ಆ್ಯಂಬುಲೆನ್ಸ್ ಡಿಕ್ಕಿ : ಬೈಕ್ ಸವಾರರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.14- ಅತಿವೇಗ ಹಾಗೂ ಅಜಾಗರೂಕತೆಯಿಂದ ಆ್ಯಂಬುಲೆನ್ಸ್ ವಾಹನ ಚಾಲನೆ ಮಾಡಿಕೊಂಡು ಬಂದ ಚಾಲಕ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಸಾವನ್ನಪ್ಪಿರುವ ಘಟನೆ ಅಶೋಕನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಶಬಾಜ್‍ಪಾಷ(20), ಸಯ್ಯದ್ ತನ್ವೀರ್(17) ಮೃತಪಟ್ಟ ಬೈಕ್ ಸವಾರರು.

ಇಂದು ಬೆಳಗ್ಗೆ 1 ಗಂಟೆ ಸುಮಾರಿನಲ್ಲಿ ಯಮಹಾ ಆರ್‍ಎಕ್ಸ್ ಬೈಕ್‍ನಲ್ಲಿ ಈ ಇಬ್ಬರು ಸ್ನೇಹಿತರು ಹೊಸೂರು ರಸ್ತೆಯ ಆನೆಪಾಳ್ಯ ಜಂಕ್ಷನ್ ಕಡೆಯಿಂದ ಬನ್ನೇರುಘಟ್ಟ ರಸ್ತೆಯ ಇಂಡಿಯನ್ ಕ್ರಿಶ್ಚಿಯನ್ ಸಿಮೆಟರಿ ಬಳಿ ಹೋಗುತ್ತಿದ್ದಾಗ ಎದುರಿನಿಂದ ಅತಿವೇಗವಾಗಿ ಬಂದ ಆ್ಯಂಬುಲೆನ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಕೆಳಗೆ ಬಿದ್ದು ಗಂಭೀರ ಗಾಯಗೊಂಡರು.

ತಕ್ಷಣ ಇವರಿಬ್ಬರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರು ಪರೀಕ್ಷಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದರ ಮೇರೆಗೆ ಅಲ್ಲಿ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಿಸದೆ ಇವರಿಬ್ಬರು ಮೃತಪಟ್ಟಿದ್ದಾರೆ. ಆ್ಯಂಬುಲೆನ್ಸ್ ವಾಹನ ಚಾಲಕನ ಅಜಾಗರೂಕತೆ, ನಿರ್ಲಕ್ಷ್ಯ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ಅಶೋಕನಗರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments