‍ಗೆ 116 ರನ್‍ಗಳ ಜೊತೆಯಾಟ ನೀಡಿದರು.
ಈ ಜೋಡಿಯನ್ನು ಬೇರ್ಪಡಿಸಲು ಆಸೀಸ್ ನಾಯಕ ಸ್ಟೀವ್ ಸ್ಮಿತ್ ಮಾಡಿದ ಎಲ್ಲ ತಂತ್ರಗಳು ಕೈಚೆಲ್ಲಿದಾಗ 147ನೆ ಓವರ್ ಎಸೆಯಲು ಮಿಚಲ್ ಮಾರ್ಷ್‍ಗೆ ಕೈಗೆ ಚೆಂಡು ನೀಡಿದರು. ಆ ಓವರ್‍ನ ಮೊದಲ ಎಸೆತದಲ್ಲೇ 64 ರನ್ ಗಳಿಸಿದ್ದ ಡಿ ಕಾಕ್ ವೋಗ್ಸ್‍ಗೆ ಕ್ಯಾಚ್ ನೀಡಿ ಪೆವಿಲಿಯನ್‍ನತ್ತ ಹೆಜ್ಜೆ ಹಾಕಿದಾಗ ಆಸ್ಟ್ರೇಲಿಯಾದ ಪಾಳೆಯದಲ್ಲಿ ನಗುವಿನ ಅಲೆ ಚಿಮ್ಮಿತು. ಆದರೆ 8ನೆ ವಿಕೆಟ್‍ಗೆ ಜೊತೆಗೂಡಿದ ಫಿಲೆಂಡರ್ ಮತ್ತು ಮಹಾರಾಜ ಬಿರುಸಿನ ಆಟವನ್ನು ಮುಂದುವರಿಸಿದರು. ತಂಡದ ಮೊತ್ತವನ್ನು 540 ರನ್ ಮುಟ್ಟುವಂತೆ ಮಾಡಿದರು.

ಈ ಜೋಡಿಯನ್ನು ಬೇರ್ಪಡಿಸಲು ನಾಯಕ ಸ್ಮಿತ್ ತಾವೇ ಚೆಂಡನ್ನು ಕೈಗೆತ್ತಿಕೊಂಡು ಫಿಲೆಂಡರ್ (73 ರನ್, 10 ಬೌಂಡರಿ, 2 ಸಿಕ್ಸರ್)ರನ್ನು ಕ್ಲೀನ್ ಬೋಲ್ಡ್ ಮಾಡಿದರು. ಫಿಲೆಂಡರ್ ಔಟಾಗುತ್ತಿದ್ದಂತೆ ದಕ್ಷಿಣ ಆಫ್ರಿಕಾ ನಾಯಕ ಡುಪ್ಲಿಸಿಸ್ ಇನ್ನಿಂಗ್ಸ್ ಡಿಕ್ಲೇರ್ಡ್ ಘೋಷಿಸಿದರು. ಆಗ ತಂಡದ ಮೊತ್ತ 540 ರನ್‍ಗಳಾಗಿತ್ತು. ಮೊದಲ ಟೆಸ್ಟ್ ಪಂದ್ಯದಲ್ಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಕೆ.ಎ.ಮಹಾರಾಜ (41 ರನ್, 41 ಎಸೆತ 2 ಬೌಂಡರಿ, 3 ಸಿಕ್ಸರ್) ಅಜೇಯರಾಗಿ ಉಳಿದರು. ಮೊದಲ ಇನ್ನಿಂಗ್ಸ್‍ನಲ್ಲಿ 2 ರನ್‍ಗಳ ಮುನ್ನಡೆ ಸಾಧಿಸಿದ್ದ ಆಸ್ಟ್ರೇಲಿಯಾ ಈ ಪಂದ್ಯವನ್ನು ಗೆಲ್ಲಲು 539 ರನ್ ಗಳಿಸಬೇಕಾಗಿದೆ.

ದಿಢೀರ್ ಕುಸಿದ ಆಸ್ಟ್ರೇಲಿಯಾ:

539 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾದ ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ ಹಾಗೂ ಶಾನ್‍ಮಾರ್ಷ್ ಅರ್ಧಶತಕ ಜೊತೆಯಾಟ ಆಡಿ ಉತ್ತಮ ಹೋರಾಟ ನೀಡಿದರು.
ಆದರೆ ಇಲ್ಲದ ರನ್ ಕದಿಯಲು ಹೋದ ವಾರ್ನರ್ ( 35 ರನ್, 6 ಬೌಂಡರಿ) ರನೌಟ್ ಆದರೆ, ಅದೇ ಓವರ್‍ನಲ್ಲೇ ಮತ್ತೊಬ್ಬ ಆರಂಭಿಕ ಆಟಗಾರ ಶಾನ್ ಮಾರ್ಷ್ (15 ರನ್, 1 ಬೌಂಡರಿ) ರಬಾಡಗೆ ವಿಕೆಟ್ ಒಪ್ಪಿಸಿದರು. ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಆಸ್ಟ್ರೇಲಿಯಾ 25 ಓವರ್‍ಗಳಲ್ಲಿ 85 ರನ್ ಗಳಿಸಿ 2 ವಿಕೆಟ್‍ಗಳನ್ನು ಕಳೆದುಕೊಂಡಿತ್ತು.

ಸಂಕ್ಷಿಪ್ತ ಸ್ಕೋರ್:

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್: 244
ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್:242, ದ್ವಿತೀಯ ಇನ್ನಿಂಗ್ಸ್: 540/8 ಡಿಕ್ಲೇರ್ಡ್

► Follow us on –  Facebook / Twitter  / Google+

Facebook Comments

Sri Raghav

Admin