ಆಸ್ತಿ ಮುಟ್ಟುಗೋಲು ಹಾಕಿಕೊಂಡ ಮೇಲೂ ಮಗಳ ಅದ್ದೂರಿ ಮದುವೆಗೆ ರೆಡ್ಡಿಗೆ ಎಲ್ಲಿಂದ ಬಂತು ದುಡ್ಡು.?

ಈ ಸುದ್ದಿಯನ್ನು ಶೇರ್ ಮಾಡಿ

ಬಳ್ಳಾರಿ,ಅ.20- ಅಕ್ರಮ ಗಣಿಗಾರಿಕೆ ಮತ್ತು ಅದಿರು ಸಾಗಾಣೆ ಆರೋಪದಲ್ಲಿ ಜೈಲು ಪಾಲಾಗಿದ್ದ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರಿಗೆ ಸಂಬಂಧಿಸಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಸಿಬಿಐ ಹೇಳುತ್ತಲೇ ಇದೆ. ಆದರೆ ಜನಾರ್ದನ ರೆಡ್ಡಿ ತಮ್ಮ ಮಗಳ ಮದುವೆಗೆ ನೂರಾರು ಕೋಟಿ ರೂ. ವೆಚ್ಚ ಮಾಡುತ್ತಿದ್ದು , ಈ ಹಣ ಎಲ್ಲಿಂದ ಬಂತು, ಇದರ ಮೂಲ ಎಲ್ಲಿ ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಗಣಿ ಉದ್ಯಮಿ ಟಪಾಲ್ ಗಣೇಶ್ ಆಗ್ರಹಿಸಿದ್ದಾರೆ.  ಬಳ್ಳಾರಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಗಣೇಶ್, ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಇತ್ತೀಚಿನ ಚಟುವಟಿಕೆಗಳನ್ನು ಗಮನಿಸಿದರೆ ಹಲವಾರು ಸಂದೇಹಗಳು ಮೂಡುತ್ತಿವೆ ಎಂದು ಹೇಳಿದ್ದಾರೆ.

ಜನಾರ್ದನ ರೆಡ್ಡಿ ವಿರುದ್ದದ ಅಕ್ರಮ ಗಣಿಗಾರಿಕೆ ಮತ್ತು ಅದಿರು ಕಳ್ಳಸಾಗಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಸಿಬಿಐ ತನಿಖೆ ವಿಳಂಬ ಆಗುತ್ತಿರುವುದನ್ನು ಗಮನಿಸಿದರೆ ಇದರ ಮೇಲೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ಪ್ರಭಾವ ಇರುವ ಬಗ್ಗೆ ಅನುಮಾನ ಉಂಟಾಗುತ್ತಿದೆ. ರಾಜ್ಯ ಸರ್ಕಾರದ ಮೇಲೆಯೂ ರೆಡ್ಡಿ ಪ್ರಭಾವ ಇದ್ದಂತೆ ಕಾಣುತ್ತಿದೆ.
ಈ ಎಲ್ಲ ಅನುಮಾನಗಳ ಹಿನ್ನೆಲೆಯಲ್ಲಿ ನಾನು ನ್ಯಾಯಾಲಯದ ಮೆಟ್ಟಿಲು ಹತ್ತಲು ತೀರ್ಮಾನಿಸಿದ್ದೇನೆ. ಜನಾರ್ಧನ ರೆಡ್ಡಿ ನೂರಾರು ಕೋಟಿ ರೂ. ವೆಚ್ಚ ಮಾಡಿ ತಮ್ಮ ಮಗಳ ಮದುವೆ ಮಾಡುವ ಮೂಲಕ ರಾಜ್ಯದ ಜನತೆ ಮೇಲೆ ಪ್ರಭಾವ ಬೀರಲು ಹೊರಟಿದ್ದಾರೆ.

ತಮ್ಮಲ್ಲಿ ಇನ್ನು ಹಣವಿದೆ ಎಂದು ಜನತೆಗೆ ತೋರಿಸಿಕೊಂಡು ಮುಂದಿನ ಚುನಾವಣೆಯಲ್ಲಿ ಕಣಕ್ಕಿಳಿಯಲು ರೆಡ್ಡಿ ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ. ಜನಾರ್ದನ ರೆಡ್ಡಿ ಮಗಳ ಮದುವೆ ಬಗ್ಗೆ ನಮಗೆ ಬೇಸರವಿಲ್ಲ. ಮಗಳು ಎಲ್ಲರಿಗೂ ಮಗಳೇ. ಆದರೆ ಜನಾರ್ದನ ರೆಡ್ಡಿ ವೆಚ್ಚ ಮಾಡುತ್ತಿರುವ ಹಣದ ಮೂಲದ ಬಗ್ಗೆ ತನಿಖೆಯಾಗಬೇಕೆಂಬುದು ನನ್ನ ಒತ್ತಾಯವಾಗಿದೆ ಎಂದು ಗಣೇಶ್ ಹೇಳಿದ್ದಾರೆ.  ಈಗಲೂ ನನಗೆ ಜೀವ ಬೆದರಿಕೆ ಇದೆ. ಯಾವ ಕ್ಷಣಕ್ಕೆ ಏನು ನಡೆಯುತ್ತದೋ ಗೊತ್ತಿಲ್ಲ. ಈ ಹಿಂದೆ ನನ್ನ ಮೇಲೆ ಮರಣಾಂತಿಕ ಹಲ್ಲೆ ನಡೆದಿತ್ತು. ರೆಡ್ಡಿ ವಿರುದ್ದ ದನಿ ಎತ್ತುವವನು ನೀನೊಬ್ಬನೇ. ನಿನಗೆ ಹೆಚ್ಚು ಆಯುಷ್ಯ ಇಲ್ಲವೆಂದು ನನ್ನ ಸ್ನೇಹಿತರು ಯಾವಾಗಲೂ ಹೇಳುತ್ತಿರುತ್ತಾರೆ ಎಂದು ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin